ದೇಶದ ಭವಿಷ್ಯವಾಗಿರುವ ಮಕ್ಕಳ ಹಕ್ಕುಗಳ ರಕ್ಷಣೆಯ ವಿಷಯದಲ್ಲಿ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕೆಂದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಗುರುವಾರ ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ ಬೀದರ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೀದರ ಇವರ
ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಿಷನ್ ವಾತ್ಸಲ್ಯ ಯೋಜನೆ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಸಹಭಾಗೀದಾರ ಇಲಾಖೆಯ ಜಿಲ್ಲಾ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ʼಸುಸ್ಥಿರ ಅಭಿವೃದ್ಧಿಯನ್ನು ಗುರುತಿಸುವ 17 ಸೂಚ್ಯಂಕಗಳಲ್ಲಿ 9 ಸೂಚ್ಯಂಕಗಳು ಮಂಡಳಿ ಮತ್ತು ಮಕ್ಕಳಿಗಾಗಿ ಸಂಬಂಧಿಸಿವೆ, ಮಕ್ಕಳನ್ನು ಕೇಂದ್ರವಾಗಿರಿಸಿಕೊಳ್ಳದ ಅಭಿವೃದ್ಧಿಯಿಂದ ಹೆಚ್ಚು ಅನುಕೂಲ ಆಗುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಕೇಂದ್ರವಾಗಿ ಇಟ್ಟುಕೊಳ್ಳಬೇಕು. ಮಕ್ಕಳು ತಮ್ಮ ಬಾಲ್ಯವನ್ನು ಆನಂದಿಸುವಂತಹ ವಾತಾವರಣ ಸೌಲಭ್ಯ ಒದಗಿಸಬೇಕು. ಅಂದಾಗಲೇ ಭಾರತ ಭವಿಷ್ಯ ಇನ್ನಷ್ಟು ಭವ್ಯವಾಗಬಲ್ಲದು. ಬೀದರ ಜಿಲ್ಲೆಯಲ್ಲಿ ಮಕ್ಕಳ ಸ್ಥಿತಿಗತಿ ಸಮಾದಾನಕರವಾಗಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವುದು ತೀವ್ರ ಕಳವಳಕಾರಿಯಾದ ಸಂಗತಿಯಾಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ʼನಮ್ಮ ಮಕ್ಕಳು ದೇಶದ ಆಸ್ತಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿರುವ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಮಕ್ಕಳ ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಬಾಲಕಾರ್ಮಿಕ, ಬಾಲ್ಯವಿವಾಹ, ಬಡತನದಿಂದ ಶಾಲೆ ತೊರೆಯುವುದು. ಹೀಗೆ ಹಲವು ಕಾರಣಗಳಿಂದ ಮಕ್ಕಳು ಸಂಕಷ್ಟದಲ್ಲಿರುವುದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಮಕ್ಕಳ ವಿಷಯದಲ್ಲಿ ಕಾಳಜಿ ವಹಿಸಬೇಕು. ಮಕ್ಕಳ ಬಾಲ್ಯವು ಸುರಕ್ಷತೆಯನ್ನು ಖಚಿತಪಡಿಸಿಕೊಂಡು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಬೇಕುʼ ಎಂದರು.
ಪ್ರಾದೇಶಿಕ ಸಂಯೋಜಕರು ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳದ ಡಾ. ಕೆ.ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ʼಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಪ್ರತಿಯೊಂದು ಮಗು, ಮಕ್ಕಳ ಕಾನೂನಾತ್ಮಕವಾಗಿ ಬಾಲ್ಯವಿವಾಹ, ಮಹಿಳೆಯರ ಹಾಗೂ ಮಕ್ಕಳ ಸಾಗಾಣಿಕೆ ಮತ್ತು ಮಾರಾಟ, ಮಕ್ಕಳ ಮೇಲಿನ ಶೋಷಣೆ ಮಕ್ಕಳ ಭಿಕ್ಷಾಟನೆ, ಮಕ್ಕಳ ಪೌಷ್ಠಿಕತೆ, ಮಕ್ಕಳ ಮೇಲೆ ಲೈಂಗಿಕ ಹಲ್ಲೆ, ಮಕ್ಕಳು ಕಾಣೆಯಾಗುವುದು, ಬೀದಿ ಮಕ್ಕಳು, ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವುದು ಮಾಡಿದಲ್ಲಿ ಮಾನವ ಅಭಿವೃದ್ಧಿ ಆಗುತ್ತದೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ವರ್ಗಾವಣೆ: ‘ಹೋಗಬೇಡಿ ಸರ್’ ಎಂದು ಕಣ್ಣೀರಿಟ್ಟ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಬೀದರನ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಜಿಯಾ ಬಳಬಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೂಪಾ, ಮಕ್ಕಳ ರಕ್ಷಣಾ ಘಟಕದ ಗೌರಿಶಂಕರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.