ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆಯ ನಂತರ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಸೇನೆಯು ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೊಹಮ್ಮದ್ ಯೂನುಸ್ ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಸಣ್ಣ ಉದ್ಯಮಗಳಿಗೆ ಬೆಂಬಲ ನೀಡಿ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವರು.
ಶೇಖ್ ಹಸೀನಾ ಅವರ 15 ವರ್ಷಗಳ ಸುದೀರ್ಘ ಆಡಳಿತ ಅಂತ್ಯವಾಗಿದೆ. ಸೋಮವಾರ(ಆ.05) ಹಸೀನಾ ಅವರು ದೇಶದಿಂದ ಪಲಾಯನಗೈದ ನಂತರ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಲೂಟಿ ಮಾಡಿದರು. ಸಂಸತ್ತಿಗೂ ದಾಳಿಯಿಟ್ಟ ಪ್ರತಿಭಟನಾಕಾರರು ಸಂಸದರ ಕುರ್ಚಿ ಮೇಲೆ ಕೂತು ಧೂಮಪಾನ ಸೇರಿದಂತೆ ಮುಂತಾದ ಅಸಭ್ಯ ಚಟುವಟಿಗಳನ್ನು ಮಾಡಿದರು.
ಹಸೀನಾ ಅವರು ತಮ್ಮ ತಂಗಿ ಶೇಖ್ ರೆಹಾನಾ ಅವರೊಂದಿಗೆ ಸೇನಾ ವಿಮಾನದ ಮೂಲಕ ದೇಶ ತೊರೆದ ಸುದ್ದಿ ಬಿತ್ತರವಾದ ಕೂಡಲೇ ಸಾವಿರಾರು ಸಂಖ್ಯೆಯ ಪ್ರತಿಭಟನಕಾರರು ಪ್ರಧಾನಿ ಅವರ ಅಧಿಕೃತ ನಿವಾಸಕ್ಕೆ ‘ಗಾನಾಭವನ್’ಗೆ ನುಗ್ಗಿ ಲೂಟಿ ಮಾಡಿದರು. ಮನೆಯ ಆವರಣದಲ್ಲಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಕಾಯಕಲ್ಪದ ಅಗತ್ಯವಿದೆ
ಧನ್ಮೋಂಡಿ ಮತ್ತು ಢಾಕಾದಲ್ಲಿನ ಅವಾಮಿ ಲೀಗ್ ಪಕ್ಷದ ಕಚೇರಿಗಳಿಗೂ ಬೆಂಕಿ ಹಚ್ಚುವ ಮೂಲಕ ಪ್ರತಿಭಟನ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಾಂಗ್ಲಾದೇಶದ ಮೀಸಲು ನಿಯಮವನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ಸೋಮವಾರವು ಪ್ರತಿಭಟನೆ ಮುಂದುವರಿದಿದ್ದು, 56 ಜನರು ಮೃತಪಟ್ಟಿದ್ದಾರೆ. ಇದರಿಂದ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ.