ಕಾವೇರಿ ನದಿ ದಡದಲ್ಲಿ ಅಸ್ಥಿ ವಿಸರ್ಜನೆ ಕ್ರಿಯೆ ನಿರ್ಬಂಧಕ್ಕೆ ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಹಾಗೂ ಶ್ರೀರಂಗಪಟ್ಟಣ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಅವರು, “ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿತೀರದಲ್ಲಿ ಅಸ್ಥಿ ವಿಸರ್ಜನೆ ಮಾಡಲು ಜಿಲ್ಲಾಡಳಿತ ಮಾರ್ಗಸೂಚಿ ಮಾಡಿ, ಅದರ ಪ್ರಕಾರ ಅವಕಾಶ ಕಲ್ಪಿಸಲಿ. ಬೇರೆ ಸ್ಥಳಗಳಲ್ಲಿ ಸಂಪೂರ್ಣ ನಿಷೇಧಿಸಿ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು” ಎಂದರು.
“ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಮೊದಲಿಂದಲೂ ಅಸ್ಥಿ ವಿಸರ್ಜನೆ ಮಾಡುತ್ತಿದ್ದರು. ಈಗ ಎಲ್ಲ ನದಿಯ ದಂಡೆಯಲ್ಲಿ ಅಸ್ಥಿ ವಿಸರ್ಜನೆ ಕ್ರಿಯೆಯನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ. ಕಾವೇರಿ ನದಿಯ ಎಲ್ಲ ಕಡೆ ಅಸ್ಥಿ ವಿಸರ್ಜನೆ ಕ್ರಿಯೆ ಮಾಡುವುದರಿಂದ ಅರೆಬೆಂದ ಮೂಳೆಗಳು, ಬಟ್ಟೆಗಳು, ಪ್ಲಾಸ್ಟಿಕ್‌ಗಳು, ಕೆಲವು ಹಾನಿಕಾರಕವಾದ ವಸ್ತುಗಳನ್ನು ಕಾವೇರಿ ನದಿಯಲ್ಲಿ ಚೆಲ್ಲುತ್ತಾರೆ. ಅದರಿಂದ ಕಾವೇರಿ ನದಿ ಮಲಿನವಾಗುತ್ತಿದೆ. ಮಾಲಿನ್ಯಕರವಾದ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಲಕ್ಷಾಂತರ ಜನ-ಜಾನುವಾರುಗಳು, ಪಕ್ಷಿಗಳು, ಜಲಜಂತುಗಳು ಮಲಿನ ನೀರನ್ನು ಕುಡಿದು ಆರೋಗ್ಯ ಹದಗೆಡುತ್ತಿದೆ. ಕಾವೇರಿ ನದಿಯನ್ನು ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಹೊಣೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಜಲಸಂಪನ್ಮೂಲ ಇಲಾಖೆ ಈಗಲಾದರೂ ಎಚ್ಚೆತ್ತು ಅಸ್ಥಿ ವಿಸರ್ಜನೆ ಕಾರ್ಯವನ್ನು ಕಾನೂನಾತ್ಮಕವಾಗಿ ನಿರ್ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ: ನ್ಯಾ. ಎಂ ಭೃಂಗೇಶ್
“ಅಸ್ಥಿ ವಿಸರ್ಜನೆ ಕ್ರಿಯೆ ವೇಳೆ ಕಾವೇರಿ ನದಿಗೆ ಯಾವುದೇ ರೀತಿಯ ಮಾಲಿನ್ಯವಾಗದಂತೆ ಷರತ್ತುಗಳನ್ನು ವಿಧಿಸಬೇಕು. ಮೂಲ ಸ್ಥಳಗಳಲ್ಲಿ ಮಾತ್ರ ಅವಕಾಶ ಕಲ್ಪಿಸಬೇಕು. ಬೇರೆ ಬೇರೆ ಸ್ಥಳಗಳನ್ನು ನಿಷೇಧಿಸಬೇಕು. ನದಿಗೆ ಹಾನಿ ಹಾಗೂ ಮಾಲಿನ್ಯ ಮಾಡಿದವರ ವಿರುದ್ಧ ದಾವೆ ಹೂಡಲು ಅವಕಾಶ ಕಲ್ಪಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಸರ್ಕಾರ ಕಾನೂನಾತ್ಮಕವಾದ ಮಾರ್ಗಸೂಚಿಗಳನ್ನು ಶೀಘ್ರವೇ ರೂಪಿಸಬೇಕು” ಎಂದು ಆಗ್ರಹಿಸಿದರು.
