ಪರಿಶಿಷ್ಟ ಜಾತಿ(ಎಸ್‌ಸಿ) ಸಮುದಾಯಕ್ಕೆ ರುದ್ರಭೂಮಿ ಮಂಜೂರು ಮಾಡುವಂತೆ ರಾಯಚೂರು ಜಿಲ್ಲಾಧಿಕಾರಿ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ(ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯ ರವೀಂದ್ರ ಜಲ್ದಾರ್ ಮಾತನಾಡಿ, “ಸದರಿ ಸ್ಮಶಾನ ಭೂಮಿ ಈಗಾಗಲೇ ಭೂಮಾಪಕರು ಸಲ್ಲಿಸಿದ ವರದಿಯಂತೆ ಅರಣ್ಯ ಇಲಾಖೆಗೆ ಸೇರಿದ್ದು, ಪರಿಶಿಷ್ಟ ಜಾತಿ ಸಮುದಾಯದ ರುದ್ರಭೂಮಿ ಉಪಯೋಗಕ್ಕಾಗಿ ಸರ್ವೆ ನಂ 1167ರಲ್ಲಿನ 6 ಗುಂಟೆ ಹಾಗೂ ಅದಕ್ಕೆ ಹೊಂದಿಕೊಂಡ ಅರಣ್ಯ ಇಲಾಖೆಗೆ ಸೇರಿದ 15 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆದು ಮಂಜೂರು ಮಾಡಬೇಕು” ಎಂದು ಒತ್ತಾಯಿಸಿದರು.
“ಸರ್ವೆ ನಂ 1167ರಲ್ಲಿನ ರುದ್ರಭೂಮಿಗೆ ತೆರಳಲು ಪ್ರಸ್ತುತ ಸಂಪರ್ಕ ರಸ್ತೆ ಇಲ್ಲದಿರುವುದರಿಂದ 80 ಅಡಿ ರಸ್ತೆ ನಿರ್ಮಾಣ ಮಾಡಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, “ಸದರಿ ಅರಣ್ಯ ಇಲಾಖೆಗೆ ಸೇರಿದ 01 ಎಕರೆ 05 ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ ಜನಾಂಗದವರಿಗೆ ರುದ್ರಭೂಮಿ ಉಪಯೋಗಕ್ಕಾಗಿ ಅರಣ್ಯ ಹಕ್ಕು ಕಾಯ್ದೆಯಡಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಜೂರು ಮಾಡಬೇಕು” ಎಂದು ಸೂಚಿಸಿದರು.
ಸರ್ವೆ ನಂ.1220ರಲ್ಲಿನ ಸತ್ಯನಾಥ ಕಾಲೋನಿ ಕೋ-ಆಪರೇಟಿವ್ ಸೊಸೈಟಿಯಿಂದ ಈಗಾಗಲೇ ಹಂಚಿಕೆ ಮಾಡಲಾದ ನಿವೇಶನಗಳ ಮೂಲಕ 80 ಅಡಿ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸದರಿ ನಿವೇಶನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ನಿವೇಶನಗಳ ನಕ್ಷೆಯನ್ನು ಅಂತಿಮ ಬದಲಾವಣೆ ಮಾಡಲು ಅಲ್ಲಿನ ಭೂ ಮಾಲೀಕರು ಸಮಾಜದ ಮುಖಂಡರುಗಳೊಂದಿಗೆ ಒಪ್ಪಿಗೆ ಪಡೆದು ಅಂತಿಮ ಅನುಮೋದನೆ ನೀಡಿ ಮಾರ್ಪಾಡು ನಕ್ಷೆ ತಯಾರಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕೊಟಗೇರಾ ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್, ಪ್ರಾಂಶುಪಾಲರ ಅಮಾನತಿಗೆ ದಸಂಸ ಆಗ್ರಹ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ
ಸದಸ್ಯರಾದ ಕೆ ಇ ಕುಮಾರ್, ಹೇಮರಾಜ್ ಅಸ್ಕಿಹಾಳ್, ಎನ್ ರಘುವೀರ್ ನಾಯಕ, ರವಿಕುಮಾರ್ ಅಸ್ಕಿಹಾಳ್, ಪವನ್ ಕಿಶೋರ್ ಪಾಟೀಲ್, ಬಸವರಾಜ ನಕ್ಕುಂದಿ, ಟಿ ಸುಧಾಮ ಇದ್ದರು.