ಪ್ರಕೃತಿಯ ಭಾಗವಾಗಿ ಮನುಷ್ಯ ಬದುಕಬೇಕೇ ಹೊರತು, ಪ್ರಕೃತಿ ಇರುವುದೇ ನನ್ನ ಉಪಯೋಗಕ್ಕಾಗಿ, ವಿಲಾಸಕ್ಕಾಗಿ ಎನ್ನುತ್ತ ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ, ಮನುಷ್ಯ ಕೂಡ ಕ್ರಿಮಿ-ಕೀಟಗಳಂತೆ ಮಣ್ಣಿನ ಅಡಿಯಲ್ಲಿ ಸಿಕ್ಕಿ ಸಾಯುವುದು ನಿಶ್ಚಿತ. ಇವತ್ತು ವಯನಾಡಿಗಾದದ್ದು ನಮ್ಮಲ್ಲೂ ಆಗಬಹುದಲ್ಲವೇ?
ಅಂಕೋಲಾದ ಶಿರೂರು ಗುಡ್ಡ ಕುಸಿದು ಹತ್ತಕ್ಕೂ ಅಧಿಕ ಜನ ಜಲಸಮಾಧಿಯಾದ ಸುದ್ದಿ ಮರೆಯಾಗುವಷ್ಟರಲ್ಲಿ, ಕೇರಳದ ವಯನಾಡು ದುರಂತ ಬಂದು ಅಪ್ಪಳಿಸಿದೆ. ಇದು ಅಂತಿಂಥದ್ದಲ್ಲ, ನೋವು ಕೊಟ್ಟು ಕಾಡುವಂಥದ್ದು. ಹಾಗೆ ನೋಡಿದರೆ, ಶಿರೂರು ಗುಡ್ಡ ಕುಸಿತ ಮನುಷ್ಯನಿಗೆ ನೀಡಿದ ಮುನ್ಸೂಚನೆಯಂತಿದೆ. ಆದರೆ ಅದರಿಂದ ಎಚ್ಚೆತ್ತುಕೊಳ್ಳಬೇಕಾದ ಮನುಷ್ಯ ಮಾತ್ರ, ಅದರ ಪಾಡಿಗೆ ಅದು, ನನ್ನ ಪಾಡಿಗೆ ನಾನು ಎಂಬಂತಿದ್ದ. ಜನ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸರ್ಕಾರ- ಕ್ಷಣ ಕಾಲ ಬೆಚ್ಚಿ, ನಂತರ ನಮಗಾಗಿಲ್ಲ ಎಂದು ಸುಮ್ಮನಾಗಿದ್ದರು.
ಶಿರೂರಿನಲ್ಲಿ ಗುಡ್ಡ ಕುಸಿದು ನದಿಗೆ ಬಿದ್ದ ರಭಸಕ್ಕೆ, ನದಿಯ ನೀರು ಆಚೆ ದಡದಲ್ಲಿದ್ದ ಮನೆಗಳ ಮೇಲೆ ಅಪ್ಪಳಿಸಿತು, ಮನೆಗಳು ನೀರಿನಲ್ಲಿ ಮುಳುಗಿಹೋದವು. ಜನ-ಜಾನುವಾರು ನೀರಿನೊಂದಿಗೆ ಬೆರೆತು ಮಣ್ಣಾದರು. ಇದೇ ರೀತಿ ವಯನಾಡಿನಲ್ಲೂ ಆಗಿದೆ. ನದಿಯ ಅಕ್ಕಪಕ್ಕ ಊರಿದೆ. ಊರಿನ ಬೆನ್ನಿಗೆ ಬೆಟ್ಟವಿದೆ. ಲೆಕ್ಕಕ್ಕೆ ಸಿಗದಷ್ಟು ಮಳೆ ಸುರಿದಾಗ ಗುಡ್ಡ ಕುಸಿದು ನದಿಯ ಮೇಲೆ ಬಿದ್ದಿದೆ. ಮೇಲಿನಿಂದ ಹರಿದುಬಂದ ಮಳೆ ನೀರು ಹೋಗಲು ಜಾಗವಿಲ್ಲದೆ ಮನೆಗಳ ಮೇಲೆ ನುಗ್ಗಿದೆ. ಇಡೀ ಊರನ್ನೇ ಒಳಗೆಳೆದುಕೊಂಡಿದೆ. ಶಿರೂರಿನದು ಟ್ರೈಲರ್ನಂತಿದ್ದರೆ, ವಯನಾಡಿನದು ಪೂರ್ಣ ಸಿನೆಮಾದಂತಿದೆ.
ಏತನ್ಮಧ್ಯೆ, ವಯನಾಡಿನ ದುರಂತವನ್ನು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ವಯನಾಡಿನಲ್ಲಿ ಬಹುಸಂಖ್ಯಾತರು ಮುಸ್ಲಿಮರಾಗಿರುವುದು, ಅದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವುದು, ಆ ವಯನಾಡು ಜಲಸಮಾಧಿಯಾಗಿರುವುದು, ಕೇರಳದಲ್ಲಿ ಎಡಪಂಥೀಯ ಸರ್ಕಾರವಿರುವುದು- ಅವರಿಗೆ ಸಂಭ್ರಮದ ಸಂಗತಿಯಾಗಿದೆ. ಈ ಅವಿವೇಕಿಗಳ ಅತಿರೇಕದ ಮೂಲ- ಕಳೆದ ಹತ್ತು ವರ್ಷಗಳಲ್ಲಿ ರಾಹುಲ್ ಗಾಂಧಿಯನ್ನು ‘ಪಪ್ಪು’ ಎಂದು ಪ್ರಚಾರ ಮಾಡಿದವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ‘ಪಪ್ಪು ಮಾನಸಿಕತೆ’ಯ ಮಂದಿ ನಿನ್ನೆ ಸಂಸತ್ತಿನಲ್ಲಿ ದಮನಿತರ ಪರವಾಗಿ ನಿಂತ ರಾಹುಲ್ ಗಾಂಧಿಯ ಜಾತಿ ಕೇಳಿ, ಜಾತಿ ಅಹಂಕಾರ ಮೆರೆದಿದ್ದಾರೆ. ಒಡಲಾಳದ ಕೊಳಕನ್ನು ಹೊರಗೆ ಹಾಕಿದ್ದಾರೆ. ಎಷ್ಟಾದರೂ ಅವರು ಗಾಂಧಿ ಕೊಂದು ಸಂಭ್ರಮಿಸಿದವರಲ್ಲವೇ, ಇರಲಿ.
ಇವರ ನಡುವೆಯೇ ಸಶಸ್ತ್ರ ಪಡೆಗಳು, ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸರು, ಸ್ವಯಂ ಸೇವಾಸಕ್ತರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಮನುಷ್ಯತ್ವಕ್ಕಾಗಿ ತುಡಿವ ಸಾವಿರಾರು ಜನ ವಯನಾಡಿನ ಸಂತ್ರಸ್ತರಿಗೆ ಅನ್ನ, ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಸರತಿ ಸಾಲಿನಲ್ಲಿ ನಿಂತು ರಕ್ತದಾನ ಮಾಡಿದ್ದಾರೆ. ಸಂಭ್ರಮಿಸಿದವರ ಸಂಖ್ಯೆ ಕಡಿಮೆ ಇದ್ದರೆ, ಮಾನವೀಯತೆ ಮೆರೆದವರ ಸಂಖ್ಯೆ ಹೆಚ್ಚಾಗಿರುವುದು- ದೇಶದಲ್ಲಿ ಮನುಷ್ಯತ್ವವಿನ್ನೂ ಉಸಿರಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಹುಲ್ ಜಾತಿಯನ್ನು ಪ್ರಶ್ನಿಸಿದ ವಿಕೃತಿಗೆ ಮೋದಿ ಚಪ್ಪಾಳೆ ನಾಚಿಕೆಗೇಡು
ವಯನಾಡಿನ ದುರಂತ ಹೊಸದೇನಲ್ಲ. ಐದಾರು ವರ್ಷಗಳ ಹಿಂದೆ, ಇದೇ ವಯನಾಡು ಭಾರಿ ಪ್ರವಾಹ, ಭೂ ಕುಸಿತದಿಂದ ಅನಾಹುತಕ್ಕೆ ಸಿಕ್ಕಿ ನಲುಗಿತ್ತು. ಕೇರಳ ಈ ಹಿಂದೆಯೂ ದಿಢೀರ್ ಪ್ರವಾಹಗಳನ್ನು, ಭೂಕುಸಿತಗಳನ್ನು, ಹವಾಮಾನ ವೈಪರೀತ್ಯಗಳನ್ನು ಕಂಡ ರಾಜ್ಯವೇ ಆದರೂ, ಪ್ರಕೃತಿಯ ಮೇಲೆ ನಡೆಯುತ್ತಿದ್ದ ನಿರಂತರ ದಾಳಿ ಮಾತ್ರ ನಿಲ್ಲಲಿಲ್ಲ. ವ್ಯವಸಾಯಕ್ಕಾಗಿ, ರಸ್ತೆಗಳಿಗಾಗಿ, ಗಣಿಗಾರಿಕೆಗಾಗಿ, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ, ರೆಸಾರ್ಟ್ಗಳಿಗಾಗಿ ಬೆಟ್ಟ ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕಡಿಯುವುದು, ಅವುಗಳ ಶಕ್ತಿ-ಸಾಮರ್ಥ್ಯವನ್ನು ಕುಗ್ಗಿಸುವುದು ನಡೆದೇ ಇತ್ತು. ಪ್ರಕೃತಿಗೆ ಆಘಾತವನ್ನುಂಟುಮಾಡದೆ, ವೈಜ್ಞಾನಿಕ ದೃಷ್ಟಿಕೋನದಿಂದ ಕೂಡಿದ ಅಭಿವೃದ್ಧಿಯತ್ತ ಜನ ಮತ್ತು ಸರ್ಕಾರ ಗಮನ ಹರಿಸಲಿಲ್ಲ. ಪರಿಸರತಜ್ಞರು ಕಾಲ ಕಾಲಕ್ಕೆ ನೀಡಿದ ಎಚ್ಚರಿಕೆಗೂ ಕಿವಿ ಕೊಡಲಿಲ್ಲ.
ಪರಿಸರತಜ್ಞ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಯು, ಪಶ್ಚಿಮಘಟ್ಟ ಪ್ರದೇಶದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಕುರಿತು ಅಧ್ಯಯನ ಮಾಡಿ, 2011ರಲ್ಲಿಯೇ ವರದಿ ನೀಡಿತ್ತು. ಆ ಸಮಿತಿಯ ವರದಿಯಲ್ಲಿ ಅರಣ್ಯನಾಶ, ಅತಿಕ್ರಮಣ, ಅನಿಯಂತ್ರಿತ ಅಭಿವೃದ್ಧಿ ಕಾರ್ಯಗಳು ಹಾಗೂ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟ ಪ್ರದೇಶಕ್ಕೆ ಎದುರಾಗಿರುವ ಅಪಾಯಗಳ ಕುರಿತು ಸ್ಪಷ್ಟವಾಗಿ ತಿಳಿಸಿತ್ತು. ಅಷ್ಟೇ ಅಲ್ಲ, ಅತಿ ಮಳೆ, ಪ್ರವಾಹ, ಭೂಕುಸಿತದಂತಹ ದುರಂತಗಳು ಸಂಭವಿಸಬಹುದು ಎಂಬುದನ್ನು ಸೂಚಿಸಿತ್ತು. ಸರ್ಕಾರಗಳು ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಕುರಿತು ವಿವರಿಸಿತ್ತು. ಪರಿಹಾರವನ್ನೂ ಪ್ರಸ್ತಾಪಿಸಿತ್ತು. ಆದರೆ, ಗಾಡ್ಗೀಳ್ ಸಮಿತಿಯ ವರದಿ ಅಭಿವೃದ್ಧಿಯ ಬೆನ್ನೇರಿ ಹೋಗುವ ಸರ್ಕಾರಗಳಿಗೆ, ಭೂದಾಹದ ಶ್ರೀಮಂತರಿಗೆ, ರಾಜಕೀಯ ನಾಯಕರನ್ನು ನಿಯಂತ್ರಿಸುವ ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಬೇಡವಾಗಿತ್ತು. ಬೇಡವೆಂದು ನೇರವಾಗಿ ತಿರಸ್ಕರಿಸುವ ಬದಲು ಸರ್ಕಾರ ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಅಲ್ಪಸ್ವಲ್ಪ ಬದಲಾವಣೆಗಳನ್ನು ಬಯಸಿತು. ಬದಲಾದ ಕಸ್ತೂರಿರಂಗನ್ ಸಮಿತಿಯ ಶಿಫಾರಸ್ಸುಗಳನ್ನು ಕೂಡ ಅನುಷ್ಠಾನಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಲಿಲ್ಲ. ಜೊತೆಗೆ ಪಟ್ಟಭದ್ರ ಹಿತಾಸಕ್ತಿಗಳೂ ಬಿಡಲಿಲ್ಲ.
ಅರಣ್ಯದ ಅಂಚಿನಲ್ಲಿರುವ ಸಣ್ಣ ಹಿಡುವಳಿದಾರರು ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳನ್ನು ವಿರೋಧಿಸುತ್ತಾರೆ. ಏಕೆಂದರೆ, ಅವರಿಂದ ಅರಣ್ಯ ಅತಿಕ್ರಮಣವಾಗಿದೆ. ಆದರೆ ಅದು ಅವರ ಬದುಕಿಗೆ ಆಸರೆಯಾಗಿದೆ. ಇಂತಹ ಬಡ ಬೇಸಾಯಗಾರರನ್ನು ಮತ್ತು ಅರಣ್ಯದಂಚಿನಲ್ಲಿರುವ ಬುಡಕಟ್ಟು ಸಮುದಾಯಗಳ ಸಮಸ್ಯೆಯನ್ನು ಮುಂದಿಟ್ಟುಕೊಂಡ ಕಾಡುಗಳ್ಳರು, ಗಣಿ ಉದ್ಯಮಿಗಳು, ರೆಸಾರ್ಟ್ ಮಾಲೀಕರು ವರದಿ ವಿರೋಧಿಸುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ನಿಂತ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ವರದಿ ಅನುಷ್ಠಾನವಾಗದಂತೆ ನೋಡಿಕೊಂಡು ಬರುತ್ತಿದ್ದಾರೆ.
ಹಾಗಾಗಿ ಪ್ರಕೃತಿ ಮೇಲೆ ದಾಳಿ ಎನ್ನುವುದು ನಿತ್ಯ ನಿರಂತರವಾಗಿದೆ. ನಮ್ಮ ಸ್ವಾರ್ಥಕ್ಕಾಗಿ ಅರಣ್ಯನಾಶ, ಅತಿಕ್ರಮಣ, ಗಣಿಗಾರಿಕೆ ನಡೆಸುತ್ತಲೇ ಇದ್ದೇವೆ. ಪ್ರವಾಸೋದ್ಯಮ, ಮೂಲಸೌಕರ್ಯ, ಅಭಿವೃದ್ಧಿ ನೆಪದಲ್ಲಿ ಸಾರ್ವಜನಿಕರ ತೆರಿಗೆ ಹಣವಾದ ಕೋಟ್ಯಂತರ ರೂಪಾಯಿಗಳು ನೀರಿನಂತೆ ಹರಿದು ಹೋಗುತ್ತಲೇ ಇದೆ. ವಿಲಾಸಿ ಬದುಕು ಬೇಕು, ಅಭಿವೃದ್ಧಿಯೂ ಆಗಬೇಕು- ದುರಂತ ಸಂಭವಿಸಿದಾಗ ಮಾತ್ರ ಮತ್ತೊಬ್ಬರನ್ನು ದೂರುವುದು ಸಾಮಾನ್ಯವಾಗಿದೆ.
ಪ್ರಕೃತಿಯ ಭಾಗವಾಗಿ ಮನುಷ್ಯ ಬದುಕಬೇಕೇ ಹೊರತು, ಪ್ರಕೃತಿ ಇರುವುದೇ ನನ್ನ ಉಪಯೋಗಕ್ಕಾಗಿ, ವಿಲಾಸಕ್ಕಾಗಿ ಎನ್ನುತ್ತ ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ, ಮನುಷ್ಯ ಕೂಡ ಕ್ರಿಮಿ-ಕೀಟಗಳಂತೆ ಮಣ್ಣಿನ ಅಡಿಯಲ್ಲಿ ಸಿಕ್ಕಿ ಸಾಯುವುದು ನಿಶ್ಚಿತ. ಇವತ್ತು ವಯನಾಡಿನಲ್ಲಾದ ಸಾವು, ನೋವು, ನಷ್ಟಗಳು, ವಯನಾಡಿನಂತೆಯೇ ಭೂ ಪ್ರದೇಶ ಹೊಂದಿರುವ ನಮ್ಮ ಕೊಡಗಿನಲ್ಲೂ ಆಗಬಹುದು. ಉತ್ತರ ಕರ್ನಾಟಕದಲ್ಲೂ ಸಂಭವಿಸಬಹುದು. ಎಚ್ಚೆತ್ತುಕೊಳ್ಳಬೇಕಾದ್ದು, ಸರಳವಾಗಿ ಬದುಕಬೇಕಾದ್ದು, ಸಾಕು ಎನಿಸಬೇಕಾದ್ದು- ಮನುಷ್ಯರದಾಗಬೇಕು.
