ವಯನಾಡ್ ಭೂಕುಸಿತದಿಂದಾಗಿ ಹಲವಾರು ಮಂದಿ ಮನೆ, ಆಸ್ತಿಪಾಸ್ತಿಯನ್ನು ಕಳೆದುಕೊಂಡು ಬೀದಿಪಾಳಾಗಿರುವಾಗ ವಯನಾಡಿನಲ್ಲಿ ಕಾಂಗ್ರೆಸ್ ಸುಮಾರು ನೂರು ಮನೆಗಳನ್ನು ನಿರ್ಮಿಸಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ, ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಭೂಕುಸಿತದಿಂದ ತತ್ತರಿಸಿರುವ ವಯನಾಡಿಗೆ ಆಗಸ್ಟ್ 1ರಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭೇಟಿ ನೀಡಿದ್ದಾರೆ. ಆಗಸ್ಟ್ 2ರಂದು ಮೆಪ್ಪಾಡಿಯ ಚೂರಮಲದಲ್ಲಿರುವ ಅರಣ್ಯ ಕಛೇರಿಯಲ್ಲಿ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ರಾಹುಲ್ ಗಾಂಧಿ ನೂರು ಮನೆ ನಿರ್ಮಾಣದ ಬಗ್ಗೆ ತಿಳಿಸಿದ್ದಾರೆ.
“ನಿನ್ನೆಯಿಂದ ಇಲ್ಲೇ ಇದ್ದೇನೆ, ನಿನ್ನೆ ಹೇಳಿದಂತೆ ಇದೊಂದು ಘೋರ ದುರಂತ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದೆವು. ಶಿಬಿರಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆವು. ಇಂದು ಆಡಳಿತ ಮತ್ತು ಪಂಚಾಯತ್ ಜೊತೆ ಸಭೆ ನಡೆಸಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ವಯನಾಡ್ ಭೂಕುಸಿತ | ತಂದೆ ಹತ್ಯೆಯಾದಾಗ ಅನುಭವಿಸಿದ್ದ ನೋವಿಗಿಂತ ಈಗ ಹೆಚ್ಚು ನೋವಾಗಿದೆ: ರಾಹುಲ್
ಹಾಗೆಯೇ, “ಕಾಂಗ್ರೆಸ್‌ನಿಂದ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ಹಾನಿಗೊಳಗಾದ ಮನೆಗಳ ಸಂಖ್ಯೆ ಮತ್ತು ಅವರ ಕಾರ್ಯತಂತ್ರದ ಬಗ್ಗೆ ನಮಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಒಂದೇ ಪ್ರದೇಶದಲ್ಲಿ ನಡೆದಿರುವ ಘಟನೆಯಲ್ಲ. ಆದ್ದರಿಂದ ಈ ದುರಂತವನ್ನು ವಿಭಿನ್ನವಾಗಿ ಪರಿಗಣಿಸಬೇಕಾಗುತ್ತದೆ ಎಂದು ನಾನು ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ” ಎಂದರು.
VIDEO | Wayanad Landslides: "I have been here since yesterday. As I said yesterday, this is a terrible tragedy. We went to the site yesterday. We went to the camps, we assessed the situation there. Today, we had a meeting with the administration and the panchayat. They briefed us… pic.twitter.com/vG0KSjpL1O
— Press Trust of India (@PTI_News) August 2, 2024