ಈ ದಿನ ಸಂಪಾದಕೀಯ | ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಕಾಯಕಲ್ಪದ ಅಗತ್ಯವಿದೆ

Date:

Advertisements
ಕಾಂಗ್ರೆಸ್ ಸರ್ಕಾರಕ್ಕೆ ಕಾಯಕಲ್ಪದ ಅಗತ್ಯವಿದೆ. ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುನ್ನಡೆಸುವ ಶಕ್ತಿ ಕೇಂದ್ರವೊಂದರ ಅನಿವಾರ್ಯತೆಯೂ ಇದೆ. ಆ ನಿಟ್ಟಿನಲ್ಲಿ ಜಡ್ಡುಗಟ್ಟಿದ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಕುರ್ಚಿಯಿಂದ ಕೆಳಗಿಳಿಸಿ, ಸಾಮರ್ಥ್ಯ ಹಾಗೂ ವರ್ಚಸ್ಸು ಇರುವ ಹಿರಿಯ-ಕಿರಿಯ ನಾಯಕರನ್ನು ಸಚಿವರನ್ನಾಗಿಸಬೇಕಾಗಿದೆ.

‘ನಿಮ್ಮ ಕಾರ್ಯವೈಖರಿ ತೃಪ್ತಿದಾಯಕವಾಗಿ ಇಲ್ಲ. ಎರಡು ತಿಂಗಳು ಕಾದು ನೋಡುತ್ತೇವೆ. ಹೀಗೇ ಮುಂದುವರಿದರೆ ಸಹಿಸಲ್ಲ’ ಎಂದು ಸಚಿವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಖಡಕ್‌ ಎಚ್ಚರಿಕೆ ನೀಡಿದೆ.

ಬಿಜೆಪಿಯ ಬಿಗಿಮುಷ್ಟಿಯಿಂದ ಬಿಡಿಸಿಕೊಂಡ ರಾಜ್ಯ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕದ ಕಲ್ಯಾಣವಾಗದಿದ್ದರೂ, ಶಾಂತಿ ಸಹಬಾಳ್ವೆಯ ನಾಡಾಗಿ ಉಳಿಯಬಹುದೆಂಬ ನಿರೀಕ್ಷೆ ಮತದಾರರದಾಗಿತ್ತು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮೊದಲಿಗೆ ಸಿಕ್ಕ ಬಹಳ ದೊಡ್ಡ ಅವಕಾಶವೆಂದರೆ ಬರ. ಬರ ಸಮಸ್ಯೆಯನ್ನು ಸರ್ಕಾರ ಇನ್ನಷ್ಟು ಸಮರ್ಥವಾಗಿ ನಿರ್ವಹಿಸಿದ್ದರೆ, ಖಂಡಿತ ಜನಮನ್ನಣೆಗೆ ಪಾತ್ರವಾಗುತ್ತಿತ್ತು.

ಹಾಗೆಯೇ ಒಂದು ಸರ್ಕಾರ ಜನವಿರೋಧಿಯಾಗುವುದು ಯಾವ ಕಾರಣಕ್ಕೆ ಎಂದರೆ, ಅದು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ. ಕಾಂಗ್ರೆಸ್ಸಿಗರಿಗೆ ಮೊದಲಿನಿಂದಲೂ ಗೊತ್ತಿರುವ ‘ಮೇಯುವ’ ಮಾರ್ಗವಿದು. ಅಧಿಕಾರಕ್ಕೇರುತ್ತಿದ್ದಂತೆ ಬಾಯಿ ತೆರೆದು ಕೂತರು. ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಸಚಿವರು ವರ್ಗಾವಣೆಯಲ್ಲಿ ನಿರತರಾಗಿ, ಅದನ್ನು ದಂಧೆಯ ರೂಪಕ್ಕೆ ಇಳಿಸಿದರು. ಇವತ್ತು ವರ್ಗಾವಣೆ ಎನ್ನುವುದು ಯಾವ ಹಂತ ಮುಟ್ಟಿದೆ ಎಂದರೆ, ಪ್ರತಿಯೊಬ್ಬ ಸಚಿವರ ಟೇಬಲ್ ಮೇಲೂ ಫೈಲುಗಳು ರಾಶಿಗಟ್ಟಲೆ ಕೊಳೆಯುತ್ತ ಬಿದ್ದಿವೆ. ಅಧಿಕಾರಿಗಳು ಸಚಿವರ ಮುಂದೆ ನಡುಬಗ್ಗಿಸಿ ನಿಲ್ಲುವ ಕಾಲ ಹೋಗಿ, ಕೇಳಿದಷ್ಟು ಕೊಟ್ಟು ಬೇಕಾದ ಜಾಗಕ್ಕೆ ವರ್ಗಾವಣೆಯಾಗುವ ಕಾಲ ಬಂದಿದೆ. ಹೀಗಾದರೆ ಭ್ರಷ್ಟ ಅಧಿಕಾರಿಗಳು ಜನರ ಮಾತು ಕೇಳುತ್ತಾರೆಯೇ, ಕೆಲಸ ಮಾಡುತ್ತಾರೆಯೇ, ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆಯೇ?

Advertisements

ಇದಕ್ಕೆ ಜ್ವಲಂತ ಸಾಕ್ಷಿಯಂತೆ ಯಾದಗಿರಿ ಪಿಎಸ್ಐ ಪರಶುರಾಮ್ ಹೃದಯಾಘಾತ, ನಮ್ಮ ಕಣ್ಣಮುಂದಿದೆ. ಕಾಂಗ್ರೆಸ್ ಶಾಸಕ ಮತ್ತವನ ಮಗನ ಹಣದಾಹಕ್ಕೆ ಪರಶುರಾಮ್ ಪ್ರಾಣ ಹಾರಿಹೋಗಿದೆ.

ಈ ವರ್ಗಾವಣೆ ದಂಧೆಯ ಜೊತೆಗೆ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ. ಅಧಿಕಾರದ ಸ್ಥಾನಗಳಿಗಾಗಿ ಆಂತರಿಕ ಕಚ್ಚಾಟಗಳಲ್ಲಿ ಮುಳುಗೇಳುತ್ತಿದ್ದಾರೆ. ಪಕ್ಷದ ಆಂತರಿಕ ರಾಜಕೀಯ ಅಸ್ಥಿರತೆ ತಲೆದೋರಿದಾಗಲೆಲ್ಲ ಅನವಶ್ಯಕ ಹೆಚ್ಚುವರಿ ಡಿಸಿಎಂ ಬೇಡಿಕೆಯನ್ನು ಮುನ್ನೆಲೆಗೆ ತಂದು ಮತದಾರರಲ್ಲಿ ಭ್ರಮನಿರಸನ ಉಂಟು ಮಾಡುತ್ತಿದ್ದಾರೆ.

ಏತನ್ಮಧ್ಯೆ, ಲೋಕಸಭಾ ಚುನಾವಣೆ ಎದುರಾಗಿ ಅದು ಫಲಿತಾಂಶದಲ್ಲಿ ಕಾಣತೊಡಗಿತು. ಇದರಿಂದ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ, 2019ರಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್, 2024ರಲ್ಲಿ ಒಂಭತ್ತು ಸ್ಥಾನ ಗೆದ್ದಾಗ, ತನಗೆ ತಾನೇ ಬೆನ್ನು ತಟ್ಟಿಕೊಂಡಿತು. ಹೆಚ್ಚುವರಿ ಡಿಸಿಎಂ ಬೇಡಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿತು.

ಆ ನಂತರ ಹೊರಬಿದ್ದ ಮುಡಾ ಮತ್ತು ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಹಗರಣಗಳಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕತೆಯನ್ನು ಪ್ರದರ್ಶಿಸದೆ, ಜನತೆಯ ಮುಂದೆ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟು ಮನದಟ್ಟು ಮಾಡಿಸದೆ, ವಿಪಕ್ಷಗಳ ಸದ್ದು ಮತ್ತು ಸುದ್ದಿಯಲ್ಲಿ ಖಳನಾಯಕನಂತೆ ಕಾಣತೊಡಗಿತು.

ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಗರಣಗಳನ್ನು ಜನತೆಯ ಬಳಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವಾಗಲೇ, ರಾಜ್ಯದಲ್ಲಿ ಮಳೆ ಸುರಿಯತೊಡಗಿತು. ಧಾರಾಕಾರ ಮಳೆಗೆ ಜಲಾಶಯಗಳು ಭರ್ತಿಯಾಗಿವೆ. ಭೂ ಕುಸಿತ, ಜಲ ಪ್ರಳಯದಂತಹ ಗಂಭೀರ ಸಮಸ್ಯೆ ಎದುರಾಗಿದೆ. ಆದರೆ, ಇಲ್ಲಿಯೂ ಸಹ, ಮೂವತ್ತು ಚಿಲ್ಲರೆ ಮಂತ್ರಿಗಳಿದ್ದರೂ, ಕೆಲವರು ಮಾತ್ರ- ಶಾಸಕ ಸತೀಶ್ ಸೈಲ್, ಸಚಿವರಾದ ಬೋಸರಾಜು, ಕೃಷ್ಣ ಬೈರೇಗೌಡರು ಸಂತ್ರಸ್ತರನ್ನು ಸಂತೈಸುವ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಖುದ್ದು ನಿಂತು ನಿರ್ವಹಿಸುವ ಕೆಲಸದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಜೀವಂತವಿದೆ ಎಂದು ತೋರುತ್ತಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, ದೇಶದ ಗಮನ ಸೆಳೆದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ಸಿಗರೇ ಕಡೆಗಣಿಸಿದ್ದಾರೆ. ಅನುದಾನ ಸಿಗುತ್ತಿಲ್ಲವೆಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಆರ್ಥಿಕ ಅಸಮಾನತೆಯಿಂದ ಅತಂತ್ರರಾದ ಬಡ ಜನರಿಗೆ ಗ್ಯಾರಂಟಿ ಯೋಜನೆಗಳು ಕೊಂಚ ಮಟ್ಟಿಗಾದರೂ ನೆರವಾಗಿವೆ. ಬದುಕನ್ನು ಸಹ್ಯಗೊಳಿಸಿವೆ. ಬರ ನಿಭಾಯಿಸಿವೆ. ಆಶ್ಚರ್ಯವೆಂದರೆ, ಬಿಜೆಪಿ ಮತ್ತು ಮೋದಿಯವರು ಕಾಂಗ್ರೆಸ್ಸಿನ ಗ್ಯಾರಂಟಿಯಿಂದ ಪ್ರೇರಣೆ ಪಡೆದು, ಅದನ್ನೇ ‘ಮೋದಿ ಗ್ಯಾರಂಟಿ’ಯನ್ನಾಗಿ ಮಾಡಿಕೊಂಡು, ದೇಶದಾದ್ಯಂತ ಪ್ರಚಾರ ಪಡೆದುಕೊಂಡಿದ್ದಾರೆ. ಇಷ್ಟಾದರೂ, ಬುದ್ಧಿ ಕಲಿಯದ ಕಾಂಗ್ರೆಸ್ಸಿಗರು ಗ್ಯಾರಂಟಿ ಯೋಜನೆಗಳನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡಿಲ್ಲ. ದೊಡ್ಡ ದನಿಯಲ್ಲಿ ಪ್ರತಿಪಾದಿಸುತ್ತಲೂ ಇಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜಕಾರಣದಲ್ಲಿ ಭ್ರಷ್ಟಾಚಾರ ಎಂಬುದು ಗಂಭೀರ ವಿಷಯವೇ?

ಏತನ್ಮಧ್ಯೆ ಬಿಜೆಪಿ-ಜೆಡಿಎಸ್, ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು, ದುರಾಡಳಿತವನ್ನು ಜನತೆಯ ಮುಂದಿಡಲು ಪಾದಯಾತ್ರೆ ಹಮ್ಮಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ಹದಿನಾಲ್ಕು ತಿಂಗಳ ಆಡಳಿತಕ್ಕಿಂತ ಬಿಜೆಪಿ ಆಡಳಿತದಲ್ಲಿ ರಾಜ್ಯ ಹಾಳಾದದ್ದು, ಮತದಾರರಿಗಿಂತ ಮಂತ್ರಿಗಳಿಗೆ ಹೆಚ್ಚು ಗೊತ್ತಿದೆ. ಗೊತ್ತಿರುವ ಸತ್ಯವನ್ನು ಜನತೆಯ ಮುಂದಿಡುವಲ್ಲಿ ಕಾಂಗ್ರೆಸ್ ಮಂತ್ರಿಗಳು ಸೋತಿದ್ದಾರೆ.

ಕಾಂಗ್ರೆಸ್ಸಿಗರ ಈ ಸೋಗಲಾಡಿತನವನ್ನು ಮತ್ತು ಜಡತ್ವವನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಸಚಿವರ ಜೊತೆ ಸಭೆ ನಡೆಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ‘ಸರಿಯಾಗಿ ಕೆಲಸ ಮಾಡದವರನ್ನು ಕೈಬಿಟ್ಟು, ದಸರಾ ವೇಳೆಗೆ ಸಚಿವ ಸಂಪುಟ ಪುನರ್‌ ರಚಿಸುವ’ ಎಚ್ಚರಿಕೆ ನೀಡಿದ್ದಾರೆ.

ಹೌದು, ಕಾಂಗ್ರೆಸ್ ಸರ್ಕಾರಕ್ಕೆ ಕಾಯಕಲ್ಪದ ಅಗತ್ಯವಿದೆ. ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುನ್ನಡೆಸುವ ಶಕ್ತಿ ಕೇಂದ್ರವೊಂದರ ಅನಿವಾರ್ಯತೆಯೂ ಇದೆ. ಆ ನಿಟ್ಟಿನಲ್ಲಿ ಜಡ್ಡುಗಟ್ಟಿದ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಕುರ್ಚಿಯಿಂದ ಕೆಳಗಿಳಿಸಿ, ಸಾಮರ್ಥ್ಯ ಹಾಗೂ ವರ್ಚಸ್ಸು ಇರುವ ಹಿರಿಯ-ಕಿರಿಯ ನಾಯಕರನ್ನು ಸಚಿವರನ್ನಾಗಿಸಬೇಕಾಗಿದೆ. ಜನರ ಒಲವನ್ನು ಗಳಿಸಬೇಕಾಗಿದೆ.

ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಬಲಿಷ್ಠ ಬಿಜೆಪಿಯ ಬೆವರಿಳಿಸುತ್ತಿದ್ದಾರೆ. ವಿಶ್ವಗುರು ಎಂದು ಮೆರೆಯುತ್ತಿದ್ದ ಮೋದಿಯವರು ಸಂಸತ್ತಿಗೆ ಹಾಜರಾಗುವುದಕ್ಕೆ ಹತ್ತಾರು ಬಾರಿ ಯೋಚಿಸುವಂತೆ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬೆಲೆ ತರುವಂತಹ ನಡವಳಿಕೆಯಿಂದ ದೇಶದ ಜನತೆಯಲ್ಲಿ ಧೈರ್ಯ ತುಂಬುತ್ತಿದ್ದಾರೆ. ಭಾರತದ ಭವಿಷ್ಯದ ಬೆಳಕಾಗಿ ಕಾಣುತ್ತಿದ್ದಾರೆ.

ಇಂತಹ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಬದಲಾಗದಿದ್ದರೆ, ಅದು ರಾಹುಲ್ ಗಾಂಧಿಗೆ ಮತ್ತು ಬಹುಮತದಿಂದ ಗೆಲ್ಲಿಸಿದ ಕರ್ನಾಟಕದ ಮತದಾರರಿಗೆ ಮಾಡಿದ ಮೋಸವಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X