ಕಾರಟಗಿ ಪಿಎಸ್‌ಐ ಪರಶುರಾಮ್ ಅವರ ಸಾವಿನ ಹಿಂದಿರುವ ಶಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿ ಛಲವಾದಿ ಮಹಾಸಭಾದಿಂದ ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿಯವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಛಲವಾದಿ ಮಹಾಸಭಾದ ಅಧ್ಯಕ್ಷ ಆನಂದ್ ಶಿಂಗಾಡಿ ಮಾತನಾಡಿ, “ಪಿಎಸ್‌ಐ ಸೇವೆ ಸಲ್ಲಿಸುತ್ತಿದ್ದ ಪರಶುರಾಮ್ ಎಂಬ ಅಧಿಕಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿರುವ ಗೃಹ ಸಚಿವರ ಹೇಳಿಕೆ ಖಂಡನೀಯ. ಯಾದಗಿರಿ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪಿಎಸ್‌ಐ ಪರಶುರಾಮ ಅವರ ಸಾವಿನ ಹಿಂದಿನ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದರು.
“ಪಿಎಸ್‌ಐ ಪರಶುರಾಮ ಅವರಿಗೆ ಯಾದಗಿರಿ ಜಿಲ್ಲೆಯ ಶಾಸಕ ಮತ್ತು ಅವರ ಪುತ್ರ ಕಿರುಕುಳ ನೀಡಿ, ಪರಶುರಾಮ್ ಅವರಿಗೆ ಲಂಚದ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಅವರು ಬೇಸರ ವ್ಯಕ್ತಪಡಿಸಿದ್ದರೆಂಬುದು ಅವರ ಕುಟುಂಬದವರ ಆರೋಪದಲ್ಲಿ ನಮೂದಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ವ್ಯಕ್ತಿಗಳು ಅಧಿಕಾರ ಹಿಡಿಯುವುದೇ ಸಾಹಸವಾಗಿರುವ ಈ ಕಾಲಘಟ್ಟದಲ್ಲಿ ಅದೇ ಸಮುದಾಯಕ್ಕೆ ಸೇರಿದ ಒಬ್ಬ ಪೋಲಿಸ್ ಅಧಿಕಾರಿಯನ್ನು ರಾಜಕೀಯ ಬಲದಿಂದ ಶಾಸಕರು ಮತ್ತು ಅವರ ಹಿಂಬಾಲಕರು ಕಿರುಕುಳ ನೀಡಿ ಅವರ ಸಾವಿಗೆ ಕಾರಣರಾಗಿದ್ದಾರೆ. ಹಾಗಾಗಿ ಅವರ ಸಾವಿಗೆ ಕಾರಣರಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು” ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ್ ಶಿಂಗಾಡಿ ಅಸಮಾಧಾನ ವ್ಯಕ್ತಪಡಿಸಿದರು.
ದಲಿತಪರ ಹೋರಾಟಗಾರ ಶರೀಫ್ ಬಿಳಿಯಲಿ ಮಾತನಾಡಿ, “ದಲಿತ ಸಮುದಾಯದ ಪೋಲಿಸ್ ಅಧಿಕಾರಿಗೆ ಕಿರುಕುಳ ನೀಡಿದ್ದಲ್ಲದೇ ಅವರ ಸಾವಿಗೂ ಕಾರಣರಾಗಿರುವವರ ಮೇಲೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ 1989ರ ಅಡಿ ಪ್ರಕರಣ ದಾಖಲಾಗಿದ್ದರೂ ಈವರೆಗೆ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿಲ್ಲ. ಇದು ದಲಿತರಿಗೆ ಮಾಡುವ ಅಪಮಾನವೇ ಸರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಕ್ಷಣೆ ನೀಡಬೇಕಾದ ಪೋಲಿಸ್ ಅಧಿಕಾರಿಗೇ ಈ ರೀತಿ ಆದರೆ ಇನ್ನೂ ಜನಸಾಮಾನ್ಯರ ಗತಿ ಏನು? ದಲಿತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ದವಾಗಿದೆಯೆಂದು ಹೇಳಿದ ಸರ್ಕಾರ ಇವತ್ತು ದಲಿತರನ್ನು ದಮನ ಮಾಡಲು ಹೊರಟಿದೆ, ಇದು ನಿಲ್ಲಬೇಕು. ಕೇವಲ ದಲಿತಪರ ಕಾಳಜಿ ಇದ್ದರೆ ಸಾಲದು ಅವರ ಶ್ರೇಯೋಭೀವೃದ್ಧಿಗೆ ಕೆಲಸ ಮಾಡಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪ್ರತ್ಯೇಕ ಘಟನೆ; ತಾಯಿ ಮೇಲೆ ಅತ್ಯಾಚಾರ, ಮನೆಗೆ ನುಗ್ಗಿ ಮಹಿಳೆಯ ಕೊಲೆ
“ಪಿಎಸ್‌ಐ ಪರಶುರಾಮ ಅವರ ಸಾವಿಗೆ ನ್ಯಾಯ ನೀಡಲೇಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಒಂದು ವೇಳೆ ಸರ್ಕಾರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ದಲಿತ ಮುಖಂಡ ಬಾಲರಾಜ್ ಅರಬರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತಪರ ಮುಖಂಡರು ಮುತ್ತು ಬಿಳಿಯಲಿ, ಪರಶು ಕಾಳೆ, ಅನಿಲ್ ಕಾಳೆ, ಬಸವರಾಜ್ ಬಿಳಿಯಲಿ, ಮಲ್ಲೇಶ್ ಹೊಸಮನಿ, ಶಿವಾನಂದ ತಮ್ಮಣ್ಣವರ, ಯಲ್ಲಪ್ಪ, ಮುತ್ತು ಚೌಡಣ್ಣವರ, ರಮೇಶ್ ಸೇರಿದಂತೆ ಅನೇಕರಿದ್ದರು.