ಉಡುಪಿ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದೇ ಪ್ರಸಿದ್ಧ. ಎಸೆಸೆಲ್ಸಿ, ಪಿಯುಸಿ, ಇನ್ನಿತರ ಉನ್ನತಮಟ್ಟದ ಪರೀಕ್ಷೆಗಳಲ್ಲಿ ನಮ್ಮ ಜಿಲ್ಲೆಯವರೇ ಉತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಅದರ ನಂತರದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ನಮ್ಮ ಜಿಲ್ಲೆಯ ಯುವಜನತೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ವೈದ್ಯಕೀಯ ಪದವಿ ಪಡೆಯಲು ಬೇರೆ ಜಿಲ್ಲೆ, ಬೇರೆ ರಾಜ್ಯಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.
ಹಣಬಲ ಇದ್ದವರು ಇಲ್ಲಿಯೇ ಖಾಸಗಿ ಸಂಸ್ಥೆಗಳಲ್ಲಿ ಲಕ್ಷ ಲಕ್ಷ ಹಣ ನೀಡಿ ಸೀಟು ಪಡೆದುಕೊಳ್ಳುತ್ತಾರೆ. ಅಶಕ್ತ ಕುಟುಂಬಗಳ ಮಕ್ಕಳು ತಮ್ಮ ತಂದೆ ತಾಯಿಯ ಸಂಕಷ್ಟವನ್ನು ಅರಿತು ಅದೆಷ್ಟು ಯುವಜನತೆ ತಮ್ಮ ಕನಸುಗಳನ್ನು ನನಸು ಮಾಡುವಲ್ಲಿ ವಿಫಲಗೊಂಡು, ಕನಸಿನ ಮಾರ್ಗವನ್ನೇ ಬದಲಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಅರ್ಹ ಬಡವರು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಅವರುಗಳು ಗದಗ ಅಥವಾ ಕಾರವಾರಕ್ಕೆ ಹೋಗಿ ಎಂಬಿಬಿಎಸ್ ಕಲಿಯಲು ಕಷ್ಟ ಸಾಧ್ಯವಾದಾಗ ಮನೆ ಬಾಗಿಲಲ್ಲೇ ಸರಕಾರಿ ಕಾಲೇಜು ಅವರ ಪಾಲಿಗೆ ಒಂದು ವರವೇ ಸರಿ. ಇನ್ನು ಮುಂದೆ ಹೀಗಾಗಬಾರದು. ವೈದ್ಯಕೀಯ ವಿದ್ಯಾಭ್ಯಾಸ ಉಡುಪಿ ಜಿಲ್ಲೆಯಲ್ಲಿಯೇ ಆಗಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.
ಉಡುಪಿ ಜಿಲ್ಲೆಯಾಗಿ 23 ವರ್ಷವಾದರೂ, ಉಡುಪಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ವಿಪರ್ಯಾಸ. ಈಗಾಗಲೇ ನಮ್ಮ ತಂಡ ಮತ್ತು ಇನ್ನಿತರ ತಂಡದೊಂದಿಗೆ ಪಿ. ವಿ ಭಂಡಾರಿ ಅವರ ಮುಂದಾಳತ್ವದಲ್ಲಿ ಸತತ ಪ್ರಯತ್ನದೊಂದಿಗೆ 23 ವರ್ಷಗಳ ನಂತರ ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿತು. ಅಂದರೆ ಸರ್ಕಾರದಿಂದ ನಿಧಿ ಮಂಜೂರಾಗಿದೆ. ಇನ್ನು ಕಾರ್ಯ ಆರಂಭವಾಗಬೇಕು ಅಷ್ಟೇ. ಇನ್ನೂ ಕಾರ್ಯ ಆರಂಭಗೊಂಡು, ಪೂರ್ಣಗೊಳಿಸಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.
ನಮ್ಮ ಉಡುಪಿ ಜಿಲ್ಲೆ ಸೇರಿ ಒಟ್ಟು ಎಂಟು ಜಿಲ್ಲೆಗಳು ಒಟ್ಟಿಗೆ 1998ರಲ್ಲಿ ಅಧಿಕೃತವಾಗಿ ಜಿಲ್ಲೆಯೆಂದು ಘೋಷಿಸಲಾಯಿತು. ಅದರಲ್ಲಿ ಕೊಪ್ಪಳ ಕೂಡ ಒಂದು. ಕೊಪ್ಪಳದಲ್ಲಿ ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜು ಇದೆ. 2013ರಲ್ಲಿಯೇ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಕೊಪ್ಪಳದಲ್ಲಿ ನಿರ್ಮಿಸಲಾಯಿತು ಹಾಗೂ ಉನ್ನತಮಟ್ಟದ ಶಿಕ್ಷಣವು ದೊರೆಯುತ್ತಲೂ ಇವೆ. ಕೊರೋನಾ ಸಮಯದಲ್ಲಂತೂ ಈ ಸರ್ಕಾರಿ ವೈದ್ಯಕೀಯ ಕಾಲೇಜು ಕೊಪ್ಪಳ ಜಿಲ್ಲೆಯ ಜನರ ಜೀವ ಉಳಿಸುವಲ್ಲಿ ಮುಖ್ಯ ಪಾತ್ರವಹಿಸಿತ್ತು ಎಂದು ಹೇಳಲು ಹೆಮ್ಮೆ ಇದೆ.
ಅದು ಅಲ್ಲಿನ ಜನಪ್ರತಿನಿಧಿಗಳ ಕಾರ್ಯವೈಖರಿ ಮತ್ತು ಜನಸಾಮಾನ್ಯರಿಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ. ನಮ್ಮಲ್ಲಿ ಯಾಕೆ ಇನ್ನೂ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಿಲ್ಲ ಎಂಬ ಪ್ರಶ್ನೆ ಮೂಡಿದಾಗ.
- ಮೊದಲನೆಯದಾಗಿ ಜನಪ್ರತಿನಿಧಿ ಮತ್ತು ಜನಸಾಮಾನ್ಯರ ನಿರ್ಲಕ್ಷ್ಯ.
- ಜನಸಾಮಾನ್ಯರು ಖಾಸಗಿಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು.
- ಉಡುಪಿ ಜಿಲ್ಲೆಯಲ್ಲಿ ಖಾಸಗಿಯಾಗಿರುವ ಆಸ್ಪತ್ರೆಗಳು, ಕಾಲೇಜುಗಳು ಹೆಚ್ಚಿನದಾಗಿ ಜನಪ್ರತಿನಿಧಿಗಳ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿರುತ್ತದೆ. ಹಾಗಾಗಿ ಇಲ್ಲಿ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಬಂದರೆ ಅವರ ಆದಾಯ ಕಡಿಮೆ ಆಗಬಹುದು ಎಂಬ ಯೋಜನೆ.
- ಹೀಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 23 ವರ್ಷ ತೆಗೆದುಕೊಂಡರು.
ಈಗ ಉಡುಪಿಯ ಜನತೆ ಪಕ್ಷಭೇದ ಮರೆತು ಎಲ್ಲರೂ ಜೊತೆಗೂಡಿ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲು ಕೈ ಜೋಡಿಸಬೇಕಾಗಿದೆ.
ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯದ ಮಾಜಿ ಆರೋಗ್ಯ ಸಚಿವರಾದ ಡಾಕ್ಟರ್ ಸುಧಾಕರ್ ಅವರು ಒಂದು ಹೇಳಿಕೆ ನೀಡಿದ್ದರು. ಖಾಸಗಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವೈದ್ಯಕೀಯ ಕಾಲೇಜನ್ನು ನಿರ್ಮಿಸುತ್ತೇವೆ ಎಂದು, ಇದು ಖಂಡಿತವಾಗಿಯೂ ಸಾಧ್ಯವಿಲ್ಲ.

ಸರ್ಕಾರಿ ವೈದ್ಯಕೀಯ ಕಾಲೇಜು ಖಾಸಗಿಯೊಂದಿಗೆ ಒಡಂಬಡಿಕೆ ಮಾಡಲು ಉಡುಪಿಯ ಜನತೆ ಖಂಡಿತವಾಗಿಯೂ ಬಿಡುವುದಿಲ್ಲ. ಈಗಾಗಲೇ ತಾಯಿ ಮತ್ತು ಮಕ್ಕಳ (BRS) ಆಸ್ಪತ್ರೆಯನ್ನು ಖಾಸಗಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ಈಗ ಖಾಸಗಿಯವರು ನಾವು ನಡೆಸುವುದಿಲ್ಲ ಎಂದು ಜಾರಿಕೊಂಡಿದ್ದಾರೆ. ಆದರೆ ಈಗ ಅಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರಿಗೆ, ವೈದ್ಯರಿಗೆ ಸಂಬಳ ನೀಡದೆ ಹಲವು ಬಾರಿ ಪ್ರತಿಭಟನೆಗಳು ಕೂಡ ನಡೆದವು. ಹಾಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಾಸಗಿಯವರೊಂದಿಗೆ ಒಡಂಬಡಿಕೆ ಮಾಡಲು ನಾವು ಖಂಡಿತವಾಗಿಯೂ ಬಿಡುವುದಿಲ್ಲ.
ಮುಖ್ಯವಾಗಿ ರಾಜ್ಯಕ್ಕೆ ಆದಾಯ (Revenue) ತಂದು ಕೊಡುವುದರಲ್ಲಿ ನಮ್ಮ ಉಡುಪಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಆದರೆ ಸರ್ಕಾರಿ ಸವಲತ್ತುಗಳು ಜಿಲ್ಲೆಗೆ ದೊರಕಲು ಉಡುಪಿಯ ಜನತೆ ಹೋರಾಟಗಳನ್ನು ಮಾಡಬೇಕು. ಇದು ಸರ್ಕಾರದ ನಿರ್ಲಕ್ಷ್ಯವೋ ಹಾಗೂ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷವೋ ಅಥವಾ ಉಡುಪಿಯ ಜನತೆಯ ಮೌನ ಕಾರಣವಾಗಿರಬಹುದೇ?
ಇನ್ನೂ ಸುಮ್ಮನಿದ್ದರೆ ಪ್ರಯೋಜನೆಯಿಲ್ಲ. ನಾವೆಲ್ಲರೂ ಜೊತೆಗೂಡಿ ಡಾಕ್ಟರ್ ಪಿ ವಿ ಭಂಡಾರಿ ಅವರ ಮುಂದಾಳತ್ವದಲ್ಲಿ ಅವರ ಮಾರ್ಗದರ್ಶನದೊಂದಿಗೆ ಹೋರಾಡಿ ಉಡುಪಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರದಿಂದ ಮಂಜೂರು ಮಾಡಿಸುವುವರೆಗೂ ನಿರಂತರ ಹೋರಾಟ ಮಾಡುವುದು ಅನಿವಾರ್ಯವಾಗಿದೆ.
ಬರೆಹ: ಸುಕಿ ಶೆಟ್ಟಿ (ಸುಕೇತ್)
ಕರಾವಳಿ ಯೂತ್ ಕ್ಲಬ್ (ರಿ), ಉಡುಪಿ

