ಕೇರಳದ ಶಾಲಾ ವಿದ್ಯಾರ್ಥಿನಿಯೊಬ್ಬಳು ಬರೆದ ಕಥೆಯು ಕೇರಳದ ವಯನಾಡ್‌ನಲ್ಲಿ ಸುಮಾರು 300 ಜನರು ಸಾವನ್ನಪ್ಪಿದ, 200ಕ್ಕೂ ಹೆಚ್ಚು ಜನರು ಗಾಯಗೊಂಡ ಭಾರೀ ಭೂಕುಸಿತದ ಬಗ್ಗೆ ಮುನ್ಸೂಚನೆ ನೀಡಿದಂತಿದೆ. “ಮಳೆ ಬಂದರೆ, ಭೂಕುಸಿತ ಸಂಭವಿಸುತ್ತವೆ. ನದಿಗಳಿಗೆ ಅಪ್ಪಳಿಸುತ್ತವೆ. ಮಾನವ ಜೀವಿಗಳು ಸೇರಿದಂತೆ ಎಲ್ಲವನ್ನೂ ನುಂಗಿ ಹಾಕುತ್ತವೆ” ಎಂದು ಕಳೆದ ವರ್ಷ ತನ್ನ ಶಾಲಾ ಮ್ಯಾಗಜೀನ್‌ಗಾಗಿ ಬರೆದಿದ್ದ ಕಥೆಯಲ್ಲಿ ಬಾಲಕಿ ಉಲ್ಲೇಖಿಸಿದ್ದಳು. ಆಕೆಯ ಕಥೆ ಭವಿಷ್ಯವಾಣಿಯಂತೆ ವಾಯನಾಡ್‌ನಲ್ಲಿ ಗೋಚರಿಸುತ್ತಿದೆ.
ಲಯಾ ಎಂಬ ವಿದ್ಯಾರ್ಥಿನಿ ಬರೆದಿದ್ದ ಕಥೆಯಂತೆಯೇ ಈಗ ವಿನಾಶಕಾರಿ ಭೂಕುಸಿತವು ಆಕೆಯ ನಿವಾಸವಿರುವ ಚೂರಮಲಾ ಪ್ರದೇಶವನ್ನು ನೆಲಸಮಗೊಳಿಸಿದೆ. ದುರಂತ ಘಟನೆಯಲ್ಲಿ ಬಾಲಕಿ ತನ್ನ ತಂದೆಯನ್ನೂ ಕಳೆದುಕೊಂಡಿದ್ದಾಳೆ. ಆಕೆ ಓದುತ್ತಿರುವ ಚೂರಮಲಾ ವೆಲ್ಲರ್ಮಲಾದಲ್ಲಿರುವ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯೂ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ವಿದ್ಯಾರ್ಥಿನಿ ಲಯಾ ತಮ್ಮ ಶಾಲೆಯ ಡಿಜಿಟಲ್ ಮ್ಯಾಗಜಿನ್ ‘ವೆಲ್ಲಾರಂ ಕಲ್ಲುಕಲ್’ಗಾಗಿ ‘ಆಗ್ರಹತಿಂತೆ ದುರಾನುಭವಂ’ (ಆಸೆಯ ದುಃಖ) ಕಥೆಯನ್ನು ಬರೆದಿದ್ದರು. ಕತೆಯಲ್ಲಿ ಸಂಭಾವಿತ ದುರಂತವನ್ನು ವಿವರಿಸಿದ್ದಳು. ಮಾತ್ರವಲ್ಲದೆ, ಸನ್ನಿಹಿತ ಅಪಾಯದ ಬಗ್ಗೆ ಇಬ್ಬರು ಸ್ನೇಹಿತೆರಿಗೆ ಎಚ್ಚರಿಕೆ ನೀಡುವುದನ್ನೂ ಉಲ್ಲೇಖಿಸಿದ್ದಳು.
ಕಥೆಯಲ್ಲಿ, ಇಬ್ಬರು ಸ್ನೇಹಿತೆಯರು – ಅನಸ್ವರ ಮತ್ತು ಅಲಂಕೃತ – ತಮ್ಮ ಪೋಷಕರಿಗೆ ಹೇಳದೆ ಜಲಪಾತವನ್ನು ನೋಡಲು ಹೋಗುತ್ತಾರೆ. ಶೀಘ್ರದಲ್ಲೇ, ಹಕ್ಕಿ ಹುಡುಗಿಯರನ್ನು ಸಮೀಪಿಸುತ್ತದೆ. ‘ಈಗ ಹೊರಡಿ ಮಕ್ಕಳೇ, ಮುಂದೆ ಅಪಾಯ ಸಂಭವಿಸಲಿದೆ’ ಎಂದು ಹೇಳುತ್ತದೆ. ಮಕ್ಕಳು ತಕ್ಷಣ ಓಡಿ ಹೋಗುತ್ತಾರೆ. ಬಳಿಕ, ಹಕ್ಕಿಯು ಹುಡುಗಿಯಾಗಿ ರೂಪಾಂತರಗೊಳ್ಳುವುದನ್ನು ಅವರು ದೂರದಿಂದ ನೋಡುತ್ತಾರೆ.

ಆಕೆಯ ಕತೆ ಈಗ ವಯನಾಡ್ ಜಿಲ್ಲೆಯಲ್ಲಿ ನಿಜವಾಗಿ ಗೋಚರಿಸುತ್ತಿದೆ. ಮಂಗಳವಾರ ಮುಂಜಾನೆ 2 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿತ್ತು. ಬಳಿಕ, 4:10ಕ್ಕೆ ಮತ್ತೊಂದು ಭೂಕುಸಿತ ಸಂಭವಿಸಿತು. ಮೆಪ್ಪಾಡಿ, ಮುಂಡಕ್ಕೈ, ಚೂರಮಲಾ ಸೇರಿದಂತೆ ಹಲವು ಪ್ರದೇಶಗಳು ಭೂಕುಸಿತದಿಂದ ನಾಶವಾಗಿವೆ. ಮನೆಗಳು, ರಸ್ತೆಗಳು ಕೊಚ್ಚಿಹೋಗಿವೆ. ಈವರೆಗೆ, 300ಕ್ಕೂ ಅಧಿಕ ಮಂದಿಯ ಮೃತದೇಹಗಳು ಪತ್ತೆಯಾಗಿವೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ರಾತ್ರಿ ವಯನಾಡಿನ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಶೀಘ್ರವೇ ಪುನರ್ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ವಯನಾಡ್‌ಗೆ ಭೇಟಿ ನೀಡಿದ್ದು, ಭೂಕುಸಿತವನ್ನು ‘ಭಯಾನಕ ದುರಂತ’ ಎಂದು ಬಣ್ಣಿಸಿದ್ದಾರೆ. ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯಾದಗಲೂ ಇಷ್ಟೊಂದು ನೋವಾಗಿರಲಿಲ್ಲ. ಈಗ ತುಂಬಾ ನೋವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, ವಯನಾಡ್‌ನಲ್ಲಿ ಸಂತ್ರಸ್ತರಿಗಾಗಿ ಕಾಂಗ್ರೆಸ್ 100 ಮನೆಗಳನ್ನು ನಿರ್ಮಾಣ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.