ಘಟಪ್ರಭಾ ಪ್ರವಾಹದಲ್ಲಿ ಮನೆ, ಮಠ ಕಳೆದುಕೊಂಡು ಸಂತ್ರಸ್ತರು ಶಾಶ್ವತ ಸೂರು ಹಾಗೂ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಎತ್ತಿನ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಸಮೇತ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ರಾಣಾ ಪ್ರತಾಪ ಸಿಂಗ್ ವೃತ್ತದಲ್ಲಿ ಜಮಖಂಡಿ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
“ಘಟಪ್ರಭಾ ನದಿಯ ಪ್ರವಾಹದಿಂದ ಮುಧೋಳ ತಾಲೂಕಿನ ನದಿತೀರದ ಎಲ್ಲ ಹಳ್ಳಿಗಳು ಹಾಗೂ ಕಂದಾಯ ಜಮೀನುಗಳು ಸತತವಾಗಿ 4 ವರ್ಷ ಪ್ರವಾಹದಿಂದ ಮುಳುಗಡೆಯಾಗುತ್ತ ಬಂದಿವೆ. ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಬ್ಯಾರೇಜ್‌ಗಳಿಂದ ಘಟಪ್ರಭಾ ನದಿಯ ನೀರು ಹೊಲಗದ್ದೆಗಳಿಗೆ ನುಗ್ಗಿ ಬೆಳೆಹಾನಿಯಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಬೆಳೆಹಾನಿಯಾದರೆ ಸರ್ಕಾರ ಮಾತ್ರ ಪರಿಹಾರ ನೀಡದೆ ರೈತರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪ್ರವಾಹದಿಂದ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ₹5 ಲಕ್ಷ ಪರಿಹಾರ ನೀಡಬೇಕು” ಎಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಉಪ ವಿಭಾಗಾಧಿಕಾರಿ ಮಾತಿಗೂ ಜಗ್ಗದ ಪ್ರತಿಭಟನಾಕಾರರು: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸಂತ್ರಸ್ತರ ಸಮಸ್ಯೆ ಆಲಿಸಿ ಮನವೊಲಿಕೆಗೆ ಮುಂದಾದರು. ಎಸಿ ಮಾತಿಗೆ ಕ್ಯಾರೆ ಎನ್ನದ ಪ್ರತಿಭಟನಾಕಾರರು, ಸ್ಥಳಕ್ಕೆ ಜಿಲ್ಲಾಧಿಕಾ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಮುಧೋಳ ತಾಲೂಕಿನ ತಹಶೀಲ್ದಾರ್ ವಿನೋದ ಅತ್ತಳ್ಳಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “20 ಹಳ್ಳಿಗಳು ಹಾನಿಗೊಳಗಾಗಿದ್ದು, ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಸಮೀಕ್ಷೆ ಮಾಡಲು ಸೂಚಿಸಿದ್ದಾರೆ. ಆದಷ್ಟು ಬೇಗ ಶೀಘ್ರ ಕ್ರಮ ಕೈಗೊಳ್ಳಲಾಗುವುದು” ಎಂದು ಮಾಹಿತಿ ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತೀರ್ಥಹಳ್ಳಿ ತಾಲೂಕಿನ ಹಲವು ಅರಣ್ಯ ಅಧಿಕಾರಿಗಳ ವರ್ಗಾವಣೆ
ಈ ಸಂದರ್ಭದಲ್ಲಿ ರೈತ ಮುಖಂಡರಾದ ದುಂಡಪ್ಪ ಯರಗಟ್ಟಿ, ಬಸವಂತ ಕಾಂಬಳೆ, ಮುತ್ತಪ್ಪ ಕೋಮಾವಾರ, ರಾಜೇಂದ್ರ ಚಂದನಚೋರ, ಮಹೇಶ ಪಾಟೀಲ, ಮುತ್ತು ಹೊಸಕೋಟೆ, ಪರಸು ನಿಗಡೆ, ಸದಾಶಿವ ಕುಂಚನೂರ್, ಶಿವಪ್ಪ ಚೌದರಿ, ಸದಾಶಿವ ತೆಲಿ, ನಾಗೇಶ ಸೊರಗಾವಿ ಸೇರಿದಂತೆ ಇತರರು ಇದ್ದರು.