ಸಿದ್ದರಾಮಯ್ಯ ಅವರು ಮುಡಾದಲ್ಲಿ 14 ಸೈಟ್ ತಗೊಂಡಿರೋದು ಯಾರ ಜಮೀನು? ಇದು ನಿಂಗ ಎಂಬುವರು 1936 ನೇ ಇಸವಿಯಲ್ಲಿ 1 ರೂಪಾಯಿಗೆ ತೆಗೆದುಕೊಂಡಿದ್ದರು. ಇದಾದ ನಂತರ ನಿಂಗ ಎಂಬುವವರು ಸಾವನ್ನಪ್ಪಿದರು. ನಿಂಗ ಅವರ ಹೆಂಡತಿ ನಿಂಗಮ್ಮ ಅವರು 1990ರಲ್ಲಿ ನಿಧನರಾದರು. ನಿಂಗ ಕುಟುಂಬಸ್ಥರ ವಂಶ ವೃಕ್ಷದಲ್ಲಿ 27 ಜನರು ಇದ್ದಾರೆ. ಆದರೆ ಸಿದ್ದರಾಮಯ್ಯ ನಿಂಗ ಕುಟುಂಬದ ದೇವರಾಜು ಎಂಬುವವನಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದರು.
ಮಂಡ್ಯದಲ್ಲಿ ಬುಧವಾರ ತುರ್ತುಸುದ್ದಿಗೋಷ್ಠಿ ಕರೆದು, ಮುಡಾ ಹಗರಣಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, “ಒಬ್ಬರ ಕೈಯಿಂದ ಸಹಿ ಹಾಕಿಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಲು ಆಗಲ್ಲ. ಅಂದು ಬಡಾವಣೆಗೆ 462 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ದೇವರಾಜು ಎಂಬಾತ ತನ್ನ ಕುಟುಂಬಸ್ಥರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾನೆ” ಎಂದು ದೂರಿದರು.
“1998ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ವೇಳೆ ನಿಂಗ ಕುಟುಂಬಸ್ಥರು ಪರಿಹಾರ ತೆಗೆದುಕೊಂಡಿದ್ದಾರೆ. ಆಗ ಉಪಮುಖ್ಯಮಂತ್ರಿ ಆಗಿದ್ದು ಸಿದ್ದರಾಮಯ್ಯ. ನಿಯಮ ಬಾಹಿರವಾಗಿ ಭೂಸ್ವಾಧೀನ ಮಾಡಲಾಗಿದೆ. 2001ರಲ್ಲಿ 11.58 ಕೋಟಿಗೆ ಬಡಾವಣೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿದೆ. 2004ರಲ್ಲಿ 3.15 ಗುಂಟೆಯನ್ನು ಸಿದ್ದರಾಮಯ್ಯ ಅವರ ಬಾಮೈದ ಅಕ್ರಮವಾಗಿ ಕ್ರಯ ಮಾಡಿಕೊಳ್ಳುತ್ತಾರೆ” ಎಂದು ಆರೋಪಿಸಿದರು.
“2005 ರಿಂದ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ ಪರಿವರ್ತನೆ ಆಗುತ್ತೆ. 2001ರಲ್ಲಿ ಬಡಾವಣೆ ಕೆಲಸ ನಡೆಯುತ್ತಿರುತ್ತೆ, ಆದ್ರೆ 2005 ರಲ್ಲಿ ಪರಿವರ್ತನೆ ಆಗುತ್ತೆ. ಡಿಸಿ, ತಹಶೀಲ್ದಾರ್ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದಿದ್ದಾರೆ. 2005ರಲ್ಲಿ ಮುಡಾ ಇಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡಿದೆ. ಆಗಿನ ಡಿಸಿಗೆ ಇದ್ಯಾವುದು ಸಹ ಕಂಡಿಲ್ಲ. 2003ರಲ್ಲಿ ಭೂ ಪರಿವರ್ತನೆ ಆಗುವ ಮುನ್ನವೇ 12 ಸೈಟ್ಗಳನ್ನು ಅಲರ್ಟ್ ಮಾಡಲಾಗಿದೆ” ಎಂದರು.
“2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿಣ ಕುಂಕುಮಕ್ಕೆ 3.16 ಎಕರೆ ಜಮೀನು ನೀಡಲಾಗುತ್ತೆ.
2014ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರೆ ಬರೆಯುತ್ತಾರೆ. ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಾ.
ಬದಲಿ ಜಾಗವನ್ನು ನನಗೆ ನೀಡಿ ಎಂದು ಪತ್ರದಲ್ಲಿ ಉಲ್ಲೇಖ ಮಾಡ್ತಾರೆ. 2014 ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ 50:50 ಸ್ಕೀಮ್ ಬಂತು. 2017ರಲ್ಲಿ ಮುಡಾದಲ್ಲಿ ಪಾರ್ವತಿ ಅವರ ಜಮೀನಿನ ಚರ್ಚೆ ಬಂತು. ಆಗ 50:50 ಚರ್ಚೆಯಲ್ಲಿ ಬದಲಿ ನಿವೇಶನ ಕೊಡಲು ನಿರ್ಧಾರ ಮಾಡಿದ್ದರು. ಇದಾದ ನಂತರ ಪಾರ್ವತಿ ಅವರಿಗೆ ಸೈಟ್ ನೀಡಲಾಗಿದೆ” ಎಂದು ಹೇಳಿದರು.
ಸ್ವಜನಪಕ್ಷಪಾತ ಎದ್ದು ಕಾಣುತ್ತೆ
“ಮುಡಾ ಪ್ರಕರಣದ ಪ್ರತಿಹಂತದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಲಾಯರ್ ಓದಿದ್ದೀನಿ ಅಂತೀರಾ, ಎರಡು ವರ್ಷ ಪಾಠ ಮಾಡಿದ್ದೀನಿ ಅಂತೀರಾ. ಬೇರೆ ಕಡೆ ಖಾಲಿ ಇದೆ ಎಂದು ಸೈಟ್ ಬರೆಸಿಕೊಳ್ತೀರಾ?” ಎಂದು ಸಿದ್ದರಾಮಯ್ಯ ದಾಟಿಯಲ್ಲೇ ಆರ್.ಅಶೋಕ್ ಪ್ರಶ್ನಿಸಿದರು.
“ಕೇವಲ 14 ಸೈಟ್ ಮಾತ್ರ ನುಂಗಿಲ್ಲ, ಸಿದ್ದರಾಮಯ್ಯ ಬೆಂಬಲಿಗರು 500 ಕ್ಕೂ ಹೆಚ್ಚು ಸೈಟ್ ನುಂಗಿದ್ದಾರೆ. 50:50 ಸ್ಕೀಮ್ ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಇದನ್ನು ಮುಡಾ ಅಧ್ಯಕ್ಷ ಮರೀಗೌಡನೆ ಪತ್ರದ ಮೂಲಕ ತಿಳಿಸಿದ್ದಾನೆ. 82 ಸಾವಿರ ನಾಗರೀಕರು ಸೈಟ್ಗಾಗಿ ಕಾಯುತ್ತಿದ್ದಾರೆ. ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿದ್ದರಾಮಯ್ಯ ಪಡೆದಿರುವ 14 ಸೈಟ್ ಅನ್ನೂ ವಾಪಸ್ಸು ನೀಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.