ಈ ದಿನ ವಿಶೇಷ | ಕಳೆದುಕೊಂಡಿದ್ದು… ಎನ್.ಎಸ್. ಶಂಕರ್ ಬರೆಹ

Date:

Advertisements
ಇಂದು ಬಿಜೆಪಿಯ ಬಾಲ ಹಿಡಿದಿರುವ ಎಲ್ಲ ಮಹನೀಯರಿಗೂ ಗೊತ್ತು- ಮೋದಿಯವರ ಆಳ್ವಿಕೆಯಲ್ಲಿ ಗ್ಯಾಸ್ ಸಿಲಿಂಡರ್ ಸಾವಿರ ರೂಪಾಯಿ ಆಗಿದೆ, ನಿರುದ್ಯೋಗ ಹಿಂದೆಂದೂ ಇಲ್ಲದಷ್ಟು ವಿರಾಟ್‌ರೂಪ ತಾಳಿದೆ, ದೇಶದ ಸಾಲ ಒಂದೂಮುಕ್ಕಾಲು ಲಕ್ಷ ಕೋಟಿ ರೂಪಾಯಿ ದಾಟಿದೆ, ದೇಶದ ಸಂಪತ್ತು ಕೆಲವೇ ಉದ್ಯಮಪತಿಗಳ ಕೈ ಸೇರುತ್ತಿದೆ ಎಂದು. ಆದರೆ ಮೋದಿಯವರ ಮುಖ ನೋಡಿ ವೋಟು ಹಾಕುವವರಿಗೆ ಇದ್ಯಾವುದೂ ವಿಷಯವೇ ಅಲ್ಲ. ಅವರೆಲ್ಲರಿಗೂ ಸಾಬರನ್ನು ಹದ್ದುಬಸ್ತಿನಲ್ಲಿಡುವ ಬಲಿಷ್ಠ ಸರ್ವಾಧಿಕಾರಿಯೊಬ್ಬ ಬೇಕು. ಮತ್ತು ಅಷ್ಟು ಮಾಡಿದರೆ ಸಾಕೋ ಸಾಕು. 

ಇವರು ನನ್ನ ಪರಮಾಪ್ತ ಗೆಳೆಯರಲ್ಲಿ ಒಬ್ಬರು. ನನಗಿಂತ ಹತ್ತು ವರ್ಷ ಹಿರಿಯರು. ಸುಮಾರು ನಾಲ್ಕು ದಶಕಗಳಿಂದ ಒಂದೇ ಸಮ ನನ್ನ ಹಿತೈಷಿಯಾಗಿ, ಆತ್ಮಸಂಗಾತಿಯಾಗಿ ನನಗೆ ಒಳಿತನ್ನೇ ಹಾರೈಸುತ್ತ ಬಂದವರು. ಮೂಲತಃ ಪತ್ರಕರ್ತ. ಇಲ್ಲಿ ನಾನು ಅವರ ಹೆಸರು ಹೇಳುವುದಿಲ್ಲ. ಆದರೆ ಈ ಬರಹ ಯಾರ ಬಗ್ಗೆ ಅಂತ ಅವರಿಗೂ ಗೊತ್ತಾಗುತ್ತದೆ, ನನ್ನ ಬಳಗದಲ್ಲಿರುವ ಬಹುತೇಕ ಗೆಳೆಯರಿಗೂ ಗೊತ್ತಾಗುತ್ತದೆ. ಹೆಸರು ಮುಖ್ಯವೂ ಅಲ್ಲ. ಆದರೆ ಇವರ ಗೆಳೆತನ- ಈಗೀಗ ನನ್ನಲ್ಲಿ ಸರಳ ಆನಂದದ ಜೊತೆಜೊತೆಗೇ ಮಹಾ ಗೊಂದಲವನ್ನೂ ಉಕ್ಕಿಸುತ್ತದೆ! ಅವರನ್ನು ನೆನೆಸಿಕೊಂಡೊಡನೆ ಎಣೆಯಿಲ್ಲದ ಭಾವತುಮುಲ ಹೊಯ್ದಾಡುತ್ತದೆ.

ಅವರು ನನ್ನ ಪಾಲಿಗೆ ಭಾವನಾತ್ಮಕ ಊರುಗೋಲೂ ಹೌದು, ಆದರೆ ಈಗ ನನ್ನ ಎಲ್ಲ ನಂಬಿಕೆ- ತತ್ವಗಳ ಬದ್ಧ ಶತ್ರುವೂ ಹೌದು! ತಾತ್ವಿಕವಾಗಿ ನನಗೆ ವಿರುದ್ಧ ಧ್ರುವದಲ್ಲಿರುವವರನ್ನು ಸಾಮಾನ್ಯವಾಗಿ ನಾನು ನಿರ್ದಾಕ್ಷಿಣ್ಯವಾಗಿ ದೂರ ಇಟ್ಟುಬಿಡುತ್ತೇನೆ. ಆದರೆ ಈ ಗೆಳೆಯರ ವಿಷಯದಲ್ಲಿ ಅಷ್ಟೇ ನಿಷ್ಠುರವಾಗಿ ವರ್ತಿಸಲಾರೆ. ಯಾಕೆಂದರೆ ಅವರ ಪೂರ್ವಗ್ರಹಗಳ ಕಡು ಘಾಟು ನನ್ನ ಉಸಿರು ಕಟ್ಟಿಸುವಾಗಲೂ ಅವರಿಂದ ನನಗೆ ಉದ್ದಕ್ಕೂ ದಕ್ಕಿದ ಬೇಷರತ್ ಕಾರುಣ್ಯ ಮನವನ್ನು ತೋಯಿಸುತ್ತದೆ!…

ಇಲ್ಲಿ ಒಂದೆರಡಾದರೂ ನೆನಪುಗಳನ್ನು ಮೆಲುಕು ಹಾಕಬೇಕು. 79ರ ನವೆಂಬರ್‌ನಲ್ಲಿ ‘ಜನವಾಣಿ’ ಸಂಜೆ ಪತ್ರಿಕೆ ಸೇರ್ಪಡೆಯಾದ ನಾನು 1980ರ ಕಡೆಗೆ ಅಲ್ಲಿಂದ ಹೊರಬರಲು ವಿಶೇಷ ಕಾರಣಗಳೇನೂ ಇರಲಿಲ್ಲ. ಮುಖ್ಯ ವರದಿಗಾರ ಷಣ್ಮುಗಂ, ಸಹಸಂಪಾದಕ ಸೀತಾರಾಂ (ಅಗ್ನಿಮಿತ್ರ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆಯುತ್ತಿದ್ದರು) ಮತ್ತು ಸುದ್ದಿ ಸಂಪಾದಕ ಸುಂದರರಾಜ್ ಅವರುಗಳು ತಮ್ಮದೇ ಕಾರಣಗಳಿಗಾಗಿ ಪತ್ರಿಕೆ ಬಿಟ್ಟರು. ಅವರ ಹಿಂದೆ ಬಾಲದಂತೆ ನಾನು ಮತ್ತು ವಿ. ಮನೋಹರ್ ಸುಖಾಸುಮ್ಮನೆ ಹೊರಬಂದೆವು! ಮುಂದಕ್ಕೆ ಕನ್ನಡ ಚಿತ್ರರಂಗದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿ ಅರಳಿದ ಮನೋಹರ್ ಆಗ ಜನವಾಣಿಯ ವ್ಯಂಗ್ಯಚಿತ್ರಕಾರ ಮತ್ತು ಪ್ರೂಫ್ ರೀಡರ್.

Advertisements

ನಮ್ಮನ್ನೆಲ್ಲ ಇಟ್ಟುಕೊಂಡು ಷಣ್ಮುಗಂ ‘ಸಿಟಿ ವಾಯ್ಸ್’ ಎಂಬ ಕನ್ನಡ ವಾರಪತ್ರಿಕೆ ಆರಂಭಿಸಿದರು. ವಾರಪತ್ರಿಕೆ ಎಂಬುದು ಮುಖಪುಟದಲ್ಲಿ ಘೋಷಿಸಿಕೊಂಡ ವಾಕ್ಯ ಮಾತ್ರ, ಆದರೆ ಮನಸ್ಸಿಗೆ ಬಂದಾಗ ಹೊರಬರುತ್ತಿದ್ದ ಅನಿಯತಕಾಲಿಕ ಅದು! ಹಾಗೆಯೇ ಯಾರ ಸಂಬಳ ಎಷ್ಟು ಎಂಬ ವಾಗ್ದಾನವೂ ಇರಲಿಲ್ಲ. ಯಾವಾಗ ಕೈಗೆ ಬರುವುದೆಂಬ ಖಾತ್ರಿಯೂ ಇರಲಿಲ್ಲ. ಅವರಿಗೆ ಮನಸ್ಸು ಬಂದಾಗ ಅಥವಾ ಸಾಮರ್ಥ್ಯ ಬಂದಾಗ ನಮ್ಮ ಕೈಗೆ ಯಾವಾಗಲೋ ಒಮ್ಮೆ ತಲಾ ನೂರು ರೂಪಾಯಿ ಕೈಗಿಡುತ್ತಿದ್ದರು… ಹಾಗಾಗಿ ನಾನು ಮತ್ತು ಮನೋಹರ್ ನಿರಾಶ್ರಿತರಂತೆ, ಇದ್ದುದರಲ್ಲೇ ಸುಧಾರಿಸಿಕೊಂಡು ಹೋಗುತ್ತಿದ್ದೆವು. ‘ಸಿಟಿ ವಾಯ್ಸ್’ ಕಚೇರಿ ಇದ್ದುದು ಬಸವನಗುಡಿಯಲ್ಲಿ- ಆರ್.ವಿ. ಪ್ರೌಢಶಾಲೆ ಸಮೀಪ. ‘ಗುಡುಗು’ ನಾರಾಯಣ್ ಎಂಬ ಪತ್ರಕರ್ತ ತಮ್ಮ ಕಚೇರಿಯನ್ನು ಷಣ್ಮುಗಂಗೆ ತಾತ್ಕಾಲಿಕವಾಗಿ ಬಿಟ್ಟುಕೊಟ್ಟಿದ್ದರು. ‘ಗುಡುಗು’ ಎಂಬುದು ಅವರ ಪತ್ರಿಕೆಯ ಹೆಸರು. ಅದೂ ಅನಿಯತಕಾಲಿಕವೇ. ಆಗಂತೂ ಪ್ರಕಟಣೆ ನಿಂತಿತ್ತು.

ಕಚೇರಿ ಹತ್ತಿರದ ಸರ್ಕಲ್‌ನಲ್ಲಿ ಒಂದು ಹೋಟೆಲ್ ಇತ್ತು. ಕಾವೇರಿ ಹೋಟೆಲ್ ಅಂತ ಇರಬೇಕು, ಹೆಸರು ಸರಿಯಾಗಿ ನೆನಪಿಲ್ಲ. ಕಾಸಿದ್ದಾಗ ನಾನು, ಮನೋಹರ್ ಅಲ್ಲಿಗೆ ಹೋಗುತ್ತಿದ್ದೆವು. ಏನಿದೆ ಎಂದು ಕೇಳುತ್ತಿದ್ದೆವು. ಸಪ್ಲೈಯರ್ ಎಲ್ಲ ಪಟ್ಟಿ ಒಪ್ಪಿಸಿದ ಮೇಲೆ ಮನೋಹರ್ ಮೊದಲು ಅದರ ದರ ಎಷ್ಟು, ಇದೆಷ್ಟು ಎಂದು ವಿಚಾರಿಸುತ್ತಿದ್ದ. ನಮ್ಮ ಜೇಬಿನ ತೂಕ ನೋಡಿಕೊಂಡು ಎರಡು ಇಡ್ಲಿಯೋ, ಒಂದು ದೋಸೆಯೋ ಆರ್ಡರ್ ಮಾಡಿ ತಿನ್ನುತ್ತಿದ್ದೆವು. ಕಾಫಿ, ಟೀಗೆಲ್ಲ ದುಡ್ಡು ವೇಸ್ಟ್ ಮಾಡುತ್ತಿರಲಿಲ್ಲ!

ಆ ಸಮಯದಲ್ಲಿ ನಮ್ಮ ಈ ಹಿರಿಯ ಗೆಳೆಯರು ಆಗೊಮ್ಮೆ ಈಗೊಮ್ಮೆ ನಮ್ಮನ್ನು ನೋಡಿ ಹೋಗಲು ಬರುತ್ತಿದ್ದರು. ಬಂದವರು ಏನೂ ಹೇಳದೆ ನನ್ನನ್ನೂ, ಮನೋಹರನನ್ನೂ ಆ ಹೋಟೆಲಿಗೆ ಕರೆದೊಯ್ಯುತ್ತಿದ್ದರು. ನಮಗೆ ಬೇಕಾದ್ದನ್ನೆಲ್ಲ ಕೊಡಿಸುತ್ತಿದ್ದರು. ಜೊತೆಗೆ ಕಾಫಿಯನ್ನೂ. ಬಿಲ್ ಕೊಟ್ಟು ಹೊರಬಂದು ಇಬ್ಬರಿಗೂ ತಲಾ ಎರಡೆರಡು ರೂಪಾಯಿ ಕೈಗಿತ್ತು ಹೋಗಿಬಿಡುತ್ತಿದ್ದರು. (ಎರಡು ರೂಪಾಯಿಗೆ ಆಗ ಸಾಕಷ್ಟು ಬೆಲೆ ಇತ್ತು. ಜೋಪಾನವಾಗಿ ನಿಭಾಯಿಸಿದರೆ ಎರಡು ಹೊತ್ತಿನ ಹಸಿವೇ ನೀಗುತ್ತಿತ್ತು.) ಆಗ ಅಥವಾ ಮುಂದೆ ಯಾವಾಗಲೂ ಅದರ ಬಗ್ಗೆ ಅವರು ಎಂದೂ ಒಂದು ಮಾತೂ ಆಡಿಲ್ಲ. ಹೀಗೆ ನಮ್ಮ ಭೀಕರ ಬರಗಾಲದ ದಿನಗಳಲ್ಲಿ ಅವರು ಓಯಸಿಸ್‌ನಂತೆ ಹಾಜರಿ ಹಾಕಿ ಹೋಗುತ್ತಿದ್ದುದಕ್ಕೆ ಬೆಲೆ ಕಟ್ಟುವುದು ಹೇಗೆ?…

ನಾನು ಎಂದೆಂದೂ ನನ್ನ ವೈಯಕ್ತಿಕ ಸಂಕಷ್ಟಗಳನ್ನು ಬಹಿರಂಗವಾಗಿ ತೋಡಿಕೊಳ್ಳುವುದಿಲ್ಲ. ಆದರೆ ಒಂದು ಪ್ರಸಂಗ ಇಲ್ಲಿ ಹೇಳುವುದು ಅನಿವಾರ್ಯ. 2003ರಲ್ಲಿ ‘ರಾಂಗ್‌ನಂಬರ್’ ಸಿನಿಮಾ ಮಾಡಿ ಮೈಮೇಲೆ ಬ್ರಹ್ಮಾಂಡ ಸಾಲ ಎಳೆದುಕೊಂಡು ಕಂಗೆಟ್ಟು ಕೂತಿದ್ದೆ. ಆಗ ಸುದೀರ್ಘ ಕಾಲ ನನ್ನನ್ನು ಹೂತುಹಾಕಿದ್ದ ಗಾಢ ಹತಾಶೆಯ ಕೂಪವನ್ನು ಹಿಡಿದಿಡುವ ಭಾಷೆ ನನಗಿನ್ನೂ ದಕ್ಕಿಲ್ಲ. ಆ ಸ್ಥಿತಿ ಆಗ ನನ್ನನ್ನು ತಿಂಗಳಾನುಗಟ್ಟಳೆ, ಇನ್ನು ಬದುಕಬೇಕೋ ಬೇಡವೋ ಎಂಬ ಹೊಯ್ದಾಟಕ್ಕೆ ನೂಕಿತ್ತು. ನನ್ನ ಸೋಲಿನ ಸೂತಕದ ಮಸಿ ಅಂಟಿಸಿಕೊಳ್ಳಲು ತಯಾರಿರದ ನನ್ನ ಅತ್ಯಾಪ್ತರು ಕೂಡ ಆ ಕಾಲದಲ್ಲಿ ನನ್ನಿಂದ ತಾವಾಗಿಯೇ ದೂರ ಸರಿದಿದ್ದರು. ಮುಂದೇನು ಹಾದಿ ತಿಳಿಯುತ್ತಿಲ್ಲ. ಬರಿಗೈ. ಸಾಲಗಾರರಿಗೆ ಏನು ಉತ್ತರ ಹೇಳಬೇಕು ತೋಚುತ್ತಿಲ್ಲ. ರಾತ್ರಿ ಹೊತ್ತಲ್ಲದ ಹೊತ್ತಿನಲ್ಲಿ ಬೆಚ್ಚಿ ಏಳುತ್ತಿದ್ದೆ. ಇಡೀ ಹಗಲು ಕಳೆಯುವುದೇ ಒಂದು ಏದುಸಿರಿನ ಸಾಹಸದಂತಿದ್ದಾಗ ನಿತ್ಯ ಪ್ರೆಸ್‌ಕ್ಲಬ್‌ಗೆ ಹೋಗಿ ಕೂರುತ್ತಿದ್ದೆ. ಮಧ್ಯಾಹ್ನದಿಂದ ರಾತ್ರಿಯವರೆಗೆ. ಆಗ ಅಷ್ಟೂ ಕಾಲ ನನಗೆ ಜೊತೆಯಾಗಿ ಬಂದು ಕೂರುತ್ತಿದ್ದವರು ಇದೇ ಹಿರಿಯ ಗೆಳೆಯ… ಅತ್ತ ನನ್ನ ಮಾತು ಸಂಪೂರ್ಣ ಉಡುಗಿಹೋಗಿತ್ತು. ಹೆಚ್ಚುಕಮ್ಮಿ ಇಡೀ ದಿನ ಮೌನವಾಗಿರುತ್ತಿದ್ದೆ. ಯಾರಾದರೂ ಏನಾದರೂ ಕೇಳಿದರೆ ಉತ್ತರಿಸುವ ಸ್ಥೈರ್ಯವೂ ಇರಲಿಲ್ಲ. ಮಾತು ಬೇಕಾಗಿಯೂ ಇರಲಿಲ್ಲ. ಒಂದು ಮಾತು ಹೊರಡಿಸುವುದು ಕೂಡ ನನ್ನ ಚೈತನ್ಯವನ್ನೆಲ್ಲ ಒಗ್ಗೂಡಿಸಿಕೊಂಡು ದನಿ ತೆಗೆಯಬೇಕಾದ ತ್ರಾಸದ ಕೆಲಸವಾಗಿತ್ತು… ಆಗ ಈ ಗೆಳೆಯರು ದಿನವಿಡೀ ನನ್ನ ಜೊತೆ ಕೂತಿರುತ್ತಿದ್ದರು. ಬಾಯಿ ಬಿಟ್ಟರೆ ನನ್ನ ಆಂತರ್ಯವೇ ಒಡೆದುಹೋಗುವುದೆಂದು ಅರಿತವರಂತೆ ಮೌನವಾಗಿ. ಆ ಮೌನವೂ ಭಾರವಾಗದ ನಾಜೂಕಿನಿಂದ. ಊಟ ಮಾಡೋಣ್ವಾ? ಟೀ ಕುಡೀತೀರಾ? -ಇಷ್ಟೇ ಮಾತುಗಳು. ಹೀಗೆ ಒಂದು ದಿನವಲ್ಲ, ಎರಡು ದಿನವಲ್ಲ, ತಿಂಗಳುಗಟ್ಟಳೆ ಇದೇ ಮೌನ ಮತ್ತು ಸಹಾನುಭೂತಿಯಿಂದ ನನಗೆ ಜೊತೆಯಾದರು. ಆ ಸಮಯದಲ್ಲಿ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿತ್ತೋ ನನಗೀಗಲೂ ಗೊತ್ತಿಲ್ಲ. ನನ್ನ ಸೋಲು ಮತ್ತು ಮೌನ ಅವರನ್ನು ಹಿಮ್ಮೆಟ್ಟಿಸಬೇಕಿತ್ತು, ಹಾಗಾಗಲಿಲ್ಲ, ಅವರು ಜೊತೆಗೇ ಕೂತರು. ಆಕ್ಷೇಪಣೆಯಿಲ್ಲದೆ, ಪ್ರಶ್ನೆಗಳಿಲ್ಲದೆ, ಒತ್ತಾಯಗಳಿಲ್ಲದೆ, ಉಪದೇಶವಿಲ್ಲದೆ. ಈ ಮೌನಸಾಂಗತ್ಯ- ನನ್ನ ಅಂತಃಸ್ಥೈರ್ಯವನ್ನು ನಿಧಾನಕ್ಕೆ ಕುದುರಿಸುತ್ತ ಬದುಕಿನತ್ತ ಸೆಳೆಯತೊಡಗಿತು…

ಈ ಹಿರಿಯರನ್ನು ಕುರಿತ ಇಂಥ ಎಷ್ಟೋ ನೆನಪುಗಳು ನನ್ನಲ್ಲಿ ತುಂಬಿವೆ. ನೂರು ಸಂದರ್ಭಗಳಲ್ಲಿ ನನಗೆ ಹೀಗೆ ಬೇಷರತ್ ಪ್ರೀತಿ ಧಾರೆ ಎರೆದ ಜೀವ ಅದು. ಉದ್ದಕ್ಕೂ ನನಗೆ ಬೆಂಗಾವಲಾಗಿ ನಿಂತಿದ್ದಾರೆ, ನನ್ನನ್ನು ಸಮರ್ಥಿಸಿದ್ದಾರೆ, ನನ್ನ ಹಿತೈಷಿಯಾಗಿ ಹಾರೈಸಿದ್ದಾರೆ. ಅಂದಿಗೂ, ಇಂದಿಗೂ. ಅವರನ್ನು ಈಗ ಏಕಾಏಕಿ ಹೇಗೆ ದೂರ ತಳ್ಳಲಿ?…

ಇದನ್ನು ಓದಿದ್ದೀರಾ?:ಈ ದಿನ ಸಂಪಾದಕೀಯ | ಬಡವನ ಬದುಕು ಬದಲಿಸಿದ ರಾಹುಲ್ ಗಾಂಧಿ ಮತ್ತು ಮೋದಿ

ಆದರೆ 2014ರಿಂದ ಅವರ ನಿಲುವುಗಳಲ್ಲಿ ಆಘಾತಕಾರಿ ಬದಲಾವಣೆಗಳು ಕಾಣತೊಡಗಿದವು. 2019ರಿಂದಲಂತೂ ಹೊಡೆದು ಕಾಣುವಷ್ಟು ಮಾರ್ಪಾಡುಗಳು ಬಂದವು. ಮುಂಚೆಯೂ ಒಮ್ಮೊಮ್ಮೆ ಅವರು ‘ನಾನು ಹಿಂದೂ’ ಎನ್ನುತ್ತಿದ್ದರು. ಆದರೆ ನಮಗೆ ಅದು ತಮಾಷೆಯಾಗಿ ಕೇಳಿಸುತ್ತಿತ್ತು. ಯಾಕೆಂದರೆ ಅವರು ನಾನು ಕಂಡಂತೆ ಯಾವಾಗಲೂ ಮೇಲ್ಜಾತಿ ಹಮ್ಮು ಪ್ರದರ್ಶಿಸದೆ, ಹಿಂದುಳಿದವರು ಮತ್ತು ದಲಿತರ ಪರ ನಿಲ್ಲುತ್ತಿದ್ದರು. ಆ ವರ್ಗಗಳ ಪತ್ರಕರ್ತರನ್ನು ಹುಡುಕಿ ನನಗೆ ಪರಿಚಯ ಮಾಡಿಕೊಡುತ್ತಿದ್ದರು. ಅಂಥವರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದರು. ಸದಾ ಮತ್ತೊಬ್ಬರ ಕಷ್ಟಕ್ಕೆ ಮಿಡಿಯುತ್ತಿದ್ದರು. ಹಿಂದು ಮುಂದು ನೋಡದೆ ಸಹಾಯಕ್ಕೆ ಮುನ್ನುಗ್ಗುತ್ತಿದ್ದರು. ನನಗೆ ಗೊತ್ತಿರುವ ಮತ್ತೊಬ್ಬ ಬ್ರಾಹ್ಮಣ ಪತ್ರಕರ್ತ ಇವರ ಬಳಿ ‘ನಾವು ಬ್ರಾಹ್ಮಣರು ಒಗ್ಗಟ್ಟಾಗಿರಬೇಕು’ ಎಂದಾಗ ‘ಹೋಗಯ್ಯ’ ಎಂದು ಗದರಿ ಕಳಿಸಿದ್ದರು!

ಮೋದಿ ಮೇನಿಯಾ2

ಹಾಗಿದ್ದವರಿಗೆ 2014ರಿಂದೀಚೆಗೆ ಮೋದಿಗುರುಡು ಆವರಿಸತೊಡಗಿತು. ಫೇಸ್‌ಬುಕ್‌ನಲ್ಲಿ ನಿಧಾನವಾಗಿ ಬಿಜೆಪಿ ಸರ್ಕಾರವನ್ನು, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ, ಸಮರ್ಥಿಸುವ ಪೋಸ್ಟ್‌ಗಳನ್ನು ಹಾಕತೊಡಗಿದರು. ಬಿಜೆಪಿ ಪಕ್ಷ ಮಾತ್ರವಲ್ಲ, ಇಡೀ ಸಂಘ ಪರಿವಾರದ ಚಿಂತನೆಗೆ ಈ ಮಹನೀಯರು ಸಾಷ್ಟಾಂಗ ಶರಣಾಗಿದ್ದರು. 2019ರಲ್ಲಿ ಬಿಜೆಪಿ ಎರಡನೇ ಬಾರಿ ಆರಿಸಿ ಬಂದ ಮೇಲಂತೂ ಇವರು ಬಿಜೆಪಿಯ ಎರಡು ರೂಪಾಯಿ ಟ್ರೋಲ್ ಸೈನ್ಯಕ್ಕೆ ಯಾವುದೇ ರೀತಿಯಲ್ಲಿ ಕಮ್ಮಿಯಿಲ್ಲದಂತೆ ‘ಸನಾತನ ಧರ್ಮ’ ಎಂದು ಎದೆ ತಟ್ಟಿ ಕೂಗುವುದು, ಮುಸ್ಲಿಂ ವಿರುದ್ಧ ವಿಷ ಕಾರುವುದು; 370ನೇ ವಿಧಿ ರದ್ದು, ಸಿಎಎ ಕಾಯ್ದೆ- ಇಂಥ ಕ್ರಮಗಳ ಪರ ತೋಳೇರಿಸಿ ವಾದಕ್ಕೆ ನಿಲ್ಲುವುದು, ಸಂಘದ ಸುಳ್ಳುಗಳನ್ನು ಮನಸಾ ಪ್ರಚಾರ ಮಾಡುವುದು… ಅಂತೂ ಪತ್ರಕರ್ತರಾಗಿ ಮುಂಚೆ ವಿಮರ್ಶೆ ವಿಶ್ಲೇಷಣೆಗಳಿಗೆ ಹೆಸರಾಗಿದ್ದ ಇವರ ಲೇಖನಿ ಈಗ ಸಂಪೂರ್ಣವಾಗಿ ಬ್ರಾಹ್ಮಣವಾದಿ, ಕೋಮುವಾದಿ ರಕ್ತದಿಂದ ಕೆಂಪೇರತೊಡಗಿತು. ಈ ಹಿರಿಯ ಹೃದಯವಂತ, ಏಕ್‌ದಂ ಒಂದು ಪಕ್ಷದ, ಅದರ ತತ್ವದ ಕುರುಡು ಸಮರ್ಥಕರಷ್ಟೇ ಅಲ್ಲ, ಪ್ರಚಾರಕರೂ, ಪರಿಚಾರಕರೂ ಆಗಿಬಿಟ್ಟರು.

ಶುರುವಿನಲ್ಲಿ ಇವರ ಫೇಸ್‌ಬುಕ್ ಹೇಳಿಕೆಗಳಿಗೆ ಪ್ರತ್ಯುತ್ತರ ನೀಡುತ್ತ ಪ್ರಶ್ನೆಗಳನ್ನು ಎತ್ತುತ್ತಿದ್ದ ನಾನು ಬರಬರುತ್ತ ಮಾತು ಕಳೆದುಕೊಂಡು ಸುಮ್ಮನಾದೆ. ಅವರು ಹೆಚ್ಚು ಹೆಚ್ಚು ಉಗ್ರರಾದಷ್ಟೂ ನಾನು ಅಷ್ಟೂ ಮೌನವಾದೆ. ಈಗಂತೂ ಅವರೊಂದಿಗೆ ವಾಗ್ವಾದ ಸಾಧ್ಯವೇ ಇಲ್ಲ ಎನ್ನುವಷ್ಟು ತೆಪ್ಪಗಾಗಿದ್ದೇನೆ.

ಇಲ್ಲಿ ಅವರ ಕೆಲವಾದರೂ ಪೇಸ್‌ಬುಕ್ ಪೋಸ್ಟ್‌ಗಳನ್ನು ಉದಾಹರಿಸಿದರೆ ಅವರಲ್ಲಿ ಬಂದ ಮಾರ್ಪಾಡು ಸ್ಪಷ್ಟವಾದೀತು.

ಮೊದಲಿಗೆ ಅವರ ಮೋದಿ ಭಜನೆ:

* ಭಾರತದ ದಿವ್ಯ, ಧೀರೋದಾತ್ತ ಪುಣ್ಯಪುರುಷ ನರೇಂದ್ರ ಮೋದಿ.

* ನಾನು ಮೋದಿ ಪರಿವಾರದ ಸದಸ್ಯನಾಗಿದ್ದೇನೆ. ದೇಶರಕ್ಷಣೆ ನನ್ನ ಕರ್ತವ್ಯ.

* ರಾಷ್ಟ್ರಪುರುಷ ಮೋದಿ ಸಂಸತ್ತಿನಲ್ಲಿ ಈಗಷ್ಟೇ ಒಂದೂಮುಕ್ಕಾಲು ಗಂಟೆ ಮಹೋನ್ನತವಾಗಿ ಮಾತನಾಡಿದರು.

* ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಅಂತ್ಯಕ್ರಿಯೆ ಮಾಡ್ತಿದಾರೆ.

* ಮೋದಿ ವಿರೋಧಿಗಳು ಭೇದಿ ಅಂತ ನಿನ್ನೆ ಬಯಲಿಗೆ ಹೋಗಿ ಕುಳಿತವರು ಅಲ್ಲೇ ಐಕ್ಯ.

ಇನ್ನು ಬಿಜೆಪಿ ಪಕ್ಷದ ಸಮರ್ಥಕರಾಗಿ:

* ಭಾಜಪ ಅಧಿಕಾರ ಕಳಕೊಂಡ ದಿನವೇ ಭಾರತಕ್ಕೆ ಸಾವು ಸಂಭವಿಸುತ್ತದೆ.

* ಅನುರಾಗ್ ಠಾಕೂರ್, ಪ್ರತಾಪ ಸಿಂಹ, ಅಣ್ಣಾಮಲೈ, ತೇಜಸ್ವಿ ಸೂರ್ಯ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ, ಪಿ. ರಾಜೀವ್- ಹೀಗೆ ಸಾಲು ಸಾಲು ಭಾಜಪ ಯುವಕರು ಮುಂದೆ ದೇಶವನ್ನು ಆಳಲಿದ್ದಾರೆ.

* ಅಡ್ವಾಣಿ ಅವರಿಗೆ ಭಾರತರತ್ನ ಗೌರವ ಸಿಕ್ಕ ಸುದ್ದಿ ಕೇಳಿ ಕೆಲವರ ಕಿವಿಗೆ ಕಾದ ಸೀಸ ಹಾಕಿದಂತಾಗಿರಬೇಕು.

* ಬರುವ ಲೋಕಸಭಾ ಚುನಾವಣೆಯಲ್ಲಿ (2024ರ ಲೋಕಸಭಾ ಚುನಾವಣೆ) ದೇಶದ ಜನ ರಾಹುಲನಿಗೆ ಬಣ್ಣದ ಗಿಲಕಿ ಕೊಟ್ಟರೆ ಸೂಕ್ತ ಗಿಫ್ಟ್ ಆಗುತ್ತೆ.

* ಕೇಂದ್ರ ಮಂಡಿಸಿದ್ದು ಪ್ರಗತಿಪರ ಬಜೆಟ್. ಭಿಕ್ಷುಕರು ನಿರೀಕ್ಷಿಸಿದ್ದು ಜನಪ್ರಿಯ ಗ್ಯಾರಂಟಿಗಳನ್ನು.

modi bhakt

ಕಾಂಗ್ರೆಸ್ ವಿರೋಧಿ ಪ್ರಚಾರ:

* ಆರಂಭದಿಂದಲೂ ಸಂವಿಧಾನಕ್ಕೆ ಗಾಯ ಮಾಡಿಕೊಂಡೇ ಬಂದ ಪಕ್ಷ ಈಗ ಸಂವಿಧಾನ ಉಳಿಸಿ ಅಂತ ಭಜನೆ ಮಾಡ್ತಿದೆ.

ಮುಸ್ಲಿಂ ವಿರೋಧ:

* ಇಪ್ಪತ್ತನೇ ಶತಮಾನದ ಮಹಾನ್ ದಾರ್ಶನಿಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರೆದ ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕವನ್ನು ಭಾರತದ ಎಲ್ಲ ಭಾಷೆಗಳಿಗೆ ಅನುವಾದಿಸಬೇಕು. ಇದನ್ನು ಆಯಾ ಭಾಷೆಯ ಮಕ್ಕಳಿಗೆ ಓದಲು ಕಡ್ಡಾಯ ಮಾಡಬೇಕು. ಆಗಲಾದರೂ ದೇಶ ಪ್ರಕ್ಷುಬ್ಧತೆಯಿಂದ ಹೊರಬರಲು ಸಾಧ್ಯ.

* ಮುಸ್ಲಿಮರು ಜಗತ್ತಿನಲ್ಲಿಯೇ ಸಮಾನತೆ ತತ್ವದಿಂದ ಹೊರಗೆ ನಿಂತ ಜನಾಂಗ: ಅಂಬೇಡ್ಕರ್ (ಥಾಟ್ಸ್ ಆನ್ ಪಾಕಿಸ್ತಾನ್)

* ಭಾರತದ ಮೇಲೆ ಇಸ್ಲಾಮಿಕ್ ಹಿಂಸಾತ್ಮಕ ಆಕ್ರಮಣ ಮಾಡಲು ದೇವ್ಬಂದಿ ಮದರಸ ಕರೆ ಕೊಟ್ಟಿದೆ.

ಸನಾತನ ವಾದಗಳು:

* ಜಗತ್ತಿನಲ್ಲಿಯೇ ಉಳಿದಿರೋದು ಹಿಂದೂ ನಾಗರಿಕತೆಯೊಂದೇ. ಅದನ್ನು ಉಳಿಸಿಕೊಳ್ಳುವ ಪ್ರತಿಜ್ಞೆ ಮಾಡೋಣ.

* ಶೂದ್ರರಿಗೆ ಅಕ್ಷರ ವಂಚಿಸಲಾಯಿತು, ಕಿವಿಗೆ ಕಾದ ಸೀಸ ಹಾಕಲಾಯಿತು ಎಂಬ ಸುಳ್ಳನ್ನು ನಂಬಿಕೊಂಡೇ ಇದೀರಾ?

ಇನ್ನು ಸುಳ್ಳುಗಳು?:

* ಕಳೆದ ಐವತ್ತು ವರ್ಷಗಳಿಂದ ವಿಧಾನಸೌಧದ ಮುಂದೆ ಆಗಾಗ ಕ್ರೈಸ್ತರು ತಮ್ಮ ಮತಪ್ರಚಾರ ಮಾಡ್ತಾ ಬಂದಿದಾರೆ.

* ದನದ ಮಾಂಸ ತಿಂದರೆ ಕೋಲನ್ ಕ್ಯಾನ್ಸರ್ ಬರುತ್ತಂತೆ ಹೌದಾ? ಕೇರಳದಲ್ಲಿ ಇದು ಹರಡಿದೆ ಅಂತ ಸುದ್ದಿ.

ಜೈಶ್ರೀರಾಮ್!:

* ಜನವರಿ ಇಪ್ಪತ್ತೆರಡರಂದು ಪ್ರಭು ಶ್ರೀರಾಮಚಂದ್ರನ ಆಡಳಿತ ಭಾರತವನ್ನು ಆವರಿಸಿಕೊಳ್ಳಲಿದೆ. ಇದನ್ನು ವಿರೋಧಿಸುವವರು ಅಂದು ಸಂಜೆ ಗೋಧೂಳಿ ಸಮಯದಲ್ಲಿ ನಿಮ್ಮ ನಿಮ್ಮ ಮನೆಗಳ ಮುಂದೆ ಸಕುಟುಂಬ ಪರಿವಾರ ಸಮೇತ ನಿಂತುಕೊಂಡು ಒಂದು ಗಂಟೆ ಕಾಲ ಬಾಯಿ ಬಡಿದುಕೊಳ್ಳಿ. ಗುಡ್ ಐಡಿಯಾ ಅಲ್ವಾ?

ಮೋದಿ ಮೇನಿಯಾ1

* ರಾಮಾಯಣ. ಮಹಾಭಾರತದ ಕಾಲದಲ್ಲಿ ಋಷಿಗಳು ಲೋಕ ಕಲ್ಯಾಣಕ್ಕಾಗಿ ಯಾಗ, ಯಜ್ಞಗಳನ್ನು ಮಾಡುತ್ತಿದ್ದಾಗ ರಾಕ್ಷಸರು ಅದನ್ನು ಹಾಳುಗೆಡವುತ್ತಿದ್ದರು. ಈಗ ಸನ್ ಸಾವಿರದ ಎರಡು ಸಾವಿರದ ಇಪ್ಪತ್ಮೂರರಲ್ಲಿ ದೇವಗಣವೆಂದು ಪರಿಗಣಿಸಲಾಗಿರುವ ಭಾರತೀಯ ಜನತಾ ಪಾರ್ಟಿ ಲೋಕ ಕಲ್ಯಾಣಕ್ಕಾಗಿ ಪ್ರಭು ಶ್ರೀರಾಮಚಂದ್ರರನ್ನು ಪುನರ್ ಪ್ರತಿಷ್ಠಾಪಿಸಲು ಮುಂದಾಗಿದೆ. ಇಂಥ ಪುಣ್ಯ ಕಾಲದಲ್ಲಿ ರಾಕ್ಷಸ ಗಣಗಳೆಂದು ಪ್ರಸಿದ್ಧಗೊಂಡಿರುವ ಕಾಂಗ್ರೆಸ್, ಕುಮ್ಮಿಗಳು ಸೇರಿದಂತೆ ಪ್ರತಿಪಕ್ಷಗಳು ಶ್ರೀರಾಮಚಂದ್ರನ ಪ್ರತಿಷ್ಠಾಪನಾ ಸಮಾರಂಭವನ್ನು ಹಾಳು ಮಾಡಲು ಮುಂದಾಗಿವೆ. ಆಹಾ, ತಾಯಿ ಭಾರತಿ ನಿನ್ನ ಗರ್ಭಾಂಬುಧಿಯಲ್ಲಿ ರಕ್ಕಸ ಗುಣದ ಮಿಡಿ ನಾಗರಗಳನ್ನೇ ಹಡೆದಿಯಲ್ಲೇ ತಾಯಿ!…

ಹಾಗೇ ತೆರಿಗೆ ಹಂಚಿಕೆಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದಕ್ಕಾಗಿ ಎಷ್ಟು ವಾದ ವಿವಾದಗಳಾದುವಲ್ಲ? ಈಗಂತೂ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದ್ದೂ ಆಯಿತು. ಆ ಸಂದರ್ಭದಲ್ಲಿ ನಮ್ಮ ಈ ಗೆಳೆಯರು, ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದು ವಾದ ಹೂಡಿದ ಒಬ್ಬ ಭಕ್ತನ ಸುದೀರ್ಘ ಪೋಸ್ಟನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು!

ಇಷ್ಟು ಮಾಡಿದ ಮೇಲೆ ಆಹಾರದ ಬಗ್ಗೆ ಒಂದೂ ಪೋಸ್ಟ್ ಬೇಡವೇ?! ಇವರು ಹಂಚಿಕೊಂಡ ಯಾರದೋ ‘ಬ್ರಾಹ್ಮಣ ಊಟ’ದ ಜಾಹೀರಾತು ಹೀಗಿದೆ:…

* ಸಾತ್ವಿಕ ಸಸ್ಯಾಹಾರಿ ಬ್ರಾಹ್ಮಣ ಮನೆ ಶುಚಿ ರುಚಿಯ ಅಡುಗೆಯ ಕ್ಯಾರಿಯರ್ ಊಟ ನಿಮ್ಮ ಕರೆಯ ಮೂಲಕ ನಿಮ್ಮ ಮನೆ ಬಾಗಿಲಿಗೆ… ಯಾವುದೇ ಸೋಡ, ಬೆಳ್ಳುಳ್ಳಿ, ಈರುಳ್ಳಿ ಹಾಗೂ ರಾಸಾಯನಿಕ ಪದಾರ್ಥಗಳಿಲ್ಲದ ಸ್ವಚ್ಛತೆಯ ಉತ್ತಮ ಪದಾರ್ಥಗಳನ್ನು ಉಪಯೋಗಿಸಿದ ಮನೆ ಅಡುಗೆಗೆ ಸಂಪರ್ಕಿಸಿ…

* * *

ಈ ಗೆಳೆಯರು ಹೀಗೆ ಅವಿರತವಾಗಿ ತಲೆಯಲ್ಲಿ ಹಿಂದೂತ್ವದ, ಕೋಮುನಂಜಿನ, ಭಕ್ತಿ ಉನ್ಮಾದದ ಹೂಳು ತುಂಬಿಕೊಳ್ಳುತ್ತ ಹೋದರು. ಆಗ ನನ್ನಂಥ ಬಡಪಾಯಿ ಏನು ಮಾಡಬಹುದು? ಅವರ ಸ್ನೇಹ ಕಡಿದುಕೊಳ್ಳಲೇ? ಆದರೆ ಅದು ಹೇಗೆ ಸಾಧ್ಯ? ಜೀವನವಿಡೀ ಅವರು ತೋರಿದ ನಿರ್ವ್ಯಾಜ ಮಮಕಾರವನ್ನು ಹೇಗೆ ಅಲ್ಲಗಳೆಯಲಿ?

ಮನೆಯಲ್ಲಿ ಅತ್ಯಂತ ನಿಕಟವಾದ ಒಂದು ಜೀವ ಕ್ಯಾನ್ಸರ್‌ಗೆ ತುತ್ತಾಗಿ, ಕಡೆ ದಿನಗಳನ್ನು ಎಣಿಸುತ್ತಿದೆ ಎಂದು ಗೊತ್ತಾದಾಗ ಎಂಥ ನಿಸ್ಸಹಾಯಕ ದಿಗ್ಭ್ರಾಂತಿ ಉಂಟಾಗಬಹುದೋ, ಹಾಗಿದೆ ಈಗ ನನ್ನ ಮನಸ್ಥಿತಿ. ಇವರ ಮಾರಣಾಂತಿಕ ಕಾಯಿಲೆ ಗುಣವಾಗುವುದಿಲ್ಲ ಎಂದು ನನಗೆ ಗೊತ್ತು. ಅದಕ್ಕೆ ಮದ್ದಿಲ್ಲ. ಆದರೆ ನನ್ನ ಕೈಯಲ್ಲಿ ಏನೂ ಇಲ್ಲ. ಕೊನೆಯುಸಿರೆಳೆಯುವುದನ್ನೇ ಮೌನವಾಗಿ ನಿರುಕಿಸುತ್ತ ನಿಡುಸುಯ್ಯುತ್ತ ಕಾಯುವುದೊಂದೇ ಉಳಿದ ದಾರಿ…

ನಾನಿಲ್ಲಿ ಅವರ ದೇಹ ಮತ್ತು ಪ್ರಾಣದ ಬಗ್ಗೆ ಮಾತನಾಡುತ್ತಿಲ್ಲ, ಅದು ನಿಮಗೂ ಗೊತ್ತು. ಆದರೆ ದಶಕಗಳ ಕಾಲ ನನ್ನ ಜೀವವನ್ನು ಬೆಚ್ಚಗಿಟ್ಟಿದ್ದ ಇನ್ನೊಂದು ಜೀವ ವಾಪಸು ಬರಲಾರದ ಹಾದಿಯಲ್ಲಿ ನನ್ನ ಕೈಗೆಟುಕದಷ್ಟು ದೂರ ಸಾಗಿಬಿಟ್ಟಿದೆ. ಅವರು ಈಗಲೂ ನನಗೆ ಆತ್ಮೀಯರೇ, ಆದರೆ ನಾನು ಅವರನ್ನು ಶಾಶ್ವತವಾಗಿ ಕಳೆದುಕೊಂಡುಬಿಟ್ಟಿದ್ದೇನೆ. ಮಾತಿಲ್ಲದ ಗಾಢ ಸಂಕಟ ಮಾತ್ರ ಉಳಿದಿದೆ…

ಆದರೆ ಇಲ್ಲೇಕೆ ಈ ಪ್ರವರ ಬರೆಯಬೇಕಾಯಿತು? ಯಾಕೆಂದರೆ ಅವರನ್ನು ತಿನ್ನುತ್ತಿರುವ ಕ್ಯಾನ್ಸರ್ ರೋಗಕ್ಕೆ ಇಂದು ಇಡೀ ದೇಶವೇ ತುತ್ತಾಗಿದೆ! ದುರಂತವೆಂದರೆ ಸ್ವತಃ ರೋಗಗ್ರಸ್ತರಿಗೆ ಅದು ಕಾಯಿಲೆ ಅನಿಸುತ್ತಿಲ್ಲ…!

* * *

‘ಭಾರತದ ದಿವ್ಯ, ಧೀರೋದಾತ್ತ ಪುಣ್ಯಪುರುಷ ನರೇಂದ್ರ ಮೋದಿ’, ‘ಅವರೇ ಈ ದೇಶದ ಅಂತಿಮ ಉದ್ಧಾರಕ’ ಎಂದು ಕೊಂಡಾಡುತ್ತಿರುವವರು ಈ ನನ್ನ ಗೆಳೆಯರು ಮಾತ್ರವಲ್ಲ. ಹೆಚ್ಚು ಕಮ್ಮಿ ದೇಶವೇ ತನ್ನ ವಿಮರ್ಶಾ ಪ್ರಜ್ಞೆ, ವಿವೇಚನೆಗಳನ್ನೆಲ್ಲ ಅಡ ಇಟ್ಟು ಇದೇ ಸೊಲ್ಲು ಹಿಡಿದಿದೆ; ಮನಃಪೂರ್ವಕವಾಗಿ ಬೌದ್ಧಿಕ ಗುಲಾಮಗಿರಿಯನ್ನು ಸ್ವೀಕರಿಸಿಬಿಟ್ಟಿದೆ. (ಗುರುರಾಜ ಕರ್ಜಗಿಯವರಂಥ ಶಿಕ್ಷಣವೇತ್ತರು ‘ನರೇಂದ್ರ ಮೋದಿ ಭಗವಂತನ ಅವತಾರ’ ಎಂದಿದ್ದರು!)

ಹಾಗಿರುವಾಗ ಅದನ್ನೇ ಒಪ್ಪಿ ಮುನ್ನಡೆಯಲು ನಮಗೇನು ರೋಗ? ಏನು ನಮ್ಮ ಸಮಸ್ಯೆ?

ನಮ್ಮ ಸಮಸ್ಯೆ ಇಷ್ಟೇ: ಆ ಬಣದ ಏಕೈಕ ತಾತ್ವಿಕತೆ- ದ್ವೇಷ. ಮನುಷ್ಯರೆಲ್ಲರೂ ಒಂದೇ ಎಂಬುದನ್ನು ಎಂದೆಂದಿಗೂ ಒಪ್ಪದ ನಿಲುವು ಅದು. ಜನಾಂಗ ದ್ವೇಷವೇ ಅವರ ವಿಸಿಟಿಂಗ್ ಕಾರ್ಡ್. ಅವರ ಸೈದ್ಧಾಂತಿಕ ಪೂರ್ವಿಕರಾದ ಸಾವರ್ಕರ್, ಗೋಳ್ವಾಲ್ಕರ್ ಮುಂತಾದವರು ಬೋಧಿಸಿದ್ದು ಇದನ್ನೇ: ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಈ ದೇಶದ ಎರಡನೇ ದರ್ಜೆ ಪ್ರಜೆಗಳು. ಅವರು ತಮ್ಮ ಅಧೀನ ಸ್ಥಾನ ಒಪ್ಪಿಕೊಂಡು ಇರುವುದಾದರೆ ಮಾತ್ರ ಅವರಿಗೆ ಈ ದೇಶದಲ್ಲಿ ಸ್ಥಾನ… ಹಿಂದೂಗಳು ಮತ್ತು ಮುಸ್ಲಿಮರು ಎರಡು ಪ್ರತ್ಯೇಕ ದೇಶಗಳೆಂಬ ವಾದ ಮೊದಲು ಮಂಡಿಸಿದ್ದು ಮಹಮ್ಮದಾಲಿ ಜಿನ್ನಾ ಅಲ್ಲ, ಸಾವರ್ಕರ್. ಹಾಗಾಗಿ ಈ ನಿಲುವಿನ ಸಮರ್ಥಕರು ಯಾರೇ ಆಗಿರಲಿ, ಎಂಥ ಪ್ರತಿಭಾವಂತರೇ ಆಗಿರಲಿ, ನನ್ನ ಮನಸ್ಸು ಅವರನ್ನು ಧಿಕ್ಕರಿಸುತ್ತದೆ. ಅಂಥವರು ಯಾವ ಕ್ಷೇತ್ರದಲ್ಲಿದ್ದರೂ,- ಅವರು ಕಲಾವಿದರೋ, ನಟ ನಟಿ, ನಿರ್ದೇಶಕರೋ, ಬರಹಗಾರರೋ, ಯಾರೇ ಆದರೂ, ಎಂಥ ಉನ್ನತ ಸಾಧನೆಯನ್ನು ಮಾಡಿದವರಾದರೂ, ನಿಷ್ಕಾರಣವಾಗಿ ಪಕ್ಕದ ಜೀವಿಯ ಪ್ರಾಣಹರಣವನ್ನು ಸಮರ್ಥಿಸುವ ಮನಃಸ್ಥಿತಿ ಅವರಲ್ಲಿದೆ ಎಂಬ ಒಂದೇ ಕಾರಣಕ್ಕಾಗಿ ಅವರನ್ನು ಧಿಕ್ಕರಿಸುತ್ತೇನೆ. ಅವರು ಸ್ವತಃ ಕೊಲೆಗಾರರಲ್ಲದಿರಬಹುದು, ಆದರೆ ಕೊಲೆಯನ್ನು ಮೌನವಾಗಿ ಒಪ್ಪಿಕೊಳ್ಳುವ, ಅನುಮೋದಿಸುವ ಪರೋಕ್ಷ ಕೊಲೆಗಡುಕರು ಅವರು ಎಂಬ ಕಾರಣಕ್ಕೆ ನನ್ನ ಧಿಕ್ಕಾರ…

ಇಂಥ ವಾತಾವರಣದಲ್ಲಿ, ‘ಈ ದೇಶ ಇಲ್ಲಿ ವಾಸಿಸುವ ಎಲ್ಲರಿಗೂ ಸೇರಿದ್ದು’ ಎಂದು ನಂಬಿರುವ ನನ್ನಂಥವರು ಏನು ಮಾಡಬೇಕು?

main qimg 389d420f9f6fda227fec2b865c8bc812 lq

ಹಿಂದೂ ಮುಸ್ಲಿಮರು ಒಂದೇ ತಾಯಿಯ ಮಕ್ಕಳು ಎಂದು ಹೇಳಿದ, ಅದನ್ನು ಸಾಧಿಸುವ ಹಾದಿಯಲ್ಲೇ ಹುತಾತ್ಮರಾದ ಗಾಂಧೀಜಿಯ ವಾರಸುದಾರರು ನಾವು. ದೇಶ ವಿಭಜನೆ ಸಮಯದಲ್ಲಿ ಪೂರ್ವ ಬಂಗಾಳದ (ಈಗ ಬಾಂಗ್ಲಾದೇಶ) ನೌಖಾಲಿ ಮತ್ತು ಟಿಪ್ಪೆರಾ ಜಿಲ್ಲೆಗಳಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರವನ್ನು ಶಮನಗೊಳಿಸಲು ಬರಿಗಾಲಲ್ಲಿ ಹಳ್ಳಿ ಹಳ್ಳಿ ಸುತ್ತಿದ ಬಾಪೂ ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಅನುರಣಿಸುತ್ತಲೇ ಇವೆ:

* ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಮರು ಪರಸ್ಪರ ಪ್ರೀತಿ, ನಂಬಿಕೆಗಳಿಂದ ಬಾಳೋದೇ ಸಹಜವಾದದ್ದು, ಜಗಳ ಆಡೋದಲ್ಲ… ವೈಷ್ಣವರಲ್ಲಿ ನಮ್ಮದು (ಅಂದರೆ ಗಾಂಧಿ ಕುಟುಂಬದ್ದು) ಪ್ರಣಾಮಿ ಪಂಥ. ನಮ್ಮ ಗುಡೀಲಿ ಬ್ರಾಹ್ಮಣ ಅರ್ಚಕರು- ಅವರು ಪೂಜೆ ಮಾಡೋವಾಗ ಈ ಕಡೆ ಭಗವದ್ಗೀತೆ ಇಟ್ಕೋತಿದ್ರೆ, ಈ ಕಡೆ ಕುರಾನ್ ಇರೋದು. ಒಂದ್ಸಲ ಗೀತೆ ಶ್ಲೋಕ ಹೇಳಿದ್ರೆ ಇನ್ನೊಂದ್ಸಲ ಕುರಾನ್ ಸೂಕ್ತಿ ಹೇಳೋರು. ಅಂದ್ರೆ ಯಾವುದೇ ವಿಧಾನದಲ್ಲಿ ಪೂಜೆ ಮಾಡಿದ್ರೂ ಅದು ಭಗವಂತನಿಗೇ ಸಲ್ಲೋದು, ಗೀತೆಗೂ ಕುರಾನ್‌ಗೂ ಏನೂ ವ್ಯತ್ಯಾಸ ಇಲ್ಲ ಅಂತ… ಮನುಷ್ಯರು ಅಂದ ಮೇಲೆ ಭಿನ್ನಾಭಿಪ್ರಾಯ ಇರುತ್ತೆ, ಇಲ್ಲ ಅನ್ನಲಿಲ್ಲ ನಾನು. ಪರಸ್ಪರ ವ್ಯತ್ಯಾಸಗಳೇ ಇಲ್ಲದೆ ಇರೋ ಇಬ್ಬರು ವ್ಯಕ್ತಿಗಳು ಜಗತ್ತಲ್ಲಿ ಎಲ್ಲಾದ್ರೂ ಸಿಗ್ತಾರಾ? ಈಗ ಯಾವುದೋ ವಿಷಯದಲ್ಲಿ ನನ್ನ ದೃಷ್ಟಿ ಬೇರೆ, ನಿಮ್ಮದು ಬೇರೆ ಅಂತ ಇಟ್ಕೊಳ್ಳೋಣ. ಹಾಗಂದ ಕೂಡಲೇ ನಾನು ನೀವೂ ಶತ್ರುಗಳಾಗಿಬಿಡ್ತೀವಾ?…

* ಹಿಂದೂಗಳು, ಮುಸ್ಲಿಮರೂ ಎರಡು ಪ್ರತ್ಯೇಕ ದೇಶ ಅನ್ನೋದೇ ಬುಡ ಇಲ್ಲದೆ ಇರೋ ವಾದ. ಈಗ ಚೀನಾದಲ್ಲಿ ಮುಸ್ಲಿಮರಿದ್ದಾರೆ, ಅವರು ಅಲ್ಲಿ ಪ್ರತ್ಯೇಕ ದೇಶ ಆಗಿದ್ದಾರಾ? ಇಂಗ್ಲೆಂಡಿನಲ್ಲಿರೋ ಮುಸ್ಲಿಮರು ಪ್ರತ್ಯೇಕ ದೇಶ ಆಗಿದ್ದಾರಾ? ಅಥವಾ ನಮ್ಮಲ್ಲೇ ಮೊಗಲರ ಕಾಲದಲ್ಲಿ ಪ್ರತ್ಯೇಕ ದೇಶ ಇತ್ತಾ?… ಆಮೇಲೆ ನಮ್ಮ ಪರಂಪರೆಯಲ್ಲಿ ಶೈವರಿಗೂ ವೈಷ್ಣವರಿಗೂ ಏನು ಕಡಿಮೆ ಸಂಘರ್ಷಗಳು ಆಗಿದೆಯಾ? ಹಾಗಾದರೆ ಶೈವರು, ವೈಷ್ಣವರು ಪ್ರತ್ಯೇಕ ದೇಶಗಳು ಅಂತ ಹೇಳಬೇಕಾ?… ಈ ಹುಚ್ಚಾಟ ಮೊದಲು ನಿಂತ್ರೆ ಎಲ್ರಿಗೂ ಒಳ್ಳೇದು…

* ಆಯ್ತು, ನೀವು ಸಹಿಸಿಕೊಂಡು ಸುಮ್ಮನಿರಕ್ಕಾಗಲಿಲ್ಲ ಅಂದುಕೊಳ್ಳಿ. ಒಬ್ಬ ನಿಮ್ಮ ಕೆನ್ನೆಗೆ ಹೊಡೀತಾನೆ. ನಿಮಗೆ ಕ್ಷಮಿಸೋಕ್ಕೆ ಆಗಲಿಲ್ವಾ? ತಿರುಗಿಸಿ ನೀವೂ ಅವನ ಕೆನ್ನೆಗೊಂದು ಹೊಡೀರಿ. ಆದರೆ ನಿಮ್ಮ ಕೆನ್ನೆಗೆ ಹೊಡೆದವನು, ಹೊಡೆದು ಎಲ್ಲೋ ಹೋದ. ನೀವು ಅವನನ್ನು ಬಿಟ್ಟು ಅವನ ಸಂಬಂಧಿಕನನ್ನೋ ಅಥವಾ ಅವನ ಧರ್ಮದವನು ಇನ್ಯಾವೋನ್ನೋ ಒಬ್ಬನ್ನ ಹುಡುಕಿ ಹೊಡೆದರೆ ಅದನ್ನ ಮರ್ಯಾದಸ್ಥ ಕೆಲಸ ಅಂತಾರಾ? ಯಾರೋ ನನ್ನ ಮಗಳನ್ನ ಅಪಹರಣ ಮಾಡಿದರು ಅಂತ ನಾನು ಇನ್ಯಾರದೋ ಮಗಳನ್ನ ಅಪಹರಿಸಿದ್ರೆ ಅದಕ್ಕೆ ಅರ್ಥ ಇದೆಯಾ? ರಕ್ತಕ್ಕೆ ರಕ್ತನೇ ಉತ್ತರ ಅನ್ನೋದು ಮನುಷ್ಯನ ಭಾಷೆ ಅಲ್ಲ…

ಇಂದು ಬಹುತೇಕರಲ್ಲಿ ಇಂಥ ವಿವೇಕದ ನುಡಿಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ಉಳಿದಿಲ್ಲ, ನನಗೆ ಗೊತ್ತು. ಆದರೆ ಭಾರತ ಉಳಿಯಬೇಕಾದರೆ ಬೇರೆ ದಾರಿ ಇಲ್ಲ ಎಂಬುದೂ ನಮಗೆ ಗೊತ್ತಿರಬೇಕು.

ಇದನ್ನು ಓದಿದ್ದೀರಾ?: ನೆನಪು | ಅಗಲಿದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

ಇಂದು ಬಿಜೆಪಿಯ ಬಾಲ ಹಿಡಿದಿರುವ ಎಲ್ಲ ಮಹನೀಯರಿಗೂ ಗೊತ್ತು- ಮೋದಿಯವರ ಆಳ್ವಿಕೆಯಲ್ಲಿ ಗ್ಯಾಸ್ ಸಿಲಿಂಡರ್ ಸಾವಿರ ರೂಪಾಯಿ ಆಗಿದೆ, ನಿರುದ್ಯೋಗ ಹಿಂದೆಂದೂ ಇಲ್ಲದಷ್ಟು ವಿರಾಟ್‌ರೂಪ ತಾಳಿದೆ (ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಿದೆ ಎಂಬ ಭರವಸೆ ಕೊಟ್ಟು ಮೋದೀಜಿ ಅಧಿಕಾರಕ್ಕೆ ಬಂದರೂ, ‘ಸರ್ಕಾರವು ನಿರುದ್ಯೋಗದಂಥ ಆರ್ಥಿಕ ಸಾಮಾಜಿಕ ಸಮಸ್ಯೆಗಳೆಲ್ಲವನ್ನೂ ನಿವಾರಿಸಲು ಸಾಧ್ಯವಿಲ್ಲ’ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಇತ್ತೀಚೆಗೆ ತಾನೇ ಬಹಿರಂಗ ಹೇಳಿಕೆ ನೀಡಿದ್ದಾರೆ), ದೇಶದ ಸಾಲ ಒಂದೂಮುಕ್ಕಾಲು ಲಕ್ಷ ಕೋಟಿ ರೂಪಾಯಿ ದಾಟಿದೆ, ದೇಶದ ಸಂಪತ್ತು ಕೆಲವೇ ಉದ್ಯಮಪತಿಗಳ ಕೈ ಸೇರುತ್ತಿದೆ, ಚುನಾವಣೆಯ ಹೊಸ್ತಿಲಲ್ಲಿ ಇಬ್ಬರು ಮುಖ್ಯಮಂತ್ರಿಗಳು ಜೈಲುಪಾಲಾಗಿದ್ದಾರೆ, ಅಭಿವೃದ್ಧಿ ಸೂಚ್ಯಂಕದಲ್ಲಿ ಪಾಕಿಸ್ತಾನ ಬಾಂಗ್ಲಾದೇಶಗಳೇ ಭಾರತಕ್ಕಿಂತ ಮುಂದಿವೆ, ಬೆಲೆಯೇರಿಕೆಯಿಂದ ಜನಸ್ತೋಮ ತತ್ತರಿಸಿದೆ… ಈ ಯಾವ ಅಂಶವೂ ಗುಟ್ಟೇನಲ್ಲ. ಆದರೆ ಮೋದಿಯವರ ಮುಖ ನೋಡಿ ವೋಟು ಹಾಕುವವರಿಗೆ ಇದ್ಯಾವುದೂ ವಿಷಯವೇ ಅಲ್ಲ. ಅವರೆಲ್ಲರಿಗೂ ಸಾಬರನ್ನು ಹದ್ದುಬಸ್ತಿನಲ್ಲಿಡುವ ಬಲಿಷ್ಠ ಸರ್ವಾಧಿಕಾರಿಯೊಬ್ಬ ಬೇಕು. ಮತ್ತು ಅಷ್ಟು ಮಾಡಿದರೆ ಸಾಕೋ ಸಾಕು. ಮುಸ್ಲಿಂ ದ್ವೇಷ ನಾಡಿನ ನರನಾಡಿಗಳಲ್ಲಿ ಹರಿಯುತ್ತಿರುವವರೆಗೆ ಸನ್ಮಾನ್ಯ ನರೇಂದ್ರ ಮೋದಿ, ಆಡಳಿತ ಮಾಡುವ ಅಗತ್ಯವೇ ಇಲ್ಲ. ಹಾಗಾಗಿ ಆಡಳಿತಾರೂಢರು ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳಿಗೆ ನಿರಂತರವಾಗಿ ಕಿಲುಬು ಹಿಡಿಸುತ್ತಿದ್ದರೂ ಯಾರಿಗೂ ಅದು ಆತಂಕಕಾರಿಯಾಗಿ ಕಾಣುತ್ತಿಲ್ಲ. ಅದಕ್ಕಿಂತಲೂ ಮಿಗಿಲಾಗಿ, ಒಂದು ಜನಸಮೂಹವಾಗಿ ನಮ್ಮ ನೈತಿಕ ಅಧಃಪತನ ದಂಗು ಬಡಿಸುವಂತಿದೆ. ನಮ್ಮ ಪತನದ ಹೃದಯ ವಿದ್ರಾವಕ ಲಕ್ಷಣವೆಂದರೆ, ಸರಾಸರಿ ಸಂಭಾವಿತ ನಾಗರಿಕ ಕೂಡ ಇಂದು ನಿಷ್ಕಾರಣ ಕೊಲೆಗಡುಕತನದ ಸಲೀಸು ಸಮರ್ಥಕನಾಗಿ ಮಾರ್ಪಟ್ಟಿದ್ದಾನೆ! ಅಂದರೆ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಇಂದು ಒಬ್ಬ ಕೊಲೆಗೀಡಾದರೆ, ಬಹುಪಾಲು ಜನಕ್ಕೆ ಅದು ತಪ್ಪು ಅನಿಸುತ್ತಿಲ್ಲ…

ಒಟ್ಟಾರೆ ಪರಿಸ್ಥಿತಿ ಹೀಗಿರುವಾಗ, ಅತ್ತ, ಆರಂಭದಲ್ಲಿ ಉಲ್ಲೇಖಿಸಿದ ನನ್ನ ಗೆಳೆಯರಂಥ ಭಕ್ತಪುಂಗವರು ‘ಮೋದಿಗಿಂತ ಆಡಳಿತಗಾರರಿಲ್ಲ’ ಎಂಬ ಸುಳ್ಳನ್ನು ಪ್ರಚಾರ ಮಾಡುವುದಷ್ಟೇ ಅಲ್ಲ, ಅದನ್ನೇ ತಾವೂ ಮನಸಾ ನಂಬಿಕೊಂಡು ಭ್ರಮಾನಂದದಲ್ಲಿ ಓಲಾಡುತ್ತಿದ್ದಾರೆ!…

ಅಂದ ಮೇಲೆ ನಾನು ಕಳೆದುಕೊಂಡಿದ್ದು ಎಂಥ ಅಮೂಲ್ಯ ನಿಧಿ ಎಂದು ಈಗಲಾದರೂ ಎಲ್ಲರಿಗೂ ಮನವರಿಕೆಯಾಗಿರಬೇಕು.

ದೇಶ ಕಳೆದುಕೊಂಡಿದ್ದೂ ಅದನ್ನೇ.

(2024ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಬರೆದದ್ದು)

ಎನ್.ಎಸ್. ಶಂಕರ್
‍ಎನ್.ಎಸ್. ಶಂಕರ್
+ posts

ಹಿರಿಯ ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಎನ್.ಎಸ್. ಶಂಕರ್
‍ಎನ್.ಎಸ್. ಶಂಕರ್
ಹಿರಿಯ ಪತ್ರಕರ್ತ, ಲೇಖಕ, ಚಿತ್ರನಿರ್ದೇಶಕ

1 COMMENT

  1. “ಈ ಬಣದ ಏಕೈಕ ತಾತ್ವಿಕತೆ ದ್ವೇಷ..” ಅಂತ ಬರೆದಿದ್ದೀರಿ.ಅದನ್ನ ಸ್ವಲ್ಪ ಉದ್ದ ಮಾಡಿ ಹೇಳುವುದಾದರೆ,ಈ ಬಣದ ಏಕೈಕ ತಾತ್ವಿಕತೆ “ದ್ವೈತ” ಅಂತ ಹೇಳಬಹುದು.
    ಎಲ್ಲವನ್ನೂ ವರ್ಗೀಕರಿಸುತ್ತ ಶ್ರೇಣಿಕರಿಸುತ್ತ,ವರ್ಗೀಕರಣ-ಶ್ರೇಣಿಕರಣಗಳೇ ಜಗತ್ತಿನ ಅಂತಿಮ ಸತ್ಯ ಎಂದು ಭಾವಿಸುವುದು ದ್ವೈತ ಸಿದ್ಧಾಂತ.
    ನಮ್ಮಂತಹ ಎಲ್ಲರಿಗೂ ಶಂಕರ್ ಅವರ ಸಂಘಿ ಗೆಳೆಯನಂತಹವರು ಹಿಂಡುಗಟ್ಟಲೆ ಇದ್ದಾರೆ.
    ವಿದ್ಯಾವಂತ ಲಿಂಗಾಯತರು ಗೌಡರು ಕುರುಬರು ಬ್ರಾಹ್ಮಣರಷ್ಟು ಸಂಘಿಗಳಾಗಿರುವುದಿಲ್ಲ ಎಂಬ ಭ್ರಮೆ ನನ್ನಲ್ಲಿ ಬಹಳ ದಿವಸ ಇತ್ತು.
    ಅದು ಕೂಡ ದೊಡ್ಡ ಭ್ರಮೆ ಎಂಬ ಜ್ಞಾನೋದಯ ಈಗೀಗ ಉಂಟಾಗಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X