ಭ್ರೂಣಪತ್ತೆ ಸ್ಕ್ಯಾನಿಂಗ್ ಯಂತ್ರದ ದುರ್ಬಳಕೆ ಮಾಡಿಕೊಂಡು ಭ್ರೂಣಪತ್ತೆ ಮತ್ತು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಪಿಸಿಪಿಎನ್‌ಡಿಟಿ ಕಾಯಿದೆ ನಿಯಮ ದುರುಪಯೋಗದ ಅಡಿಯಲ್ಲಿ ದೂರು ದಾಖಲಾಗಿ, ತನಿಖಾ ಹಂತದಲ್ಲಿರುವ ಆರೋಪಿ ಡಾ. ದಾಕ್ಷಾಯಣಿ ಮತ್ತೆ ಕನಕಪುರ ಹೆರಿಗೆ ಆಸ್ಪತ್ರೆಗೆ ಬರಲು ನಡೆಸುತ್ತಿರುವ ನಡೆಯನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ವಿರೋಧಿಸಿದ್ದಾರೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, “ಡಾ. ದಾಕ್ಷಾಯಿಣಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮತ್ತೆ ಬರುತ್ತಿದ್ದು, ಅದಕ್ಕೆ ಆಸ್ಪದ ಕೊಡಬಾರದು” ಎಂದು ಒತ್ತಾಯಿಸಿದ್ದಾರೆ.
ವೈದ್ಯೆ ದಾಕ್ಷಾಯಿಣಿ ವಿರುದ್ಧ ಕನಕಪುರ ಸಿವಿಲ್ ನ್ಯಾಯಾಲಯದಲ್ಲಿ ದಿನಾಂಕ 23/04/2024ರಂದು ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುತ್ತದೆ. ತನಿಖಾ ಹಂತದಲ್ಲಿರುವ ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ಯಂತ್ರವನ್ನು ಕನಕಪುರ ಸಾರ್ವಜನಿಕ ಹೆರಿಗೆ ಆಸ್ಪತ್ರೆಯ ಕೊಠಡಿಯಲ್ಲಿ ಸೀಜ್ ಮಾಡಲಾಗಿದೆ ಮತ್ತು ಮೂರು ಜನ ಸಿಬ್ಬಂದಿಗಳ ಲಿಖಿತವಾಗಿ ಡಾ. ದಾಕ್ಷಾಯಿಣಿ ಸ್ಕ್ಯಾನಿಂಗ್ ಯಂತ್ರವನ್ನು ಉಪಯೋಗಿಸುತ್ತಿದ್ದರು ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಈ ಎಲ್ಲ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಿಕ್ಷಾರ್ಹ ವರ್ಗಾವಣೆ ಮಾಡಲಾಗಿತ್ತು. ಅಲ್ಲಿಗೆ ಹೋಗಿ ಕೆಲಸಕ್ಕೆ ವರದಿ ಮಾಡಿಕೊಂಡಿಲ್ಲ. ಅಸಹಜ ಕಾರಣಗಳನ್ನು ಕೊಟ್ಟು ಮೇಲಾಧಿಕಾರಿಗಳಾದ ತಮ್ಮ ಆದೇಶಕ್ಕೆ ಮತ್ತು ಕಾನೂನಿಗೂ ಗೌರವ ಕೊಡದೆ ಉದ್ದಟತನ ಪ್ರದರ್ಶನ ಮಾಡುತ್ತಿರುವ ನಡೆಯನ್ನು ಗಮನಿಸಿ ಸೂಕ್ತ ತೀರ್ಮಾನಕ್ಕೆ ಬರಬೇಕು ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಾ.ದಾಕ್ಷಾಯಣಿಯವರನ್ನು ಯಾವುದೇ ಕಾರಣಕ್ಕೂ ತನಿಖೆ ಮುಗಿದು, ಸತ್ಯಾಸತ್ಯತೆ ಗೊತ್ತಾಗುವ ತನಕ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಹೆರಿಗೆ ಆಸ್ಪತ್ರೆಗೆ ಮರು ನೇಮಕ ಮಾಡಬಾರದೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
