ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಿದ್ದ ಮೀಸಲಾತಿ ವಿರುದ್ದದ ಹೋರಾಟವು ಹಿಂಸಾಚಾರಕ್ಕೆ ತಿರುಗಿದೆ. ಅಲ್ಲಿನ ಪ್ರಧಾನಿ ಶೇಕ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು, ದೇಶ ತೊರೆದಿದ್ದಾರೆ. ಇದೀಗ, ಸೇನೆಯು ಬಾಂಗ್ಲಾ ಆಡಳಿತದ ಚುಕ್ಕಾಣಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈ ನಡುವೆ, ಬಾಂಗ್ಲಾ ಬಿಕ್ಕಟ್ಟಿನ ಬಗ್ಗೆ ಭಾರತದಲ್ಲಿ ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸಭೆ ನಡೆಸಿದೆ. ‘ಭಾರತವು ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಭಾರತೀಯ ಸೇನೆಯು ಜಾಗರೂಕವಾಗಿದೆ’ ಎಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಬಾಂಗ್ಲಾದೇಶದ ಬೆಳವಣಿಗೆಯಲ್ಲಿ ಯಾವುದೇ ಹೊರಗಿನ ಶಕ್ತಿಗಳ ಪಾತ್ರವಿದೆಯೇ ಎಂಬುದರ ಬಗ್ಗೆ ಸರ್ಕಾರದ ಬಳಿ ಯಾವುದಾದರೂ ಮಾಹಿತಿ ಇದೆಯೇ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, “ಪಾಕಿಸ್ತಾನದ ರಾಜತಾಂತ್ರಿಕರು ಬದಲಾಗಿದ್ದು, ಬಾಂಗ್ಲಾ ದಂಗೆಗೆ ಅವರ ಬೆಂಬಲದ ಭಾಗವಾಗಿದೆ ಎಂಬ ಬಗ್ಗೆ ಮಾತ್ರವೇ ಸರ್ಕಾರದ ಬಳಿ ಮಾಹಿತಿ ಇದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಶೇಖ್ ಹಸೀನಾ ಅವರ ನಡೆಗಳು ಏನಾಗಿರಲಿವೆ ಎಂಬುದರ ಬಗ್ಗೆ ಭಾರತ ಸರ್ಕಾರದ ಗಮನಕ್ಕಿದೆಯೇ ಎಂದು ರಾಹುಲ್ ಪ್ರಶ್ನಿಸಿದ್ದು, “ಅವರೊಂದಿಗೆ ಸರ್ಕಾರವು ಮಾತುಕತೆ ನಡೆಸಿದೆ. ಆದರೆ, ಈ ಕ್ಷಣದಲ್ಲಿ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಜೈಶಂಕರ್ ಹೇಳಿದ್ದಾರೆ.
“ಭಾರತವು ಬಾಂಗ್ಲಾದೇಶ ಸೇನೆಯೊಂದಿಗೆ ಸಂಪರ್ಕದಲ್ಲಿದೆ. ಭಾರತೀಯ ಸೇನೆ ಕೂಡ ಜಾಗರೂಕವಾಗಿದೆ. ನಮ್ಮ ದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವ ಕೆಲಸ ನಡೆಯುತ್ತಿದೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸಿದ್ಧವಾಗಿದೆ” ಎಂದು ಜೈಶಂಕರ್ ಹೇಳಿದ್ದಾರೆ.
ಪ್ರತಿಪಕ್ಷ ನಾಯಕರು ಸರ್ಕಾರದ ಜೊತೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್,ಡಿಎಂಕೆ ಪಕ್ಷದ ಟಿ ಆರ್ ಬಾಲು, ಜೆಡಿಯು ನಾಯಕ ಲಲ್ಲನ್ ಸಿಂಗ್, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ ಮತ್ತು ಆರ್‌ಜೆಡಿ ಮುಖಂಡ ಡೆರೆಕ್ ಒ’ಬ್ರಿಯಾನ್, ಶಿವಸೇನೆ (ಉದ್ದವ್ ಬಣ)ದ ಅರವಿಂದ್ ಸಾವಂತ್, ಬಿಜು ಜನತಾ ದಳದ ಸಸ್ಮಿತ್ ಪಾತ್ರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಸುಪ್ರಿಯಾ ಸುಳೆ ಮತ್ತು ಟಿಡಿಪಿ ನಾಯಕ ರಾಮ್ ಮೋಹನ್ ನಾಯ್ಡು ಸಭೆಯಲ್ಲಿ ಭಾಗವಹಿಸಿದ್ದರು. ಎಎಪಿ ನಾಯಕರನ್ನು ಸಭೆಗೆ ಆಹ್ವಾನಿಸಿರಲಿಲ್ಲ ಎಂದು ಹೇಳಲಾಗಿದೆ.