ವೆನೆಜುವೆಲಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಚುನಾವಣೆಯ ಫಲಿತಾಂಶ ಜುಲೈ 28ರಂದು ಹೊರಬಿದಿದ್ದು, ನಿಕೋಲಸ್ ಮಡುರೊ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ, ಚುನಾವಣಾ ಫಲಿತಾಂಶಗಳ ವಿರುದ್ಧ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ನೇತೃತ್ವದಲ್ಲಿ ವಿಪಕ್ಷಗಳು ವೆನೆಜುವೆಲಾ ರಾಜಧಾನಿ ಕ್ಯಾರಕಾಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಕಳೆದ ಭಾನುವಾರ ಪ್ರಕಟವಾದ ಫಲಿತಾಂಶದಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಿಜೇತ ಎಂದು ಘೋಷಿಸಲಾಗಿದೆ. ಸೋಮವಾರ ಅವರು ವಿರೋಧ ಪಕ್ಷದ ಅಭ್ಯರ್ಥಿ ಎಡ್ಮಂಡೊ ಗೊನ್ಜಾಲೆಜ್ ವಿರುದ್ಧ 51% ಮತ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಆದರೆ, ಫಲಿತಾಂಶಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರಿಯಾ ಅವರು ಭಾರೀ ಬಹುಮತದಿಂದ ಗೆದ್ದಿದ್ದಾರೆ. ಆದರೆ, ಫಲಿತಾಂಶಗಳನ್ನು ತಿರುಚಲಾಗಿದೆ. ಫಲಿತಾಂಶದಲ್ಲಿ ವಂಚನೆಯ ನಡೆದಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಪ್ರತಿಭಟನೆ ನಡೆಸುತ್ತಿವೆ.
ಅಂದಹಾಗೆ, ಅತ್ಯಂತ ಪಾರದರ್ಶಕ ಚುನಾವಣೆ ನಡೆಯುವ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿರುವ ವೆನೆಜುವೆಲಾ ಇತ್ತೀಚಿನ ದಿನಗಳಲ್ಲಿ ರಾಜಕೀಯ ಬಿಕ್ಕಟ್ಟುಗಳಿಗೆ ಗುರಿಯಾಗಿದೆ. ವೆನೆಜುವೆಲಾ ರಾಜಕೀಯದ ಮೇಲೆ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಭಾವ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ, 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮಡುರೊ ಅವರನ್ನು ಅಧಿಕಾರದಿಂದ ಕಳೆಗಿಳಿಯುವಂತೆ 2019ರ ಜನವರಿಯಲ್ಲಿ ಅಮೆರಿಕಾ ಒತ್ತಡ ಹೇರಿತ್ತು. ಮಾತ್ರವಲ್ಲದೆ, ಚುನಾವಣೆ ಸ್ಪರ್ಧಿಸದೇ ಇದ್ದ ವ್ಯಕ್ತಿಯನ್ನು ಅಧ್ಯಕ್ಷನೆಂದು ಘೋಷಿಸಲಾಗಿತ್ತು. ಈ ಎಲ್ಲ ಬಿಕ್ಕಟ್ಟುಗಳನ್ನು ನಿಭಾಯಿಸಿದ ಮಡುರೊ 2019ರ ಜನವರಿ 10ರಂದು ಪ್ರಮಾಣ ವಚನ ಸ್ವೀಕರಿಸಿ, ಆಡಳಿತ ಮುಂದುವರೆಸಿದ್ದರು. ಇದೀಗ, ಅಂತದ್ದೇ ಪರಿಸ್ಥಿತಿಯನ್ನು ಸೃಷ್ಠಿಸಲು ಅಮೆರಿಕಾ ಯತ್ನಸುತ್ತಿದೆ ಎಂದು ಆರೋಪಿಸಲಾಗಿದೆ.
ಇಡೀ ಪ್ರಪಂಚದಲ್ಲಿಯೇ ಹೆಚ್ಚು ಕಚ್ಚಾ ತೈಲ ಹೊಂದಿರುವ ರಾಷ್ಟ್ರ ವೆನೆಜುವೆಲಾ. ಹೀಗಾಗಿ, ಅಲ್ಲಿನ ಅಧ್ಯಕ್ಷ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ತಮಗೆ ಬೇಕಾದವರನ್ನು ಅಧಿಕಾರಕ್ಕೇರಿಸಿ, ಅಲ್ಲಿನ ಕಚ್ಚಾ ತೈಲ ಸಂಪತ್ತನ್ನು ದೋಚುವ ಉದ್ದೇಶದಿಂದ ಅಮೆರಿಕ ಅಲ್ಲಿನ ವಿಪಕ್ಷಗಳಿಗೆ ಕುಮ್ಮಕ್ಕು ನೀಡುತ್ತಿದೆ. ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಲು ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಯತ್ನಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.