ರಾಯಚೂರು ನಗರದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅಡ್ಡಾದಿಡ್ಡಿಯಾಗಿ ತಿರುಗಾಡುವುದರಿಂದ ತರಕಾರಿ ವ್ಯಾಪಾರಿಗಳಿಗೆ, ಹಣ್ಣು ಹಂಪಲ ವ್ಯಾಪಾರಸ್ಥರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಾಗಿದೆ.
“ನಗರದ ಮುಖ್ಯ ರಸ್ತೆಗಳಲ್ಲಿ, ಕೇಂದ್ರ ಬಸ್ ನಿಲ್ದಾಣದಿಂದ ತೀನ್ ಖಂದಿಲ್ ಹೋಗುವ ರಸ್ತೆ, ಸ್ಟೇಶನ್ ರಸ್ತೆ, ಗಂಜ್ ರಸ್ತೆ ಸೇರಿದಂತೆ ಮಾರ್ಕೆಟ್ ಮುಂಭಾಗ ಸೇರಿ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತವೆ. ಹಲವು ಬಾರಿ ವಾಹನ ಸವಾರರ ಮೇಲೆ ದಾಳಿ ಮಾಡಿದ್ದು, ಬೀಡಾಡಿ ದನಗಳಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ” ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದರು.
“ರಾಯಚೂರು ನಗರಸಭೆಯಿಂದ ಜುಲೈ 11ರಂದು ಆದೇಶ ನೀಡಿ 24 ತಾಸಿನೊಳಗೆ ದನಗಳನ್ನು ಸುಪರ್ದಿಗೆ ಪಡೆಯಲು ಹೇಳಿತ್ತು. 26 ದಿನಗಳಾದರೂ ಒಂದೇ ಒಂದು ಬೀಡಾಡಿ ದನವನ್ನು ಹಿಡಿದು ಗೋಶಾಲೆಗೆ ಒಪ್ಪಿಸುವ ಕಾರ್ಯಾಚರಣೆ ನಡೆದಿಲ್ಲ” ಎಂದು ವ್ಯಾಪಾರಸ್ಥರು ಆರೋಪಿಸಿದರು.
“ಬೀಡಾಡಿ ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ. ಈ ಕುರಿತು ಎಚ್ಚರ ವಹಿಸಬೇಕಾದ ಪೊಲೀಸ್ ಇಲಾಖೆ ಮತ್ತು ನಗರಸಭೆ ನಿದ್ರೆಗೆ ಜಾರಿದೆ. ಬೀದಿ ಬದಿಯ ವ್ಯಾಪಾರಿಗಳು ಬೀಡಾಡಿ ದನಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ” ಎಂದು ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚಿಗೆ ಪಶು ಪಶುಪಾಲನೆ ಇಲಾಖೆ ಸಚಿವ ವೆಂಕಟೇಶ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ ಒಂದು ಬಾರಿ ಮಾಲೀಕರಿಗೆ ನೋಟೀಸ್ ನೀಡಿ ಎರಡನೇ ಬಾರಿಗೆ ಗೋಶಾಲೆಗೆ ಹಾಕುವುದಕ್ಕೆ ನಿರ್ದೇಶನ ನೀಡಿದ್ದಾರೆ. ಸಭೆ ನಡೆಸಿ ಒಂದು ವಾರವಾದರೂ ನಗರಸಭೆ ಅಧಿಕಾರಿಗಳು ಬೀಡಾಡಿ ದನಗಳ ನಿಯಂತ್ರಣ ಮಾಡಲು ಮುಂದಾಗುತ್ತಿಲ್ಲ.
ದ್ವಿಚಕ್ರ ವಾಹನ ಓಡಿಸುವಾಗ ಬೀಡಾಡಿ ದನ ಢಿಕ್ಕಿಯಾಗಿ ಅಪಘಾತ ಎದುರಿಸಿದ ಅಜೀಜ್ ಜಾಗಿರದಾರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬೀಡಾಡಿ ದನಗಳ ಹಾವಳಿಯಿಂದ ಜನರು, ವ್ಯಾಪಾರಸ್ಥರು ಸೋತು ಹೋಗಿದ್ದಾರೆ. ನಾನು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ದನಗಳ ಗುಂಪು ಅಡ್ಡಾದಿಡ್ಡಿ ರಸ್ತೆ ಮೇಲೆ ಬಂದವು. ಇದರಿಂದ ನನ್ನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು. ಹೀಗೆ ನಿತ್ಯ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಅಪಘಾತದಿಂದ ಎಷ್ಟೋ ದನಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದನ್ನು ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಆದಷ್ಟು ಬೇಗ ಎಚ್ಚೆತ್ತುಕೊಂಡು ಕಡಿವಾಣ ಹಾಕಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕನ್ನಡ ಸಾಹಿತ್ಯ ಪರಿಷತ್; ಶ್ರೀರಂಗಪಟ್ಟಣ ತಾಲೂಕು ಘಟಕಕ್ಕೆ ಎಂ ಬಿ ಕುಮಾರ್ ನೇಮಕ
ರಾಯಚೂರು ನಗರಸಭೆ ಕಮಿಷನರ್ ಗುರುಸಿದ್ದಯ್ಯ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಾರ್ವಜನಿಕರಿಗೆ ನೋಟಿಸ್ ನೀಡಿ ಒಂದು ವಾರದಲ್ಲಿ ಬೀಡಾಡಿ ದನಗಳನ್ನು ಗೋಶಾಲೆಗೆ ಒಪ್ಪಿಸುವ ಕೆಲಸ ಮಾಡಲಾಗುವುದು” ಎಂದು ಭರವಸೆ ನೀಡಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್