ಸಿದ್ಧ ಮಾದರಿಯ ಸಾಮಾಜಿಕ ಸಂರಕ್ಷಣೆ ಅತ್ಯಂತ ಅಪಾಯಕಾರಿ ಬೆಳವಣಿಗೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ಇದನ್ನು ಮೀರಿ ಬೆಳೆಯುವಂತಹ ಮನೋಭೂಮಿಕೆ ಬೆಳೆಸಿಕೊಳ್ಳಬೇಕೆಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಹಾಗೂ ಅಪೂರ್ವ ಪ್ರಕಾಶನದಿಂದ ಆಯೋಜಿಸಿದ್ದ ‘ಅಪ್ಪ ಪ್ರಶಸ್ತಿ ಪ್ರದಾನ’ ಸಮಾರಂಭ ಹಾಗೂ ರಾಜ್ಯ ಮಟ್ಟದ ಮುಂಗಾರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
“ಬಹಳಷ್ಟು ಜನ ಸಾಮಾಜಿಕ ಸಂರಚನೆಯ ಒಳಗಡೆಯೇ ಇದ್ದಾರೆ. ಅದನ್ನು ದಾಟಿ ಹೊರಬರುತ್ತಿಲ್ಲ. ಆದರೆ ಅದನ್ನು ದಾಟಿ ಹೊರಬರುವ ಕೆಲಸವನ್ನು ಸಾಹಿತಿಗಳು ಮಾಡಬೇಕಿದೆ. ನಾವುಗಳು ಯಾರೂ ಸಹ ಕಾಲವನ್ನು ಮೀರಿ ಬದುಕಬೇಕಿಲ್ಲ. ಕಾಲದೊಳಗೆ ಇದ್ದು, ಕಾಲವನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕು. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಏನೆಲ್ಲಾ ಇದ್ದವು ಎಂಬುದನ್ನು ಅವಲೋಕಿಸಬೇಕು. ಸತಿ ಪದ್ಧತಿ, ಬೆತ್ತಲೆ ಸೇವೆ, ದೇವದಾಸಿ ಇವೆಲ್ಲವೂ ಎಷ್ಟು ಅಮಾನವೀಯ ಎಂಬುದು ಗೊತ್ತಿದೆ. ದೇವದಾಸಿ ಇನ್ನೂ ಜೀವಂತವಿದೆ. ಇವನ್ನೆಲ್ಲ ಗ್ರಹಿಸುತ್ತಲೇ ಕಾಲಘಟ್ಟದೊಳಗೆ ಇದ್ದು, ಅದನ್ನು ಮೀರುವ ಮನೋಭೂಮಿಕೆಯನ್ನು ಸಾಧ್ಯವಾಗಿಸುವುದಾದರೆ ಅದೇ ನಿಜವಾದ ಸಾಹಿತ್ಯ ಮತ್ತು ಮಾನವೀಯತೆ” ಎಂದರು.
“ನಾವು ಕಾಲದ ಜತೆಗೆ ಬದುಕಬೇಕು. ಬೆಳವಣಿಗೆಗಳಿಗೆ ಮುಖಾಮುಖಿಯಾಗಬೇಕು. ಅನುಸಂಧಾನ ನಡೆಯಬೇಕು. ಆಗ ಮಾತ್ರ ಚಲನಶೀಲ ಮತ್ತು ಸೃಜನಶೀಲ ಕೃತಿ ಕೊಡಲು ಸಾಧ್ಯ. ಬರಹಗಾರರು ಸಿದ್ಧ ಮಾದರಿ ಮೀರಿ ಬೆಳೆಯುವುದನ್ನು ಕಲಿಯಬೇಕು. ಸಿದ್ಧ ಮಾದರಿಯ ಸಂಸ್ಕೃತಿಯ ಆಚೆಗೂ ಒಂದು ದಾರಿ ಇದೆ ಎಂಬುದನ್ನು ಕಂಡುಕೊಳ್ಳಬೇಕು. ನಮ್ಮೆದುರು ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ. ಅದರ ಹಿಂದೆ ಮತ್ತೊಂದು ಸತ್ಯ ಇದೆ ಎಂಬುದನ್ನು ಹುಡುಕಬೇಕು. ಹೀಗೆ ಸತ್ಯವನ್ನು ಹುಡುಕುವ ಸೃಜನಶೀಲತೆಯನ್ನು ಯಾರು ಬೆಳೆಸಿಕೊಳ್ಳುತ್ತಾರೋ ಅವರು ನಿಜವಾದ ಸಾಹಿತಿಗಳಾಗಲು ಸಾಧ್ಯ” ಎಂದು ಬಣ್ಣಿಸಿದರು.
ಲೇಖಕಿ ಬಾ ಹ ರಮಾಕುಮಾರಿ ಅತಿಥಿಗಳಾಗಿ ಮಾತನಾಡಿ, “ಹಿಂದೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಅಮ್ಮನ ಕೈಲಿತ್ತು. ಈಗ ಅಪ್ಪ-ಅಮ್ಮ ಇಬ್ಬರ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಅಪ್ಪನನ್ನು ಸ್ಮರಿಸುವ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕಾಯಕ ಒಳ್ಳೆಯ ಬೆಳವಣಿಗೆ. ರಾಜ್ಯ ಮಟ್ಟದ ಈ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ತುಮಕೂರಿನಲ್ಲಿಯೇ ಆಯೋಜಿಸಿ ನಾಲ್ಕು ಮಂದಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ. ನಾಲ್ವರಲ್ಲಿ ಒಬ್ಬರು ತುಮಕೂರು ಜಿಲ್ಲೆಯವರು ಎಂಬುದು ನಮಗೆ ಮತ್ತಷ್ಟು ಸಂಭ್ರಮ” ಎಂದು ವ್ಯಾಖ್ಯಾನಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ ಎಸ್ ಸಿದ್ಧಲಿಂಗಪ್ಪ ಮಾತನಾಡಿ, “ಅಪ್ಪ ಪ್ರಶಸ್ತಿಗೆ ತಜ್ಞರ ಸಮಿತಿ ನೇಮಿಸುವ ಬದಲು ಓದುಗರಿಗೆ ಆಯ್ಕೆ ಸ್ವಾತಂತ್ರ್ಯ ನೀಡಿರುವುದು ಅತ್ಯದ್ಬುತ ಕಾರ್ಯ. ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ಅರ್ಹರಿಗೆ ಪ್ರಶಸ್ತಿ ನೀಡುತ್ತಿರುವುದು ಮತ್ತು ಅದರ ಹಿಂದಿನ ಮಾನದಂಡವನ್ನು ನೋಡಿದರೆ ಅತ್ಯಂತ ಖುಷಿಯಾಗುತ್ತದೆ” ಎಂದರು.
“ನೂರು ಕೃತಿಗಳನ್ನು ಬರೆದು ಅವುಗಳು ಜನಮನ್ನಣೆ ಗಳಿಸದಿದ್ದರೆ ಪ್ರಯೋಜನವಿಲ್ಲ. ಇಲ್ಲಿ ನೀಡುತ್ತಿರುವ ಪ್ರಶಸ್ತಿ ಪುರಸ್ಕೃತರ ಕೃತಿಗಳನ್ನು ಗಮನಿಸಿದರೆ ಅದಕ್ಕೆ ತನ್ನದೇ ಆದ ಮೌಲ್ಯಗಳು ಇರುವುದನ್ನು ಗಮನಿಸಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಶೇ.40ರಷ್ಟು ಅಂಗನವಾಡಿಗಳಿಗಿಲ್ಲ ಸ್ವಂತ ಕಟ್ಟಡ!
ಪ್ರಶಸ್ತಿ ಪುರಸ್ಕೃತರು: ನೆಲದಾಯ ಪರಿಮಳ ಕೃತಿಯ ಸ್ಮಿತ ಅಮೃತರಾಜ್, ದೀಡೆಕೆರೆ ಜಮೀನು ಕೃತಿಯ ಮಲ್ಲಿಕಾರ್ಜುನ ಶಲ್ಲಿಕೇರಿ, ಕನ್ನಡ ನಾಟಕಗಳು ಕೃತಿಯ ಲೇಖಕ ಡಾ. ಟಿ ವೆಂಕಟೇಶಮೂರ್ತಿ, ಟ್ರಂಕು ತಟ್ಟೆ ಕೃತಿಯ ಗುರುಪ್ರಸಾದ್ ಕಂಟಲಗೆರೆ ಅವರಿಗೆ `ಅಪ್ಪ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಡಾ.ಅಮ್ಮಸಂದ್ರ ಸುರೇಶ್, ಬಹುಮುಖಿ ಗೆಳೆಯರ ಬಳಗದ ಸಂಚಾಲಕ ಟಿ ಸತೀಶ್ ಜವರೇಗೌಡ, ದಂಡಿನಶಿವರ ಮಂಜುನಾಥ್, ಕೆ ವಿ ವಿವೇಕ ಹಾಗೂ ಆರ್ ಜಿ ಗೋಪಾಲ್, ಎ ಆರ್ ರಂಗಸ್ವಾಮಿ, ಹೆಚ್ ಎಂ ವಸಂತಕುಮಾರ್, ಎಂ ವೈ ಗಂಗಣ್ಣ, ಎಸ್ ಎನ್ ದೇವರಾಜು ಸೇರಿದಂತೆ ಇತರರು ಇದ್ದರು.