ರಾಮನಗರ ಜಿಲ್ಲಾ ಮಟ್ಟದಲ್ಲಿ ಇದೇ ಆಗಸ್ಟ್ 15ರಂದು ಆಚರಿಸಲಾಗುವ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಜರುಗಲು ಸಂಬಂಧಿಸಿದ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ(ಎಡಿಸಿ) ಆರ್ ಚಂದ್ರಯ್ಯ ಸೂಚನೆ ನೀಡಿದರು.
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಅಂದು ಬೆಳಿಗ್ಗೆ 9ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರಿಗೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡುವರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು, ಎನ್‌ಸಿಸಿ ಕೆಡೆಟ್ಸ್‌ಗಳು, ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಸಿಕೊಡಲು ಕ್ರಮ ವಹಿಸಬೇಕು” ಎಂದರು.
“ಕಾರ್ಯಕ್ರಮದ ಸಿದ್ದತೆ ಕುರಿತು ಕ್ರೀಡಾಂಗಣದ ಸ್ವಚ್ಛತೆ, ವೇದಿಕೆ, ಶಾಮಿಯಾನ, ಆಸನ ವ್ಯವಸ್ಥೆ ಕುರಿತಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನಾಡುನುಡಿ ಮಹತ್ವ ಬಿಂಬಿಸುವ ನಾಡಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಬೇಕು. ಜತೆಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಬೇಕು” ಎಂದು ತಿಳಿಸಿದರು.
“ಜಿಲ್ಲೆಯ ಎಲ್ಲ ಕಚೇರಿಗಳು, ಶಾಲಾ ಕಾಲೇಜುಗಳ ಮುಂದೆ ಅಂದು ಬೆಳಿಗ್ಗೆ 8ಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದು, ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಬೇಕು. ಧ್ವಜ ಸಂಹಿತೆ ಅನುಸಾರವಾಗಿ ಧ್ವಜಾರೋಹಣ ಮಾಡಬೇಕು. ಧ್ವಜದ ನಿಯಮ ಉಲ್ಲಂಘಿಸುವವರ ಎದುರು ಕಠಿಣ ಕ್ರಮ ಜರುಗಿಸಲಾಗುವುದು. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸರ್ಕಾರಿ ಕಚೇರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಂಡು ಹಬ್ಬದ ವಾತಾವರಣ ನಿರ್ಮಿಸುವಂತಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಾವೇರಿ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ತಲುಪದ ನೀರು; ರೈತರಿಂದ ಧರಣಿ
“ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಂದು ಬೆಳಿಗ್ಗೆ 8:45ಕ್ಕೆ ಕಡ್ಡಾಯವಾಗಿ ಹಾಜರಾಗಬೇಕು” ಎಂದರು.
ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.