- ಕೇಂದ್ರ ಸಚಿವೆ ಶೋಭಾ ಡಿಸಿ ಮತ್ತು ಎಸ್‌ಪಿಗಳನ್ನ ಸಂಪರ್ಕ ಮಾಡಿ ಈ ವಿವರವನ್ನು ಪಡೆಯಬೇಕು
- ಒಂದು ರಾಜಕೀಯ ಪಕ್ಷ ಹಾಗೂ ಕೇಂದ್ರ ಗೃಹ ಸಚಿವರ ಈ ರೀತಿಯ ಬೆದರಿಕೆ ಎಷ್ಟರ ಮಟ್ಟಿಗೆ ಸರಿ
ರಾಜ್ಯ ಚುನಾವಣಾ ಆಯೋಗದ ಕೆಲಸ ಕಾರ್ಯಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಮತ್ತು ಸಂವಹನ ಉಸ್ತುವಾರಿಗಳಾಗಿರುವ ಬ್ರಿಜೇಶ್ ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಶೋಭಾ ಕರಂದ್ಲಾಜೆ ಅವರು ತಮ್ಮ ಕಾರ್ಯಕರ್ತರಿಗೆ ಕಾಗದ ಬರೆದಿದ್ದು, ಯಾವ ಯಾವ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಬೇಕು. ಯಾವ ಭಾಗಗಳಲ್ಲಿ ಕೇಂದ್ರ ಸೇನಾಪಡೆಗಳು ಅಥವಾ ಅರೇ ಸೇನಾಪಡೆ ತುಕಡಿಗಳನ್ನು ನಿಯೋಜಿಸಬೇಕು ಎಂಬ ವಿವರವನ್ನು ಕೇಳಿರುವ ಬಗ್ಗೆ ಕಾಗದದಲ್ಲಿ ಉಲ್ಲೇಖಿಸಿದ್ದಾರೆ” ಎಂದರು.
“ಕೇಂದ್ರ ಸಚಿವರಾಗಿರುವ ಅವರು ಡಿಸಿ ಮತ್ತು ಎಸ್‌ಪಿಗಳನ್ನ ಸಂಪರ್ಕ ಮಾಡಿ ಈ ವಿವರವನ್ನ ಪಡೆಯಬೇಕು. ಅದನ್ನ ಬಿಟ್ಟು ತಮ್ಮ ಕಾರ್ಯಕರ್ತರಿಂದ ಈ ರೀತಿಯ ಮಾಹಿತಿ ಕಲೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬಿಜೆಪಿ ಸರ್ಕಾರ ಬಿಟ್ಟು ಬೇರೆ ಯಾವುದಾದರೂ ಸರ್ಕಾರ ಅಧಿಕಾರಕ್ಕೆ ಬರದಿದ್ದರೇ ರಾಜ್ಯದಲ್ಲಿ ಕೋಮುಗಲಭೆ, ಕೋಮುಘರ್ಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿರುವುದು ರಾಜ್ಯದ ಜನರಿಗೆ ಬೆದರಿಕೆ ಹಾಕಿರುವ ರೀತಿ” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತದಾರರ ದತ್ತಾಂಶ ಮಾರಾಟ: ಖಾಸಗಿ ಸಂಸ್ಥೆಯ ವೆಬ್‌ಸೈಟ್ ದೆಹಲಿ ವಿಳಾಸದಲ್ಲಿ ನೋಂದಣಿ
“ಶೋಭಾ ಕರಂದ್ಲಾಜೆ ಅವರು ಬರೆದ ಕಾಗದ ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಏಕ ಪಕ್ಷಕ್ಕೆ ಅನುಕೂಲಗಳನ್ನು ಮಾಡಿ, ಬೇರೆ ಪಕ್ಷಗಳಿಗೆ ತೊಂದರೆಗಳನ್ನ ಉಂಟು ಮಾಡುವ ರೀತಿ ಕಾಣಿಸುತ್ತಿದೆ. ಒಂದು ರಾಜಕೀಯ ಪಕ್ಷ ಹಾಗೂ ಕೇಂದ್ರ ಗೃಹ ಸಚಿವರು ಈ ರೀತಿಯ ಬೆದರಿಕೆಯನ್ನ ಹಾಕುವುದು ಎಷ್ಟರ ಮಟ್ಟಿಗೆ ಸರಿ” ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.