ಮುಡಾ ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆದು ವರದಿ ಬರುವವರೆಗೂ ಆ ನಿವೇಶನಗಳು ನಮ್ಮದಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, “ಈಗಾಗಲೇ ಮುಡಾ ಸೈಟ್ ವಾಪಸ್ ಕೊಡುವ ಬಗ್ಗೆ ಹೇಳಾಗಿದೆ. ಅದರ ಅರ್ಥ ನಮಗೆ ಕೊಟ್ಟಿರುವ ನಿವೇಶನವೂ ರದ್ದಾಗಿದೆ ಎಂಬುದು. ಮುಡಾ ನಿವೇಶನ ಹಂಚಿಕೆ ಸಂಬಂಧ ನ್ಯಾಯಾಂಗ ತನಿಖೆ ಆಗುತ್ತಿದೆ. 2005 ರಿಂದ ಯಾರಿಗೆಲ್ಲಾ ನಿವೇಶನ ಕೊಟ್ಟಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿಯಲಿದೆ. ಈಗ ಆ ನಿವೇಶನಗಳು ನಮ್ಮ ಸುಪರ್ದಿಗೆ ಬರುವುದಿಲ್ಲ” ಎಂದರು.
“ನ್ಯಾಯಾಂಗ ತನಿಖೆ ನಡೆದು ವರದಿ ಬರುವವರೆಗೂ ಸೈಟ್ ನಮ್ಮದಾಗುವುದಿಲ್ಲ. ತನಿಖೆ ಮಾಡಿ ನಮ್ಮದು ಎಂದರೆ ನಿವೇಶನ ನಮಗೆ ಕೊಡುತ್ತಾರೆ. ಇಲ್ಲದಿದ್ದರೆ ಕುಟುಂಬದವರು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಮ್ಮ ತಂದೆ ಭ್ರಷ್ಟಾಚಾರ ಮಾಡಿದ್ದಾರೆಂದು ಉದ್ದೇಶಪೂರ್ವಕವಾಗಿ ಬಿಂಬಿಸುವುದು ಸರಿಯಲ್ಲ” ಎಂದು ಸಮರ್ಥಿಸಿಕೊಂಡರು.
ಮೈಸೂರು ಹತ್ತಿರಕ್ಕೆ ಸಾಗಿದ ಪಾದಯಾತ್ರೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮಗೆ ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಪಾದಯಾತ್ರೆ ನಡೆಸುತ್ತಿದ್ದು, ಮೈಸೂರು ಸಮೀಪಿಸಿದೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ಕೊಡಲು ಕಾಂಗ್ರೆಸ್ ಮೈಸೂರಿನಲ್ಲಿ ಇಂದು (ಆ.9) ಜನಾಂದೋಲನ ಸಮಾವೇಶ ಆಯೋಜಿಸಿದೆ.