ನೀರಾವರಿ, ಅದರಲ್ಲೂ ಕಾವೇರಿ ಕೊಳ್ಳದ ಯೋಜನೆಗಳಿಗಾಗಿ ಮತ್ತು ಕರ್ನಾಟಕದ ಪಾಲಿಗಾಗಿ ಬಡಿದಾಡಿದ ಗೌಡರು ಇದೀಗ ಕಳೆದೇ ಹೋಗಿದ್ದಾರೆ. ಕುಟುಂಬ ವ್ಯಾಮೋಹದ ಪೊರೆ ಅವರ ಕಣ್ಣುಗಳಿಗೆ ದಟ್ಟವಾಗಿ ಕವಿದು ಹೋಗಿದೆ. ರಾಜ್ಯಸಭೆಯಲ್ಲಿ, ಮೋದಿ ಅವರ ನಾಯಕತ್ವದಲ್ಲಿ ಹತ್ತು ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಬಂದಿಲ್ಲ ಎಂದು ಗುಣಗಾನ ಮಾಡಿದ್ದಾರೆ. ಆದರೆ ನೀರಾವರಿ ಯೋಜನೆಗಳ ಬಗ್ಗೆ ಮರೆತೇಬಿಟ್ಟಿದ್ದಾರೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ “ರಾಜ್ಯದ ನೀರಾವರಿ ಯೋಜನೆಗಳು ಜಾರಿಯಾಗಬೇಕಿದ್ದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅದು ಅವರಿಂದ ಮಾತ್ರ ಸಾಧ್ಯ” ಎಂದಿದ್ದರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು. ಪ್ರಧಾನಿ ಮೋದಿಯವರ ಕೊಠಡಿಯಲ್ಲಿ ಸಕಲ ಕುಟುಂಬ ಸದಸ್ಯರ ಜೊತೆ ಭೇಟಿಯಾಗಿದ್ದಾಗ ತೆಗೆದ ಫೋಟೋ ಇರುವ ಆಕಾಶದೆತ್ತರದ ಫ್ಲೆಕ್ಸನ್ನು ಮಂಡ್ಯ ಮುಖ್ಯರಸ್ತೆಯ ಬದಿ ಹಾಕಿಸಿದ್ದರು. ಅದರಲ್ಲಿ “ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಮೋದಿ ಕೈ ಬಲಪಡಿಸಿ” ಎಂದು ಬರೆದಿದ್ದರು. ಮೋದಿ ಸರ್ಕಾರ ರಚನೆಯಾಗಿ ಎರಡು ತಿಂಗಳಾಯಿತು. ಬಜೆಟ್ ಅಧಿವೇಶನ ನಡೆಯುತ್ತಿದೆ. ಈ ಬಜೆಟ್‌ನಲ್ಲಿ ಎನ್‌ಡಿಎ ಸರ್ಕಾರ ರಾಜ್ಯಕ್ಕೆ ಎಷ್ಟು ನೀರಾವರಿ ಯೋಜನೆಗಳನ್ನು ಘೋಷಿಸಿದೆ ಎಂಬ ಅರಿವು ಗೌಡರಿಗೆ ಇರಬಹುದು. ಅವರು ರಾಜ್ಯಸಭೆಯಲ್ಲಿ ಕೇಳಬೇಕಿರುವ ಪ್ರಶ್ನೆ ರಾಜ್ಯದ ನೀರಾವರಿ ವಿಷಯಗಳು ಮತ್ತು ಬಜೆಟ್‌ನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಮೇಲೆಯೇ ಇರಬೇಕಿತ್ತು. ಆದರೆ ಗೌಡರು ಸ್ವಹಿತಾಸಕ್ತಿ, ಸ್ವಾರ್ಥ, ಕುಟುಂಬದ ಕುಡಿಗಳ ರಾಜಕೀಯ ಭವಿಷ್ಯದ ದೂರದೃಷ್ಟಿಯಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ಮೊದಲ ಅಧಿವೇಶನವನ್ನು ಅನಾರೋಗ್ಯ ಕಾಡುತ್ತಿದ್ದರೂ, ವಯೋವೃದ್ಧರಾಗಿದ್ದರೂ ತಪ್ಪಿಸದೇ ಭಾಗವಹಿಸಿ, ‘ನೀಟ್ ಅಕ್ರಮದ ವಿರುದ್ಧ ವಿಪಕ್ಷಗಳು ಪ್ರತಿಭಟನೆ ಮಾಡುವುದು ಸರಿಯಲ್ಲ. ಸರ್ಕಾರ ಸಿಬಿಐ ತನಿಖೆಗೆ ನೀಡಿದೆ. ವರದಿ ಬರುವ ಮುನ್ನವೇ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ಬ್ಯಾಟು ಬೀಸಿದ್ದರು. ಎರಡನೇ ಅಧಿವೇಶನದಲ್ಲಿ ಬಜೆಟ್ ಬಗ್ಗೆ ಚರ್ಚೆ ಮಾಡುವಾಗ ರಾಜ್ಯದ ಅಗತ್ಯ, ಬಜೆಟ್‌ನಲ್ಲಿ ಆಗಿರುವ ಅನ್ಯಾಯದ ಬಗ್ಗೆ ಗಮನ ಸೆಳೆಯುವುದು ಬಿಟ್ಟು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಾ ಕಾಲಹರಣ ಮಾಡಿದ್ದರು.
ಉತ್ತರ ಕನ್ನಡದ ಶಿರೂರು ಭೂಕುಸಿತ ನಡೆದಾಗ ವಿಧಾನಮಂಡಲ ಅಧಿವೇಶನ ನಡೆಯುತ್ತಿತ್ತು. ಶಾಸಕ ಸತೀಶ್ ಸೈಲ್ ಮಳೆಯನ್ನು ಲೆಕ್ಕಿಸದೇ ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಕೂಡಾ ಉಸ್ತುವಾರಿ ವಹಿಸಿದ್ದರು. ಕೇರಳದ ಶಾಸಕ ಕೂಡಾ ಸೈಲ್ ಕೆಲಸವನ್ನು ಮೆಚ್ಚಿದ್ದರು. NSRF ಕಾರ್ಯಾಚರಣೆ ತಕ್ಷಣವೇ ಶುರುವಾಗಿತ್ತು. ಆದರೂ ಅತ್ತ ಸುಳಿಯದ ಬಿಜೆಪಿ ನಾಯಕರು ಸಿಎಂ ವಿರುದ್ಧ ಪ್ರತಿಭಟನೆಯಲ್ಲಿಯೇ ನಿರತರಾಗಿದ್ದರು. “ಎಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ ನಂತರ ರಾಜ್ಯಸರ್ಕಾರ ಕಾರ್ಯಾಚರಣೆಗಿಳಿಯಿತು” ಎಂದು ರಾಜ್ಯಸಭೆಯಲ್ಲಿ ಎಚ್ ಡಿ ದೇವೇಗೌಡರು ಸುಳ್ಳು ಸುಳ್ಳೇ ಹೇಳಿದ್ದರು.

ಕೇಂದ್ರ ಸಚಿವ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ನಂತರ ರಾಜ್ಯ ಸರ್ಕಾರ ಕಾರ್ಯಾಚರಣೆ ಆರಂಭಿಸಿತ್ತು ಎಂದು ಹೇಳುವಾಗ ದೇವೇಗೌಡರಿಗೆ ಮಾಹಿತಿಯ ಕೊರತೆ ಇತ್ತು ಅಂತ ಕಾಣುತ್ತದೆ. ಯಾಕೆಂದರೆ ಅದಾಗಲೇ ಮಣ್ಣಿನಡಿ ಸಿಲುಕಿದ್ದ ಎಂಟು ಶವಗಳನ್ನು ಹೊರತೆಗೆಯಲಾಗಿತ್ತು. ಒಬ್ಬ ಮಾಜಿ ಪ್ರಧಾನಿಯಾಗಿ ದೇವೇಗೌಡರು ಈ ಆರು ತಿಂಗಳಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಆದ ನಂತರ ಮೋದಿ ಭಜನೆ ಜೋರಾಗಿಯೇ ಮಾಡುತ್ತಿದ್ದಾರೆ. ನೀರಾವರಿ, ಅದರಲ್ಲೂ ಕಾವೇರಿ ಕೊಳ್ಳದ ಯೋಜನೆಗಳಿಗಾಗಿ ಮತ್ತು ಕರ್ನಾಟಕದ ಪಾಲಿಗಾಗಿ ಬದುಕಿನುದ್ದಕ್ಕೂ ಬಡಿದಾಡಿದ ಗೌಡರು ಇದೀಗ ಕಳೆದೇ ಹೋಗಿದ್ದಾರೆ. ಕುಟುಂಬ ವ್ಯಾಮೋಹದ ಪೊರೆ ಅವರ ಕಣ್ಣುಗಳಿಗೆ ದಟ್ಟವಾಗಿ ಕವಿದು ಹೋಗಿದೆ. ನಿನ್ನೆಯೂ ರಾಜ್ಯಸಭೆಯಲ್ಲಿ ಮಾತನಾಡುತ್ತಾ ಮೋದಿ ಅವರ ನಾಯಕತ್ವದಲ್ಲಿ ಹತ್ತು ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಬಂದಿಲ್ಲ ಎಂದು ಗುಣಗಾನ ಮಾಡಿದ್ದಾರೆ.
“ಮೋದಿಯ ಜೊತೆಗೆ ನನ್ನದು ಜನ್ಮಾಂತರದ ಸಂಬಂಧ, ಮೋದಿ ದೇಶ ಕಂಡ ಅಪ್ರತಿಮ ನಾಯಕ” ಎಂದು ಹೇಳಿರುವ ಗೌಡರು ಬದುಕಿನ ಕೊನೆಗಾಲದಲ್ಲಿ ನಗೆ ಪಾಟಲಿಗೀಡಾಗುತ್ತಿದ್ದಾರೆ. ಮೊಮ್ಮಗ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನೂರಾರು ಹೆಣ್ಣುಮಕ್ಕಳ ಅತ್ಯಾಚಾರದ ಆರೋಪ ಬಂದಾಗ ಇನ್ನೇನು ಗೌಡರು ಕುಸಿದು ಹೋಗಲಿದ್ದಾರೆ ಎಂದೇ ನಾಡಿನ ಜನ ಭಾವಿಸಿದ್ದರು. “ನಮ್ಮ ತಂದೆಗೆ ಏನಾದರೂ ಆದರೆ ಅದಕ್ಕೆ ಕಾಂಗ್ರೆಸ್ ನಾಯಕರು ಕಾರಣ” ಎಂದು ಎಚ್ ಡಿ ಕುಮಾರ ಸ್ವಾಮಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. Pendrive ಪ್ರಕರಣ ಬಹಿರಂಗಗೊಂಡ ನಂತರ ಒಂದು ತಿಂಗಳು ವಿದೇಶದಲ್ಲಿದ್ದ ಪ್ರಜ್ವಲ್ ಭಾರತಕ್ಕೆ ಬರುವ ಎರಡು ದಿನಗಳ ಮುಂಚೆ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ರೆಸಾರ್ಟ್‌ನಲ್ಲಿ ವಿಹಾರದಲ್ಲಿದ್ದರು. ಪ್ರಜ್ವಲ್ ಬಂಧನ ಆಗುವವರೆಗೂ ದಿನಕ್ಕೊಂದು ಹೇಳಿಕೆ ನೀಡುತ್ತಾ ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಕೆ ಸಹೋದರರ ಕೈವಾಡ ಇದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆಯನ್ನೂ ಮಾಡಿಸಿದ್ದರು. ಆದರೆ, ಪ್ರಜ್ವಲ್ ಬೆಂಗಳೂರಿಗೆ ಬರುತ್ತಿದ್ದಂತೆ ಮಾಧ್ಯಮಗಳಿಂದ ತಪ್ಪಿಸಿಕೊಂಡು ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದರು. ರೇವಣ್ಣ, ಭವಾನಿ ಮೇಲೆ ಸಂತ್ರಸ್ತೆಯ ಅಪಹರಣದ ಆರೋಪ ಬಂದಾಗಲೂ ಸರ್ಕಾರದ ಷಡ್ಯಂತ್ರ ಎಂದರು. ತಮ್ಮ ಕುಟುಂಬ ಇಷ್ಟೆಲ್ಲ ಕಾನೂನು ಸಂಘರ್ಷದಲ್ಲಿರುವಾಗಲೇ ಎಂಎಲ್‌ಸಿ ಸೂರಜ್ ಕಾರ್ಯಕರ್ತನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರಬೇಕಾಯ್ತು.

ಇಷ್ಟೆಲ್ಲ ನಡೆದರೂ ಏನೂ ಆಗದಂತೆ ದೇವೇಗೌಡರ ಕುಟುಂಬ ವರ್ತಿಸುತ್ತಿದೆ (ದೇವೇಗೌಡರ ಕುಟುಂಬ ಅಂದ್ರೆ ದೇವೇಗೌಡ ಮತ್ತು ಕುಮಾರಸ್ವಾಮಿಯವರ ಕುಟುಂಬ ಅಷ್ಟೇ). ಪ್ರಜ್ವಲನ ಕಾಮಕಾಂಡದ ವಿಡಿಯೊಗಳಿರುವ ಪೆನ್ಡ್ರೈವ್ ಹಂಚಿದ್ದು ಹಾಸನದ ಬಿಜೆಪಿ ನಾಯಕ, ಮಾಜಿ ಶಾಸಕ ಪ್ರೀತಂ ಗೌಡ ಎಂದು ಮೊನ್ನೆ ದೆಹಲಿಯಲ್ಲಿ ಹೇಳಿದ್ದಾರೆ. ಹಾಗಿದ್ರೆ ಕುಮಾರಸ್ವಾಮಿ ಅವರಿಗೆ ಎಷ್ಟು ನಾಲಿಗೆ ಇದೆ ಎಂದು ಕೇಳಬೇಕು. ತಮ್ಮ ಕುಟುಂಬದವರ ಕಾಮಕಾಂಡಕ್ಕೆ ಮತ್ತೊಬ್ಬರನ್ನು ಹೊಣೆ ಮಾಡುವುದು ಅಸಹ್ಯಕರ. ಈಗ ತಮ್ಮ ಕುಟುಂಬಕ್ಕೆ ವಿಷ ಇಟ್ಟ ಪ್ರೀತಂ ಗೌಡ ಇರುವ ಬಿಜೆಪಿ ಜೊತೆಗೆ ಪಾದಯಾತ್ರೆ ನಡೆಸುತ್ತಿರುವ ಇವರಿಗೆ ಸ್ವಾಭಿಮಾನ ಇದೆಯೇ? ಕುಮಾರಸ್ವಾಮಿ ಕಿಚ್ಚಿಗೆ ಪ್ರೀತಂ ಗೌಡ ಅವರನ್ನು ಸದ್ಯ ಪಾದಯಾತ್ರೆಯ ವೇದಿಕೆಯಿಂದ ಬಿಜೆಪಿ ಹೊರಗಿಟ್ಟಿದೆ. ಆದರೆ ಆ ಕಿಚ್ಚು ಮನೆಯನ್ನು ಸುಡದಿರುವುದೇ? ಹಾಸನದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಜೆಡಿಎಸ್‌ನ ಸಾಮ್ರಾಜ್ಯ ಕಾಂಗ್ರೆಸ್‌ನ ಕೈ ಸೇರುವುದನ್ನು ಬಿಜೆಪಿ ನೋಡುತ್ತಾ ಕೂರಬಹುದೇ? ಅಲ್ಲಿ ಸದ್ಯ ಪ್ರೀತಂ ಗೌಡ ಬಿಟ್ಟು ಬೇರೆ ನಾಯಕರು ಯಾರಿದ್ದಾರೆ?
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸುಮ್ಮನಾಗಿದೆ ಎಂದು ಆರೋಪಿಸಿರುವ ಎಚ್ ಡಿ ಕುಮಾರಸ್ವಾಮಿ, ತಮ್ಮ ಪಕ್ಷ ಮೇಕೆದಾಟು ಯೋಜನೆ ಜಾರಿಗೆ ಬದ್ಧವಾಗಿದೆ ಎಂದು ಲೋಕಸಭಾ ಚುನಾವಣೆಯ ಸಮಯದಲ್ಲಿ ಹೇಳಿದ್ದರು. ತಾವು ಕೇಂದ್ರದಲ್ಲಿ ಕೃಷಿ ಸಚಿವರಾಗುವ ಆಸೆ, ಭರವಸೆ ಇಟ್ಟುಕೊಂಡಿದ್ದರು. ತಾವು ಕೃಷಿ ಸಚಿವರಾಗಿ ರೈತರ ಸಾಲ ಮನ್ನ ಮಾಡುವುದಾಗಿಯೂ ಹೇಳಿದ್ದರು. ಆದರೆ, ಮೋದಿ ಸಂಪುಟ ಸೇರುವುದು ಖಾತ್ರಿಯಾದ ಮೇಲೂ ಕೃಷಿ ಖಾತೆಗೆ ಬೇಡಿಕೆ ಇಡಲಿಲ್ಲ. ಉಕ್ಕು ಮತ್ತು ಕೈಗಾರಿಕೆ ಖಾತೆ ನೀಡಿದಾಗಲೂ ಮರು ಮಾತಾಡಿಲ್ಲ. ಜನರ ಮುಂದೆ ನೀಡುವ ಆಶ್ವಾಸನೆಗಳೆಲ್ಲ ಮತ ಯಾಚನೆಗಷ್ಟೇ ಸೀಮಿತ. ತಾವು ಸದಾ ಅಧಿಕಾರ ಅನುಭವಿಸುತ್ತಿರಬೇಕು. ತಮ್ಮ ಮನೆ ಮಂದಿಯೆಲ್ಲ ಅಧಿಕಾರದಲ್ಲಿರಬೇಕು ಎಂಬುದಷ್ಟೇ ಇವರ ಗುರಿ.

ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಈಗ ಇರುವ ಅವಕಾಶ, ಮೈತ್ರಿಯಿಂದ ತಮ್ಮ ಕುಟುಂಬಕ್ಕಷ್ಟೇ ಲಾಭ ಮಾಡಿಕೊಳ್ಳದೇ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯ, ಜಿಎಸ್ಟಿ ಪಾಲಿನ ಬಾಕಿ, ಬಜೆಟ್ ಹಂಚಿಕೆಯ ತಾರತಮ್ಯ ಮುಂತಾದ ಮೋದಿ ಸರ್ಕಾರದ ಒಕ್ಕೂಟ ವ್ಯವಸ್ಥೆಗೆ ಕೊಳ್ಳಿ ಇಡುವ ನಡೆಯ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಬೇಕು. ಮೋದಿಯವರ ಮನವೊಲಿಸಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಡೆಯಬೇಕು. ಅದಕ್ಕಾಗಿ ಚಿಲ್ಲರೆ ರಾಜಕಾರಣ ಮಾಡುವುದನ್ನು, ಲಘು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯದ ಪರ ತಮ್ಮ ಸಾಮರ್ಥ್ಯ ತೋರಲು ಇದಕ್ಕಿಂತ ಉತ್ತಮ ಅವಕಾಶ ಬೇರೆ ಸಿಗಲಾರದು

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.