ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರ ಅನರ್ಹತೆಯ ಬಗ್ಗೆ ಭಾರತದ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಪ್ರತಿಕ್ರಿಯಿಸಿದ್ದು, ‘ಇದು ನಿಜಕ್ಕೂ ವಿಧ್ವಂಸಕ ಕೃತ್ಯ.’ ಯಾಕೆಂದರೆ, ಫೋಗಟ್‌ರಂತಹ ಗಣ್ಯ ಕ್ರೀಡಾಪಟುಗಳು ಪ್ರಮುಖ ಸ್ಪರ್ಧೆಗಳಿಗೆ ಮುನ್ನ ತೂಕವನ್ನು ಕಡಿಮೆ ಮಾಡುವ ತಂತ್ರಗಳನ್ನು ಚೆನ್ನಾಗಿ ತಿಳಿದಿರುತ್ತಾರೆ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮತ್ತು ಏಕೈಕ ಪುರುಷ ಬಾಕ್ಸರ್ ವಿಜೇಂದರ್, “ಒಲಿಂಪಿಕ್ಸ್ ಫೈನಲ್‌ಗೆ ಮುನ್ನ ಫೋಗಟ್ ಅವರ ತೂಕ 100 ಗ್ರಾಂ ಮೀರಿದೆ ಎಂಬುದು ಆಘಾತಕಾರಿ” ಎಂದು ಹೇಳಿದ್ದಾರೆ.
“ಇದು ವಿಧ್ವಂಸಕ ಕೃತ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. 100 ಗ್ರಾಂ ಎಂಬ ಕಾರಣ ಕೇಳಿದರೆ, ತಮಾಷೆ ಎನ್ನಿಸುತ್ತದೆ. ನಾವು ಕ್ರೀಡಾಪಟುಗಳು ಒಂದು ರಾತ್ರಿಯಲ್ಲಿ 5 ರಿಂದ 6 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ನಿಸ್ಸಂದೇಹವಾಗಿ ಕಷ್ಟ. ಆದರೆ ನಮ್ಮ ಹಸಿವು, ಬಾಯಾರಿಕೆ ಮತ್ತು ತೀವ್ರತರವಾದ ಪರಿಶ್ರಮವನ್ನು ಹೇಗೆ ನಿಯಂತ್ರಿಸಬೇಕೆಂದು ನಮಗೆ ತಿಳಿದಿದೆ,” ಎಂದು ಅವರು ಹೇಳಿದ್ದಾರೆ.
“ನಾನು ವಿಧ್ವಂಸಕ ಎಂದಿದ್ದರಲ್ಲಿ ‘ಭಾರತವು ಕ್ರೀಡಾ ರಾಷ್ಟ್ರವಾಗಿ ಬೆಳೆಯುವುದನ್ನು ನೋಡಲು ಇಷ್ಟಪಡದ ಜನರು’ ಇದ್ದಾರೆ. ಆ ಹುಡುಗಿ ತುಂಬಾ ಅನುಭವಿಸಿದ್ದಾಳೆ. ಆಕೆ ಈ ರೀತಿ ತಪ್ಪು ಮಾಡಿದ್ದಾರೆಂದು ನಂಬಲು ಸಾಧ್ಯವಿಲ್ಲ. ಆಕೆ ಗಣ್ಯ ಕ್ರೀಡಾಪಟು, ಆಕೆಗೆ ತೂಕವನ್ನು ನಿಭಾಯಿಸುವುದು ತಿಳಿದಿದೆ. ತೂಕಕ್ಕಿಂತ ಹೆಚ್ಚಿನದ್ದು ಬೇರೆ ಏನಾದರೂ ಇರಬಹುದು. ಫೋಗಟ್ ಚೆನ್ನಾಗಿದ್ದಾರೆಂದು ನಾನು ಭಾವಿಸುತ್ತೇನೆ. ಈಗ ಆಗಿರುವುದು ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆವೊಡ್ಡಿದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 2023ರ ಏಪ್ರಿಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಫೋಗಟ್ ಮುನ್ನಡೆಸಿದ್ದರು. ಪ್ರತಿಭಟನೆ ವೇಳೆ, ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬೀದಿಯಲ್ಲಿ ಎಳೆದಾಡಿದ್ದರು. ಕೇಂದ್ರ ಸರ್ಕಾರದಿಂದಾದ ಇಂತಹ ಅವಮಾನ, ದೌರ್ಜನ್ಯಗಳನ್ನು ಸಹಿಸಿಕೊಂಡು ಫೋಗಟ್ ಮುನ್ನಡೆದಿದ್ದರು. ಒಲಿಂಪಿಕ್ಸ್‌ನಲ್ಲಿ ಹಲವು ಪಂದ್ಯಗಳನ್ನು ಗೆದ್ದು ಫೈನಲ್‌ವರೆಗೆ ತೆರಳಿದ್ದರು.