ನಿನ್ನೆ ಸಂಜೆ(ಆ.05) ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಸೋಮವಾರ ಸಂಜೆ ಸುರಿದ ಮಳೆಗೆ ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಾವೃತವಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವಾರಣವಿದ್ದು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗ್ಗೆಯಿಂದಲೇ ಕೆಲವೆಡೆ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಒಮ್ಮೆಗೆ ಸುರಿಯಲಾರಂಭಿಸಿದ ಮಳೆ ತಡರಾತ್ರಿಯವರೆಗೂ ಸುರಿಯಿತು. ಕೆಲವೆಡೆ ನಿರಂತರವಾಗಿ ಸುರಿದರೆ, ಮತ್ತೆ ಕೆಲವು ಬಡಾವಣೆಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಯಿತು. ಒಟ್ಟಾರೆ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕೆಲವೆಡೆ ಜೋರು ಮಳೆಯಿಂದಾಗಿ ರಸ್ತೆಯಂಚುಗಳಲ್ಲಿದ್ದ ಭಾರೀ ಮರಗಳು ಧರೆಗುರುಳಿ, ಸಂಚಾರ ದಟ್ಟಣೆ ಉಂಟಾಗಿತ್ತು.
ಜಯನಗರ, ಕೆಂಗೇರಿ, ಹೆಬ್ಬಾಳ, ಆರ್.ಟಿ. ನಗರ, ಮತ್ತಿಕೆರೆ, ಸಂಜಯನಗರ, ಮೈಸೂರು ರಸ್ತೆ, ಹಂಪಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಮೆಜೆಸ್ಟಿಕ್, ನಾಗರಬಾವಿ, ಶ್ರೀನಗರ, ವಿದ್ಯಾಪೀಠ, ಉತ್ತರಹಳ್ಳಿ, ಆರ್‌ಆರ್ ನಗರ, ಎಚ್.ಗೊಲ್ಲಹಳ್ಳಿ, ಬೊಮ್ಮನಹಳ್ಳಿ, ಜಯನಗರ, ಜೆ.ಪಿ.ನಗರ, ಬೆಳ್ಳಂದೂರು, ಎಚ್‌ಎಎಲ್ ವಿಮಾನ ನಿಲ್ದಾಣ, ವಿವಿ ಪುರಂ, ಸಂಪಿಗೆನಗರ, ಬಾಣಸವಾಡಿ, ನಂದಿನಿ ಲೇಔಟ್, ಚೊಕ್ಕಸಂದ್ರ, ಪೀಣ್ಯ ಕೈಗಾರಿಕಾ ಪ್ರದೇಶ, ಪುಲಕೇಶಿನಗರ, ಬಸವನಪುರ ಸೇರಿದಂತೆ ಹಲವು ಕಡೆ ಭರ್ಜರಿ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ಕಾಯಕಲ್ಪದ ಅಗತ್ಯವಿದೆ
ಮಳೆಯಿಂದ ಕೆಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಸಂಜೆ ಮಳೆಯಿಂದ ಬೀದಿಬದಿಯ ವ್ಯಾಪಾರಿಗಳು, ಪಾದಾಚಾರಿಗಳು ತೊಂದರೆ ಅನುಭವಿಸುವಂತಾಯಿತು. ಕೆಲವೆಡೆ ರಾತ್ರಿ ತಡವಾದರೂ ಮಳೆ ನಿಲ್ಲದ ಹಿನ್ನೆಲೆಯಲ್ಲಿ ಕ್ಯಾಬ್, ಆಟೊಗಳನ್ನು ಬುಕ್ ಮಾಡಿದರೂ ಸಿಗುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರು ತೀವ್ರ ಸಮಸ್ಯೆಗೊಳಗಾದರು.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ, ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ಸಂಜೆ ಮಳೆಯಾಗಿದೆ. ಹವಾಮಾನ ವರದಿ ಪ್ರಕಾರ ಅಗಸ್ಟ್ 12 ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.
