ಹೋರಾಟಗಾಥೆ | ಮರೆಯಲಾದೀತೇ ಒಳಮೀಸಲಾತಿಯ ನೋವಿನ ಚರಿತೆ?

Date:

Advertisements
ತ್ರಾಸದಾಯಕ ಕಾನೂನು ಹೋರಾಟ, ಅದರ ನೆಪದಲ್ಲಿ ಸರ್ಕಾರಗಳು ಆಡಿದ ನವರಂಗಿ ಆಟಗಳು, ಪರಿಶಿಷ್ಟರಲ್ಲಿನ ಸ್ಪೃಶ್ಯ ಜಾತಿಗಳಿಗೆ ಮನವರಿಕೆ ಮಾಡಲು ನಡೆದ ಪ್ರಯತ್ನ, ಮಾದಿಗ ಸಮುದಾಯ ಛಲವಾದಿ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದ ಮಹತ್ವದ ನಡೆಗಳು- ಇವೆಲ್ಲವೂ ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಹೋರಾಟದ ಅವಿಸ್ಮರಣೀಯ ಹೆಜ್ಜೆಗುರುತುಗಳು. 

ಒಳಮೀಸಲಾತಿ ಎಂದೇ ಗುರುತಿಸಲ್ಪಡುವ ‘ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ’ ಹೋರಾಟ ಸ್ವತಂತ್ರ ಭಾರತದಲ್ಲಿ ನಡೆದ ಸುದೀರ್ಘ ಮೀಸಲಾತಿ ಚಳವಳಿ ಎಂದರೆ ತಪ್ಪಾಗಲಾರದು. ಈ ಕಲ್ಲು ಮುಳ್ಳಿನ ಹಾದಿಯಲ್ಲಿ ಸವೆಸಿದ ಪಾದಗಳೆಷ್ಟು, ಹರಿದ ಕಣ್ಣೀರೆಷ್ಟು, ಹಸಿದ ಹೊಟ್ಟೆಗಳೆಷ್ಟು, ಪೆಟ್ಟು ತಿಂದ ಮೈಗಳೆಷ್ಟು..? ತಾರ್ಕಿಕ ಅಂತ್ಯ ದೊರೆತಿರುವ ಈ ಸಂದರ್ಭದಲ್ಲಿ ಹಿಂದಣ ಹೆಜ್ಜೆಗಳನ್ನು ಮೆಲುಕು ಹಾಕಿದರೆ, ಸಂತಸ, ನೋವುಗಳಿಂದ ಬೆರೆತ ಬೆಚ್ಚನೆಯ ಕಂಬನಿ ಹರಿಯುತ್ತದೆ. ಮೂವತ್ತು ವರ್ಷಗಳ ಈ ಸುದೀರ್ಘ ಹೋರಾಟದ ಏಳುಬೀಳುಗಳು ಮೈ ನಡುಗಿಸುತ್ತವೆ. ಇದು ಅಕ್ಷರಶಃ ಸಮುದಾಯದ ಗೆಲುವು, ಸ್ವಾಭಿಮಾನದ ಅಚ್ಚಳಿಯದ ಹೆಜ್ಜೆ ಗುರುತು.

ಆಂಧ್ರದಲ್ಲಿ ಆರಂಭವಾದ ಮಾದಿಗ ದಂಡೋರ ಹೋರಾಟದ ಕಥೆ ಬದಿಗಿರಲಿ. ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಹೋರಾಟ ಚರಿತ್ರೆ ಈ ನೆಲದ ಅವಕಾಶ ವಂಚಿತರ ನೆತ್ತರನ್ನು ಕುದಿಸಿದೆ. ಈ ಆಂದೋಲನ ಸರ್ಕಾರಗಳನ್ನು ಕೆಡವಿದೆ, ಹೊಸ ಸರ್ಕಾರಗಳನ್ನು ತಂದಿದೆ. ರಾಜಕೀಯ ನಾಯಕರನ್ನು ವಿಚಲರನ್ನಾಗಿಸಿದೆ. ಚಳವಳಿಯ ನೋವುಗಳನ್ನು ದಾಖಲಿಸುವ ಸಮಯವಿದು.

ಆಂಧ್ರದಲ್ಲಿ ಆರಂಭವಾದ ದಂಡೋರ, ಕರ್ನಾಟಕಕ್ಕೂ ಕಾಲಿಟ್ಟಿತು. ಮಂದಕೃಷ್ಣ ಮಾದಿಗ ಅವರು ಮೊದಲಿನಿಂದಲೂ ರಾಜಕೀಯ ಪಕ್ಷಗಳ ಮರ್ಜಿಯಲ್ಲಿ ಇದ್ದಾರೆಂದು ಗುರುತಿಸಿದ ಕರ್ನಾಟಕದ ಮಾದಿಗ ಮೀಸಲಾತಿ ಹೋರಾಟಗಾರರು ಭಿನ್ನ ಹೆಜ್ಜೆಗಳನ್ನು ಇಟ್ಟಿದ್ದರು.

Advertisements

1997ರ ಸೆಪ್ಟೆಂಬರ್ 5ರಂದು ದಂಡೋರ ರಾಜಧಾನಿ ಬೆಂಗಳೂರಲ್ಲಿ ಉದ್ಘಾಟನೆಯಾಗುತ್ತದೆ. ಮಂದಕೃಷ್ಣರ ರಾಜಕೀಯ ನಿಲುವುಗಳು ಇಂದು ಹೇಗಿವೆಯೋ ಅಂದು ಕೂಡ ಹಾಗೇ ಇದ್ದವು ಎಂಬುದನ್ನು ಹೋರಾಟಗಾರರು ಮೆಲುಕು ಹಾಕುತ್ತಾರೆ. ಹೀಗಾಗಿ 1997ರ ಅದೇ ದಿನ ರಾಯಚೂರಿನಲ್ಲಿ ‘ಮಾದಿಗರ ಸ್ವಾಭಿಮಾನದ ಹೋರಾಟ’ ಶುರುವಾಗುತ್ತದೆ. ಅದರ ಮುಂದುವರಿದ ಭಾಗವಾಗಿ 1998ರಲ್ಲಿ ಎರಡು ದಿನಗಳ ಕಾರ್ಯಾಗಾರ ರಾಯಚೂರಲ್ಲಿ ನಡೆಯುತ್ತದೆ. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟದ ಮೂಲೆಮೂಲೆಗಳಿಂದ ಸಮುದಾಯದ ಜನ ಹರಿದು ಬರುತ್ತಾರೆ. ಆಗ ಮಾದಿಗರನ್ನು ಸಂಘಟಿಸುತ್ತಿದ್ದವರು ಕಾಂಗ್ರೆಸ್ಸಿನ ಹಿರಿಯ ನಾಯಕ ಜಿ.ರಾಮಕೃಷ್ಣ. ಆದರೆ ಪಕ್ಷಕ್ಕಿಂತ ಸಮುದಾಯ ಮುಖ್ಯ ಎಂಬ ಖಚಿತತೆ ಅವರಿಗಿತ್ತು. ಅಂಬೇಡ್ಕರ್, ಕಾನ್ಶಿರಾಮ್ ಹಾದಿಯಲ್ಲಿ ಚಳಿವಳಿ ನಡೆಯಬೇಕು, ಸಾಂಸ್ಕೃತಿಕ ತಳಹದಿಯೇ ಪ್ರಧಾನವಾಗಿರಬೇಕು ಎಂಬ ಸ್ವಷ್ಟತೆ ಹೋರಾಟಗಾರರಿಗಿತ್ತು. ಕಾರ್ಯಾಗಾರದ ಆ ರಾತ್ರಿ ಜಿ.ರಾಮಕೃಷ್ಣ ಅಕ್ಷರಶಃ ಕಣ್ಣೀರು ಹಾಕಿದ್ದರು. ಭಾವುಕರಾದ ಅವರು ಯುವ ಮಿತ್ರರ ಕೈ ಹಿಡಿದು ಗಳಗಳನೆ ಅಳುತ್ತಾ, “ಈವರೆಗೆ ಒಬ್ಬನೇ ಇದ್ದೀನಿ ಅನಿಸಿತ್ತು. ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದು ನನ್ನನ್ನು ಭಾವುಕನನ್ನಾಗಿಸಿದೆ” ಎಂದಿದ್ದರು. ದಂಡೋರ ಮತ್ತು ಸ್ವಾಭಿಮಾನಿ ಮಾದಿಗ ಹೋರಾಟ ಪ್ರತ್ಯೇಕವಾಗಬಾರದು, ಒಟ್ಟಿಗೆ ನಡೆಯಬೇಕೆಂಬ ಆಶಯಗಳನ್ನು ಹೋರಾಟಗಾರರು ಹೊಂದಿದ್ದು ಸುಳ್ಳಲ್ಲ. 1999ರಲ್ಲಿ ಸಮಿತಿಯೊಂದು ರಚನೆಯಾಯಿತು. ಜಿ.ರಾಮಕೃಷ್ಣ, ಎಚ್.ಆಂಜನೇಯ ಅದರ ಮುಂದಾಳತ್ವ ವಹಿಸಿದರು. ಕೆ.ಎಚ್.ಮುನಿಯಪ್ಪ ಅದರ ಭಾಗವಾಗಿದ್ದರು. ತಮ್ಮ ಜಾತಿಯ ರಾಜಕೀಯ ಮಿತ್ರರು ಅಗ್ರೆಸಿವ್ ಆಗದಿದ್ದಾಗಲೆಲ್ಲ ರಾಮಕೃಷ್ಣ ಅವರು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದರು. “ನೀವು ಜಾತಿ ಸಂಘಟನೆಗಳನ್ನು ಮಾಡುತ್ತಿದ್ದೀರಿ” ಎಂದು ರಾಮಕೃಷ್ಣ ಅವರಿಗೆ ಕಾಂಗ್ರೆಸ್ಸಿನಿಂದ ನೋಟಿಸ್‌ಗಳು ಬಂದಾಗ, ಚಳವಳಿಯನ್ನು ಹುಡುಗರಿಗೆ ವಹಿಸುವ ನಿರ್ಧಾರಕ್ಕೆ ಬರುತ್ತಾರೆ. ಸರ್ಕಾರಿ ಉದ್ಯೋಗಗಳಿಂದ ಬಂದಂತಹ ಹೋರಾಟಗಾರರೂ ಇದ್ದರು. ಅಂಥವರ ಕೈಗೆ ಸಂಘಟನೆಯನ್ನು ಒಪ್ಪಿಸಿದರು.

ಇದನ್ನು ಓದಿದ್ದೀರಾ?: ಒಳಮೀಸಲಾತಿಗೆ ಸುಪ್ರೀಂ ಕೋರ್ಟ್‌ ಸಮ್ಮತಿ; ನ್ಯಾಯಾಧೀಶರು ಹೇಳಿದ್ದೇನು? ಹಿನ್ನೆಲೆ ಏನು?

2002ರಲ್ಲಿ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ (MRHS) ಹುಟ್ಟಿಕೊಳ್ಳುತ್ತದೆ. ಅದು 2002ರ ಆಗಸ್ಟ್ 15ರಂದು ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡ ‘ಕಪ್ಪು ಭಾವುಟ’ ಪ್ರದರ್ಶನವು ಚಳವಳಿಯ ಮಹತ್ವದ ಹೆಜ್ಜೆಗಳಲ್ಲಿ ಒಂದು. ಸ್ವಾತಂತ್ರ್ಯ ದಿನದಂದು ಅಪಾರ ಸಂಖ್ಯೆಯ ಕಪ್ಪು ಭಾವುಟಗಳು ಹಾರಾಡಿದ್ದು ನೋಡಿ ಅಂದಿನ ಕಾಂಗ್ರೆಸ್ ಸರ್ಕಾರ ಬೆಚ್ಚಿತು. “ನಿನ್ನ ಎದುರಾಳಿಯನ್ನು ಸೋಲಿಸಲಾಗದಿದ್ದರೂ ಅವನ ಎದೆಯಲ್ಲಿ ನಡುಕ ಹುಟ್ಟಿಸುವುದನ್ನು ಬಿಡಬೇಡ” ಎಂದಿದ್ದ ಕಾನ್ಶಿರಾಮ್ ಅವರ ಎಚ್ಚರಿಕೆ ನುಡಿಗೆ ಅನುಗುಣವಾಗಿ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡಿತ್ತು ಸಮುದಾಯ. 2002ರಲ್ಲಿ ಎದುರಾದ ಹುಮನಾಬಾದ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುತ್ತೇವೆ ಎಂಬ ನಿರ್ಧಾರಕ್ಕೆ ಹೋರಾಟಗಾರರು ಬಂದಿದ್ದಕ್ಕೆ ಸರ್ಕಾರ ಬೆಚ್ಚಿತ್ತು. ಒಂದು ಸಣ್ಣ ರಾಜಕೀಯ ನಡೆ ಆಳುವ ಪಕ್ಷಕ್ಕೆ ನಡುಕವನ್ನು ಹುಟ್ಟಿಸಿತ್ತು. ರಾಜ್ಯದ ದೊಡ್ಡ ದಲಿತ ಸಮುದಾಯದ ಪರಿಣಾಮ ಏನಾಗುತ್ತೆ ಎಂಬ ಆತಂಕ ಸರ್ಕಾರಕ್ಕಿತ್ತು. ಕಾಂಗ್ರೆಸ್ ವಿರುದ್ಧ ಅಭಿಯಾನ ನಡೆಯುತ್ತಿರುವುದನ್ನು ಗಮನಿಸಿದ ಎಚ್.ಡಿ.ದೇವೇಗೌಡರು, ಒಳಮೀಸಲಾತಿ ಹೋರಾಟಗಾರರ ಜೊತೆ ಮಾತನಾಡಲು ಮುಂದಾಗಿರುವುದಾಗಿ ಅಂದು ಸಿದ್ದರಾಮಯ್ಯನವರು ಹೋರಾಟಗಾರರಿಗೆ ಕರೆ ಮಾಡಿದ್ದನ್ನು ಚಳಿವಳಿಯ ಮುಂದಾಳುಗಳು ನೆನಪಿಸಿಕೊಳ್ಳುತ್ತಾರೆ. ಹುಮನಾಬಾದ್‌ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತ್ತು. ಇದರ ಅನುಭವದ ಆಧಾರದಲ್ಲಿ ಮತ್ತೊಮ್ಮೆ ಸರ್ಕಾರವನ್ನು ನಡುಗಿಸಲು ಹೆಜ್ಜೆ ಇಟ್ಟಿದ್ದು ಹುನಗುಂದ ಉಪಚುನಾವಣೆಯಲ್ಲಿ. ಕಾಂಗ್ರೆಸ್ ಕ್ಯಾಂಡಿಡೇಟ್ ಸೋಲಿಸುತ್ತೇವೆ ಎಂಬ ಬಿರುಸಿನ ಪ್ರಚಾರಕ್ಕೆ ಮಾದಿಗ ಸಮುದಾಯ ಇಳಿಯಿತು. ಅಂದಿನ ಸಿಎಂ ಎಸ್.ಎಂ.ಕೃಷ್ಣರಲ್ಲಿ ನಡುಕ ಹುಟ್ಟಿತ್ತು. ರಾಮಕೃಷ್ಣ ಅವರಿಗೆ ಕರೆ ಬಂದಿತ್ತು. ಹುಡುಗರನ್ನೆಲ್ಲ ತೋಟದ ಮನೆಯೊಂದಕ್ಕೆ ಕರೆದೊಯ್ದು ಒಂದೇ ಸಮನೆ ಕಣ್ಣೀರು ಹಾಕಿದ್ದ ರಾಮಕೃಷ್ಣ, “ಸಿಎಂ ನಮ್ಮನ್ನು ಕರೆದಿದ್ದಾರೆ. ಆಲಮಟ್ಟಿ ಐಬಿಯಲ್ಲಿ ಮಾತುಕತೆ ನಡೆಯುತ್ತೆ” ಎಂದಿದ್ದರು.

ಸಿಎಂ ಕೃಷ್ಣ, “ಮಾದಿಗರು ಇಷ್ಟು ಬಡವರಿದ್ದೀರಾ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಆಗ ಹೋರಾಟಗಾರರು ಕೊಟ್ಟ ಉತ್ತರಕ್ಕೆ ಮುಖ್ಯಮಂತ್ರಿ ತಬ್ಬಿಬ್ಬಾಗಿದ್ದರು. “ಸಾರ್, ಒಕ್ಕಲಿಗರು ಜಮೀನುದಾರರಿದ್ದೀರಿ. ಮಿಲ್ಲರ್ ಆಯೋಗ ಒಕ್ಕಲಿಗರಿಗೆ ಮೀಸಲಾತಿ ಕೊಡಲು ಮುಂದಾದಾಗ ಬ್ರಾಹ್ಮಣರು ಬೀದಿಗಿಳಿದಿದ್ದರು. ಆಗ ಒಕ್ಕಲಿಗರು ಬ್ರಾಹ್ಮಣರ ವಿರುದ್ಧ ಹೋರಾಟ ಮಾಡಿದ್ದರು. ಇದು ಇತಿಹಾಸ” ಎಂಬ ಮಾತು ಕೇಳಿ ಸಿಎಂ, “ಎಸ್. ಎಸ್. ನನ್ನ ಅಜ್ಜನಿಗೆ ಅವಕಾಶ ಸಿಕ್ಕಿದ್ದೇ ಮಿಲ್ಲರ್ ಆಯೋಗದಿಂದಾಗಿ. ನಮ್ಮ ತಾತ ಜಮೀನ್ದಾರ ಆಗಿದ್ದೇ ಆಗ” ಎಂದಿದ್ದರು. ಮುಂದುವರಿದು, “ದಯವಿಟ್ಟು ಹೋರಾಟವನ್ನು ನಿಲ್ಲಿಸಿ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕರಿಸಿ. ಚುನಾವಣೆ ಮುಗಿದ ಮೇಲೆ ಸಮಿತಿ ರಚನೆ ಮಾಡುತ್ತೇವೆ” ಎಂಬ ಭರವಸೆ ನೀಡುತ್ತಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ತಕ್ಷಣ ಕ್ರಮ ತೆಗೆದುಕೊಳ್ಳದಿದ್ದಾಗ ಸಮುದಾಯ 2003ರಲ್ಲಿ ಸಿಎಂ ಮನೆ ಮುತ್ತಿಗೆ ಮಾಡುತ್ತದೆ. ಅದರ ಭಾಗವಾಗಿ ಎನ್.ವೈ.ಹನುಮಂತಪ್ಪ ಅವರ ಏಕಸದಸ್ಯ ಸಮಿತಿ ರಚನೆಯಾಗುತ್ತದೆ. ಆದರೆ ಇದು ಕಣ್ಣೊರೆಸುವ ತಂತ್ರ, ಹನುಮಂತಪ್ಪ ಮುಂದಿನ ಎಂಪಿ ಎಲೆಕ್ಷನ್ ಕ್ಯಾಂಡಿಡೇಟ್ ಎಂಬ ಆಕ್ರೋಶ ವ್ಯಕ್ತವಾಗುತ್ತದೆ. ಆಮೇಲೆ ಬಂದಿದ್ದು ಎಸ್.ಜಿ. ಬಾಲಕೃಷ್ಣ ಸಮಿತಿ. ಅದು ಸರಿಯಾಗದಿದ್ದಾಗ ಮಳೀಮಠರನ್ನು ನೇಮಕ ಮಾಡಲಾಗುತ್ತದೆ. ಆದರೆ ಅನಾರೋಗ್ಯ ಕಾರಣ ಮಳೀಮಠ ಅವರು ಹಿಂದೆ ಸರಿಯುತ್ತಾರೆ. ಮುಂದೆ ಆಗಿದ್ದು ಜಸ್ಟೀಸ್ ಎ.ಜೆ.ಸದಾಶಿವ ಆಯೋಗ. ಆಗ ಧರಂಸಿಂಗ್ ಮುಖ್ಯಮಂತ್ರಿ. ಸದಾಶಿವ ಅವರ ಮನೆಗೆ ಹೋದ ಹೋರಾಟಗಾರರು, “ನೀವಷ್ಟೇ ನಿಷ್ಪಕ್ಷಪಾತವಾಗಿ ನ್ಯಾಯ ದೊರಕಿಸಿಕೊಡಲು ಸಾಧ್ಯ” ಎಂದು ಮನವೊಲಿಸಿ ಕರೆದುಕೊಂಡು ಬರುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣ ಅಧಿಕಾರ ಕಳೆದುಕೊಂಡಾಗ, “ಕೇವಲ 2% ವೋಟ್ ಚದುರಿದ್ದರಿಂದ ನಾವು ಸೋಲು ಕಂಡೆವು” ಎಂದಿದ್ದರಂತೆ.

ಸದಾಶಿವ ಆಯೋಗದ ರಚನೆಯವರೆಗಿನ ಹೋರಾಟ ಒಂದು ಘಟ್ಟವಾದರೆ ಅದರ ನಂತರದ ಚಳವಳಿ ಮತ್ತೊಂದು ಘಟ್ಟ. 2005ರಲ್ಲಿ ರಚನೆಯಾದ ಆಯೋಗ 2 ವರ್ಷದ ಸಮೀಕ್ಷಾ ಕಾರ್ಯದ ಮಿತಿ ಹೊಂದಿತ್ತಾದರೂ, ಹಣಕಾಸು ಹಾಗೂ ಇನ್ನಿತರ ಸಮರ್ಪಕ ಸೌಲಭ್ಯ ದೊರೆಯದೆ 7 ವರ್ಷಗಳ ನಂತರ ವಿಳಂಬವಾಗಿ 2012ರ ಜೂನ್‌ನಲ್ಲಿ ತನ್ನ ಶಿಫಾರಸ್ಸಿನ ವರದಿ ನೀಡುತ್ತದೆ. ಆಗ ಸದಾನಂದ ಗೌಡರು ಸಿಎಂ. ವರದಿ ತೆರೆಯಲೇ ಇಲ್ಲ. ಅದರಲ್ಲಿನ ವರ್ಗೀಕರಣ ಸಾರಾಂಶ ರೂಪದಲ್ಲಿ ಪತ್ರಿಕೆಗಳಲ್ಲಿ ವರದಿಯಾಗುತ್ತದೆ. ಜಾರಿಗೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಮಾದಿಗ ಸಮುದಾಯ ಮುಂದಾಗುತ್ತದೆ. ನಂತರ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಾರೆ. ಆಗ ನಡೆದ ಬೆಳಗಾವಿ ಚಲೋದ ದುರಂತವನ್ನು ಚಳವಳಿ ಮರೆಯುವುದಿಲ್ಲ. ಡಿಸೆಂಬರ್ 11 ತಾರೀಖು ಬೆಳಗಾವಿ ಅಧಿವೇಶದ ದಿನ. ರಾಜ್ಯದ ಮೂಲೆಮೂಲೆಯಿಂದ ಹೆಂಗಸರು, ಮಕ್ಕಳೆಲ್ಲ ಬೆಳಗಾವಿ ಧಾವಿಸಿರುತ್ತಾರೆ. ಸರ್ಕಾರ ಅವರನ್ನು ತಡೆಯುತ್ತದೆ. ರೊಚ್ಚಿಗೆದ್ದ ಸಮುದಾಯ ಪೊಲೀಸರನ್ನು ಓಡಿಸಿಕೊಂಡು ಹೋಗುತ್ತದೆ. ಭೀಕರ ಲಾಠಿ ಚಾರ್ಜ್‌ನಲ್ಲಿ ನೂರಾರು ಜನ ಗಾಯಗೊಳ್ಳುತ್ತಾರೆ. ಮುಖಂಡರ ಅರೆಸ್ಟ್ ಆಗುತ್ತದೆ. ಕನಕೇಹಳ್ಳಿ ಲಕ್ಕಪ್ಪ ಎಂಬವರು ಭೀಕರವಾಗಿ ಗಾಯಗೊಳ್ಳುತ್ತಾರೆ.

ಒಳಮೀಸಲಾತಿ1

ತಿಂಗಳುಗಟ್ಟಲೆ ಸಮುದಾಯದ ಹೋರಾಟಗಾರರೇ ಅವರ ಮನೆಗೆ ರೇಷನ್ ಸರಬರಾಜು ಮಾಡಿದ್ದನ್ನು ಮರೆಯಲಾದೀತೆ? ಡಿಸೆಂಬರ್ 11ನೇ ತಾರೀಖನ್ನು ಸಮುದಾಯ ‘ಕರಾಳ ದಿನ’ ಎಂದು ಪರಿಗಣಿಸಲಿಲ್ಲ. ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸಿದ ದಿನವಾಗಿ ಡಿಸೆಂಬರ್ 11 ದಾಖಲಾಗುತ್ತದೆ. ಇದನ್ನು ‘ಬೆಳಗಾಂ ಕೋರೆಗಾಂವ್’ ಎಂದು ಬಣ್ಣಿಸುತ್ತಾರೆ. ಯಾವ ಮುಖ್ಯಮಂತ್ರಿಯೂ ಸದಾಶಿವ ಆಯೋಗದ ಗಂಟು ಬಿಚ್ಚಲೇ ಇಲ್ಲ. 2017ರಲ್ಲಿ ಮತ್ತೊಮ್ಮೆ ಪಾದಯಾತ್ರೆಗೆ ಸಮುದಾಯ ಕರೆಕೊಡುತ್ತದೆ. ಕೂಡಲಸಂಗಮದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಸುದೀರ್ಘ ಕಾಲ್ನಡಿಗೆ ಹಮ್ಮಿಕೊಳ್ಳಲಾಗುತ್ತದೆ. ನವೆಂಬರ್ 29ರಿಂದ ಆರಂಭವಾಗಿ ಡಿಸೆಂಬರ್ 11ಕ್ಕೆ ಬೆಂಗಳೂರು ತಲುಪುತ್ತದೆ. ಆಗಲೂ ಸರ್ಕಾರ ಕಿವಿಗೊಡಲಿಲ್ಲ. ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬರುತ್ತದೆ. ಎಚ್.ಡಿ.ಕುಮಾರಸ್ವಾಮಿ ಸಿಎಂ. 2018 ಅಕ್ಟೋಬರ್ 2ರಿಂದ ಅಕ್ಟೋಬರ್ 12ರವರೆಗೆ ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಆಮೇಲೆ ಆಪರೇಷನ್ ಕಮಲ ನಡೆದು ಸರ್ಕಾರ ಬದಲಾಗುತ್ತದೆ. ಯಡಿಯೂಪ್ಪ ಸಿಎಂ ಆಗ್ತಾರೆ, ಅವರಾದ ಮೇಲೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗ್ತಾರೆ. ಅವರೂ ಸಮುದಾಯದ ನೋವಿಗೆ ಸ್ಪಂದಿಸುವುದಿಲ್ಲ. 2022ರ ಡಿಸೆಂಬರ್‍‌ನಲ್ಲಿ ಮತ್ತೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುತ್ತದೆ. ದಸಂಸ ಕಟ್ಟಿದ ಬಿ.ಕೃಷ್ಣಪ್ಪನವರ ಕರ್ಮಭೂಮಿ ಹರಿಹರದಿಂದ ಆರಂಭವಾಗಿ ಡಿಸೆಂಬರ್ 11ಕ್ಕೆ ಬೆಂಗಳೂರು ತಲುಪಿದ ಕಾಲ್ನಡಿಗೆಗೆ ಸಾವಿರಾರು ಜನ ಹರಿದು ಬರುತ್ತಾರೆ. ನೀಲಿ ಭಾವುಟಗಳು ಆರ್ಭಟಿಸುತ್ತವೆ. ಸರ್ಕಾರದ ಪ್ರತಿನಿಧಿಯಾಗಿ ಬಂದ ಸೋಮಣ್ಣನಿಗೆ ಘೇರಾವ್ ಹಾಕಿ ಓಡಿಸಲಾಗುತ್ತದೆ. ಸಿಎಂ ಬರಬೇಕೆಂದು ಒತ್ತಾಯಿಸಲಾಗುತ್ತದೆ. ಹೋರಾಟಗಾರರ ಮೇಲೆ ಕೇಸ್ ಜಡಿಯಲಾಗುತ್ತದೆ. ಬರೋಬ್ಬರಿ 111 ದಿನ ಸತ್ಯಾಗ್ರಹ ನಡೆಸಲಾಗುತ್ತದೆ. ಛಲವಾದಿ, ಮಾದಿಗ ಸಮುದಾಯಗಳ ಒಗ್ಗಟ್ಟು ಈ ವೇದಿಕೆಯಲ್ಲಿ ಪ್ರದರ್ಶನವಾಗುತ್ತದೆ. ಆನಂತರ ಮಾಧುಸ್ವಾಮಿ ನೇತೃತ್ವದ ಕ್ಯಾಬಿನೆಟ್ ಸಬ್ ಕಮಿಟಿ ಆಗುತ್ತದೆ. ಅದು ಸದಾಶಿವ ಆಯೋಗದ ವರದಿಯನ್ನು ಮೂಲೆಗೆ ತಳ್ಳಿ, ತನ್ನದೇ ಹೊಸ ರೀತಿಯ ವರ್ಗೀಕರಣವನ್ನು ತರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸುತ್ತದೆ. ಆಂಧ್ರ, ಪಂಜಾಬ್ ರಾಜ್ಯಗಳ ಅರ್ಜಿಗಳು ಸೇರಿದಂತೆ ವಿವಿಧ 23 ಮನವಿಗಳು ಸುಪ್ರೀಂಕೋರ್ಟ್ ಮುಂದೆ ಇವೆ ಎಂಬ ನೆಪದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರದೆ ಕೇಂದ್ರದಲ್ಲಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಸಮುದಾಯವನ್ನು ವಂಚಿಸುತ್ತದೆ. ಅಂತೂ ಇಂತೂ ಅಂತಿಮವಾಗಿ ಕೋರ್ಟ್ ಆಗಸ್ಟ್ 1ರಂದು ತೀರ್ಪು ನೀಡಿದೆ.

ತ್ರಾಸದಾಯಕ ಕಾನೂನು ಹೋರಾಟ, ಅದರ ನೆಪದಲ್ಲಿ ಸರ್ಕಾರಗಳು ಆಡಿದ ನವರಂಗಿ ಆಟಗಳು, ಪರಿಶಿಷ್ಟರಲ್ಲಿನ ಸ್ಪೃಶ್ಯ ಜಾತಿಗಳಿಗೆ ಮನವರಿಕೆ ಮಾಡಲು ನಡೆದ ಪ್ರಯತ್ನ, ಮಾದಿಗ ಸಮುದಾಯ ಛಲವಾದಿ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದ ಮಹತ್ವದ ನಡೆಗಳು- ಇವೆಲ್ಲವೂ ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಹೋರಾಟದ ಅವಿಸ್ಮರಣೀಯ ಹೆಜ್ಜೆಗುರುತುಗಳು. ಸಾವಿರಾರು ಕನಸುಗಾರರ, ನೂರಾರು ಹೋರಾಟಗಾರರ ಬೆವರು, ನೆತ್ತರು, ಕಂಬನಿ, ಅಸಹಾಯಕತೆ, ಛಲ, ನಿತ್ರಾಣ, ಹಸಿವು, ಮೂದಲಿಕೆ, ಗುಮಾನಿ ಎಲ್ಲವನ್ನೂ ಅನುಭವಿಸಿದ ಚಳವಳಿಗೆ ಸುಪ್ರೀಂಕೋರ್ಟ್ ಒಂದು ಅಂತಿಮ ಸ್ವರೂಪವನ್ನು ಕೊಟ್ಟಿದೆ. ಕೆನೆಪದರದ ಪ್ರಸ್ತಾಪ ಮಾಡಿರುವುದು ಒಂದು ಮಟ್ಟಿಗಿನ ಹಿನ್ನಡೆಯಾದರೂ ದಲಿತ ಸಮುದಾಯ ಅದನ್ನು ಪರಿಹರಿಸಿಕೊಳ್ಳುವ ಹಾದಿಯಲ್ಲಿ ನಡೆಯಲಿ. ಸರ್ಕಾರ ವಿವೇಚನಾಯುತವಾಗಿ ಮುಂದಿನ ಕ್ರಮ ಜರುಗಿಸಲಿ. ಕೆನೆಪದರ ನೆಪದಲ್ಲಿ ಇದಕ್ಕೆ ಯಾರೂ ಅಡ್ಡಗಾಲು ಹಾಕದಿರಲಿ. ಅಂತಿಮವಾಗಿ ಸಮುದಾಯ ಗೆದ್ದಿದೆ. ಸಂವಿಧಾನ ಗೆದ್ದಿದೆ. ಸಾಮಾಜಿಕ ನ್ಯಾಯ ಗೆದ್ದಿದೆ.

?s=150&d=mp&r=g
ವೈ.ಬಿ. ಪಿಪೀಲಿಕ
+ posts

ಲೇಖಕ, ಸಂಘಟಕ, ಸಾಮಾಜಿಕ ಹೋರಾಟಗಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವೈ.ಬಿ. ಪಿಪೀಲಿಕ
ವೈ.ಬಿ. ಪಿಪೀಲಿಕ
ಲೇಖಕ, ಸಂಘಟಕ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X