ಕಳೆದ 10 ವರ್ಷಗಳಿಂದ ಭಾರೀ ಚರ್ಚೆಯಲ್ಲಿರುವ ಹಾಗೂ ದೇಶಕ್ಕೆ ಹೊಸ ಮಾದರಿ (ಗುಜರಾತ್ ಮಾದರಿ) ತಂದುಕೊಡಲಿದೆ ಎಂದೇ ಬಣ್ಣಿಸಲಾಗಿದ್ದ, ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲಿ ದೇಶದಲ್ಲಿಯೇ ಹೆಚ್ಚಿನ ಮಕ್ಕಳು ತೂಕಹೀನರಾಗಿದ್ದಾರೆ ಎಂದು ನೀತಿ ಆಯೋಗ ಹೇಳಿದೆ.
ಕೇಂದ್ರ ಸರ್ಕಾರದ ಅಡಿಯಲ್ಲಿರುವ ನೀತಿ ಆಯೋಗ ಈ ತಿಂಗಳ ಆರಂಭದಲ್ಲಿ 2023-24ರ ‘ಸುಸ್ಥಿರ ಅಭಿವೃದ್ಧಿ ಗುರಿ’ (SDG) ವರದಿಯನ್ನು ಬಿಡುಗಡೆ ಮಾಡಿದೆ. “ಹಸಿವಿನ ವಿರುದ್ಧದ ಹೋರಾಟ ಮತ್ತು ಮಕ್ಕಳಲ್ಲಿ ಪೌಷ್ಟಿಕತೆ ಸುಧಾರಿಸುವಲ್ಲಿ ಗುಜರಾತ್ ದೇಶದಲ್ಲಿಯೇ ಹಿಂದುಳಿದಿದೆ. ಗುಜರಾತ್ನಲ್ಲಿ 5 ವರ್ಷದೊಳಗಿನ 39.7% ಮಕ್ಕಳು ತೂಕಹೀನರಾಗಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ ಭಾರತದ ರಾಜ್ಯಗಳ ಪೈಕಿ ಗುಜರಾತ್ 25ನೇ ಸ್ಥಾನದಲ್ಲಿದೆ” ಎಂದು ಹೇಳಿದೆ.
SDG-2 ಸೂಚ್ಯಂಕದಲ್ಲಿ ಗುಜರಾತ್ ಕೇವಲ 41 ಅಂಕಗಳನ್ನು ಗಳಿಸಿದೆ. ಹಸಿವಿನ ಹೋರಾಟದಲ್ಲಿ ಪ್ರಗತಿ ಸಾಧಿಸಿದ ರಾಜ್ಯಗಳಲ್ಲಿ ಒಡಿಶಾ, ಮಧ್ಯಪ್ರದೇಶ ಅಗ್ರಸ್ತಾನದಲ್ಲಿವೆ. 25ನೇ ಸ್ಥಾನವನ್ನು ಗುಜರಾತ್ ಪಡೆದುಕೊಂಡಿದೆ. ಗುಜರಾತ್ಗೆ 2020-21ರಲ್ಲಿ 46 ಅಂಕಗಳು, 2019-20ರಲ್ಲಿ 41 ಅಂಕ ಹಾಗೂ ಹಾಗೂ 2018ರಲ್ಲಿ 49 ಅಂಕಗಳು ದೊರೆತಿದ್ದವು. 2018ಕ್ಕೆ ಹೋಲಿಸಿದರೆ, ಈ ವರ್ಷ ಗುಜರಾತ್ ತೀವ್ರ ಕುಸಿತವನ್ನು ಕಂಡಿದೆ.
ನೀತಿ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್ನಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 39% ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ. 15-49 ವರ್ಷ ವಯಸ್ಸಿನ 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದಾರೆ ಮತ್ತು ಅದೇ ವಯಸ್ಸಿನ 25.2% ಅಗತ್ಯಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದಾರೆ. 2018 ಮತ್ತು 2019ಕ್ಕೆ ಹೋಲಿಸಿದರೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ ಮತ್ತು ಮಹಿಳೆಯ ರಕ್ತಹೀನತೆಯ ಪ್ರಮಾಣ ಹೆಚ್ಚಾಗಿದೆ.
“2020-21ರಲ್ಲಿ 46 ಅಂಕಗಳನ್ನು ಹೊಂದಿದ್ದ ಗುಜರಾತ್ನ SDG-2 ಸೂಚ್ಯಂಕವು 2023-24ರಲ್ಲಿ 41ಕ್ಕೆ ಕುಸಿದಿದೆ. 5 ವರ್ಷದೊಳಗಿನ 39.7% ಮಕ್ಕಳು ಕಡಿಮೆ ತೂಕ ಮತ್ತು 62.5% ಗರ್ಭಿಣಿಯರು ರಕ್ತಹೀನತೆ ಹೊಂದಿದ್ದಾರೆ. 2030ರ ವೇಳೆಗೆ ಗುಜರಾತ್ಅನ್ನು ಹಸಿವು ಮುಕ್ತವನ್ನಾಗಿ ಮಾಡಲು ತುರ್ತು ಮತ್ತು ಪರ್ಯಾಯ ಹೂಡಿಕೆ ಮತ್ತು ಪೌಷ್ಟಿಕಾಂಶ-ಕೇಂದ್ರಿತ ಯೋಜನೆಗಳ ಅಗತ್ಯವಿದೆ” ಎಂದು ಅಹಮದಾಬಾದ್ನ ಸೇಂಟ್ ಕ್ಸೇವಿಯರ್ ಕಾಲೇಜಿನ (ಸ್ವಾಯತ್ತ) ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆತ್ಮನ್ ಶಾ ಹೇಳಿದ್ದಾರೆ.
ಗುಜರಾತಿನ ಈ ಹೀನ ಸ್ಥಿತಿಯನ್ನು ಕೇರಳದ ಜೊತೆ ಹೋಲಿಸಿ,ಕರ್ನಾಟಕದ ಸ್ಥಿತಿಯನ್ನೂ ಪಟ್ಟಿ ಮಾಡಿದ್ದರೆ ಬರಹ ಹೆಚ್ಚು ಅರ್ಥಪೂರ್ಣ ಆಗಿರುತ್ತಿತ್ತು.