ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ತಂತ್ರವಾದರೆ, ಬಿಜೆಪಿ-ಜೆಡಿಎಸ್ ನಾಯಕರ ಆರೋಪಗಳ ವಿರುದ್ಧ ಆರ್ಭಟಿಸುವುದಕ್ಕೆ ಜನಾಂದೋಲನ ಸಭೆ ಕಾಂಗ್ರೆಸ್‌ಗೆ ನೆರವಾಯಿತು. ಇಷ್ಟು ಬಿಟ್ಟರೆ 'ಮೈಸೂರು ಚಲೋ' ಆಗಲಿ, 'ಜನಾಂದೋಲನ ಸಭೆ'ಯಾಗಲಿ ಎರಡರಲ್ಲೂ ನಾಡಿನ ಹಿತಾಸಕ್ತಿ, ಜನಪರ ಕಾಳಜಿ ಕಾಣಲಿಲ್ಲ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ನಡೆಸುತ್ತಿರುವ ‘ಮೈಸೂರು ಚಲೋ’ ಪಾದಯಾತ್ರೆ ಮತ್ತು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಡೆಸಿದ ‘ಜನಾಂದೋಲನ ಸಭೆ’- ಎರಡರಲ್ಲೂ ಎಳ್ಳಷ್ಟಾದರೂ ಜನಪರ ಕಾಳಜಿ ಇದೆಯೇ?
‘ಮೈಸೂರು ಚಲೋ’ ಮತ್ತು ‘ಜನಾಂದೋಲನ ಸಭೆ’ ನಡೆದ ರೀತಿ ಗಮನಿಸಿದರೆ; ಎರಡರಲ್ಲೂ ರಾಜಕೀಯ ಹಿತಾಸಕ್ತಿ ಎದ್ದು ಕಾಣುತ್ತಿದೆ. ದಲಿತ ಸಮುದಾಯಗಳ ಪರ ಹೋರಾಟ, ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಹಾಗೂ ನಾವು ಭ್ರಷ್ಟರಲ್ಲ ಎಂಬ ಸಮರ್ಥನೆ ಎಲ್ಲವೂ ಇಲ್ಲಿ ಬೂಟಾಟಿಕೆ.
ಪಾದಯಾತ್ರೆಗಳಾಗಲಿ, ಜನಾಂದೋಲನ ಸಭೆಗಳಾಗಲಿ ದೇಶ, ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಹಾಗೂ ಜನ ಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವ ಆಶಯಗಳೊಂದಿಗೆ ಹುಟ್ಟಿಕೊಳ್ಳುತ್ತವೆ. ಆದರೆ, ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಹಾಗೂ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮೇಲಿನ ಯಾವುದೇ ಒಂದು ಆಶಯ ಇದೆ ಅಂತ ಅನ್ನಿಸುವುದಿಲ್ಲ.
ಭ್ರಷ್ಟಾಚಾರ ವಿರುದ್ಧ ಮೈಸೂರು ಚಲೋ ಪಾದಯಾತ್ರೆ ಎಂದು ಬೀಗುವ ಬಿಜೆಪಿ-ಜೆಡಿಎಸ್ ಮುಂಚೂಣಿ ನಾಯಕರೆಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗೆದ್ದವರೇ. ನೈತಿಕತೆಯನ್ನು ಸಮಾಧಿ ಮಾಡಿ ಹೆಜ್ಜೆಹಾಕುತ್ತಿದ್ದಾರೆ. ಪಾದಯಾತ್ರೆಯಲ್ಲಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಚಿವ ಅಶ್ವತ್ಥನಾರಾಯಣ ಇವರೆಲ್ಲರಿಗೂ ಭ್ರಷ್ಟಾಚಾರ ಎಂದರೆ ಪಾಪ ಗೊತ್ತೇ ಇಲ್ಲ!

ದಿನ ಬೆಳಗಾದರೆ ಸಾಕು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ನಾಯಕರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡುತ್ತಿರುತ್ತಾರೆ. ಮೈಸೂರು ಚಲೋ ಪಾದಯಾತ್ರೆಯಿಂದ ದೂರ ಉಳಿದ ಯತ್ನಾಳ್, ವಿಜಯೇಂದ್ರರ ಹೊಂದಾಣಿಕೆ ರಾಜಕಾರಣವನ್ನು ಬಿಚ್ಚಿಟ್ಟು, “ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ ಮೇರೆಗೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ನೇರವಾಗಿ ಆರೋಪಿಸಿದ್ದಾರೆ.
ಯತ್ನಾಳ್ ಆರೋಪಗಳು ಒಂದಲ್ಲ, ಎರಡಲ್ಲ. ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಸಾವಿರಾರು ಕೋಟಿಗೆ ಮಾರಾಟಕ್ಕಿದೆ ಅಂತಲೂ, ಮಂತ್ರಿ ಹುದ್ದೆ ನೂರಾರು ಕೋಟಿ ಖರೀದಿಗಿದೆ ಎಂತಲೂ, ಆರ್‌ಟಿಜಿಎಸ್ ಮೂಲಕ ಹಣ ಪಡೆಯುವ ನಾಯಕ ನಮ್ಮಲ್ಲಿ ಇದ್ದಾನೆ ಎಂದೂ, ಪಿಎಸ್‌ಐ ಅಕ್ರಮದಲ್ಲಿ ವಿಜಯೇಂದ್ರನ ಕೈವಾಡವಿದೆ ಎಂದೂ, ಕೋವಿಡ್ ಅವಧಿಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ ಎಂತಲೂ… ತಮ್ಮ ಪಕ್ಷದ ನಾಯಕರ ವಿರುದ್ದವೇ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿ ಸರ್ಕಾರ ಅವಧಿಯ 25 ಭ್ರಷ್ಟಾಚಾರ ಪ್ರಕರಣಗಳು ತನಿಖೆ ಹಂತದಲ್ಲಿವೆ. ಪಾದಯಾತ್ರೆ ನಡೆಯುತ್ತಿರುವಾಗಲೇ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಗಣಿ ಅಕ್ರಮ ಬೆಳಕಿಗೆ ಬಂದಿದೆ. ಇಷ್ಟೆಲ್ಲ ಭ್ರಷ್ಟಾಚಾರದ ಆರೋಪಗಳನ್ನು ಮೆತ್ತಿಕೊಂಡು ಪಾದಯಾತ್ರೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಹೆಜ್ಜೆ ಹಾಕುತ್ತಾರೆ ಎಂದರೆ ಅದು ಭಂಡತನದ ಪರಮಾವಧಿ.
ಬಿಜೆಪಿ-ಜೆಡಿಎಸ್ ನಡುವಿನ ಪಾದಯಾತ್ರೆ ಹೇಗಾಗಿದೆ ಎಂದರೆ; ಬಲವಂತದ ಹೆರಿಗೆ ತರ ಕಾಣುತ್ತಿದೆ. ಬಿಜೆಪಿ-ಜೆಡಿಎಸ್ ನಾಯಕರು, ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಮುಜುಗರ ಅನುಭವಿಸುತ್ತಾ ಹೆಜ್ಜೆಹಾಕುತ್ತಿದ್ದಾರೆ. “ಬಿಜೆಪಿ ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ. ಹಾಸನದಲ್ಲಿ ಪೆನ್ ಡ್ರೈವ್ ಹಂಚಿದ, ದೇವೇಗೌಡರ ಕುಟುಂಬಕ್ಕೆ ವಿಷವಿಟ್ಟ ಪ್ರೀತಂ ಗೌಡ ಜೊತೆಗೆ ವೇದಿಕೆ ಹಂಚಿಕೊಳ್ಳಬೇಕಾ? ಯಾವುದೇ ಕಾರಣಕ್ಕೂ ಪಾದಯಾತ್ರೆಯಲ್ಲಿ ನಾವು ಭಾಗಿಯಾಗಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ನಂತರ ಸಚಿವ ಸ್ಥಾನ ಕೈತಪ್ಪಿ ಹೋಗುತ್ತೆ ಎನ್ನುವ ಭಯಕ್ಕೋ ಏನೋ ಗಪ್‌ಚುಪ್ ಆಗಿ ಬಂದು ಪಾದಯಾತ್ರೆಯಲ್ಲಿ ಭಾಗಿಯಾದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ ಮುಡಾದಲ್ಲಿ ನಿವೇಶನಗಳನ್ನು ಪಡೆದಿದ್ದಾರೆ ಎಂದು 2011ರಲ್ಲಿ ಬಿ ಎಸ್ ಯಡಿಯೂರಪ್ಪ ನೀಡಿದ್ದ ಜಾಹೀರಾತು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ ಡಿ ಕುಮಾರಸ್ವಾಮಿ ಇಡೀ ಪಾದಯಾತ್ರೆ ವಿಷಯವನ್ನೇ ಮರೆಮಾಚಿದರು. ಅಲ್ಲಿಗೆ ಬಿಜೆಪಿ ಏತಕ್ಕಾಗಿ ಪಾದಯಾತ್ರೆ ನಡೆಸುತ್ತಿದೆ ಎಂಬುದೇ ಆ ಪಕ್ಷದ ನಾಯಕರಿಗೆ ಗೊಂದಲವಾಗಿಬಿಟ್ಟಿತು.
ನಂತರ ಎಚ್ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವಿನ ಆರೋಪ, ಪ್ರತ್ಯಾರೋಪದಲ್ಲಿಯೇ ಪಾದಯಾತ್ರೆ ಮುಗಿಯುವ ಹಂತಕ್ಕೆ ಬಂದಿದೆ. ಈ ನಡುವೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮಂಡ್ಯದಲ್ಲಿ ಭಾಗಿಯಾಗಿ, ತನ್ನ ಬೆಂಬಲಿಗರಿಂದ “ಗೌಡರ ಗೌಡ ಪ್ರೀತಂ ಗೌಡ..” ಎಂದು ಬಹುಪರಾಕ್ ಹಾಕಿಸಿಕೊಂಡಿದ್ದು ಕುಮಾರಸ್ವಾಮಿಯ ಕಣ್ಣು ಕೆಂಪಾಗಿಸಿದೆ.

ಮೋದಿಯನ್ನು ಮನಬಂದಂತೆ ಹೊಗಳಿ ಬಿಜೆಪಿ ಸೇರಿದ್ದ ಮಾಜಿ ಸಂಸದೆ ಸುಮಲತಾ ಪಾದಯಾತ್ರೆಯಲ್ಲಿ ಕಾಣದಿರುವುದು ಕುಮಾರಸ್ವಾಮಿಯ ಕುತಂತ್ರವೋ ಅಥವಾ ಕುಮಾರಸ್ವಾಮಿಯನ್ನು ನಾನು ಒಪ್ಪುವುದಿಲ್ಲ ಎನ್ನುವ ಸುಮಲತಾ ಧೋರಣೆಯೋ ಪ್ರಶ್ನೆಯಾಗಿದೆ. ಹೀಗೆ ಗೊಂದಲದ ಗೂಡಾಗಿಯೇ ಮೈಸೂರು ಚಲೋ ಪಾದಯಾತ್ರೆ ಸಾಗಿ ಬಂದಿದ್ದು, ನಾಳೆ (ಆ.10) ಮೈಸೂರಿನಲ್ಲಿ ಸಮಾರೋಪಗೊಳ್ಳಲಿದೆ.
‘ಮೈಸೂರು ಚಲೋ’ಗೆ ಪ್ರತಿಯಾಗಿ ಕಾಂಗ್ರೆಸ್ ಮೈಸೂರಿನಲ್ಲಿ ಶುಕ್ರವಾರ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎನ್ನುವ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಡೆಸಿದ ಜನಾಂದೋಲನ ಸಭೆ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವುದಕಷ್ಟೇ ಸೀಮಿತವಾಗಿದೆ. “ಸಿಎಂ ಜೊತೆ ನಾವಿದ್ದೇವೆ, ಅವರ ರಾಜೀನಾಮೆ ಕೊಡಲು ಬಿಡುವುದಿಲ್ಲ” ಎಂದು ಕಾಂಗ್ರೆಸ್ ನಾಯಕರೆಲ್ಲರೂ ಜನಾಂದೋಲನ ಸಭೆಯಲ್ಲಿ ಒಕ್ಕೊರಲಿನಿಂದ ಹೇಳಿದ್ದಾರೆ. ಆದರೆ, ತಮ್ಮ ವರ್ಗಾವಣೆ ದಂಧೆಯನ್ನು, ವಾಲ್ಮೀಕಿ ನಿಗಮದಲ್ಲಾದ ಅಕ್ರಮವನ್ನು ಜನತೆಯ ಮುಂದಿಟ್ಟು ‘ನಾವೂ ಅವರೇ’ ಎನ್ನುವುದರಿಂದ ತಪ್ಪಿಸಿಕೊಂಡಿದ್ದಾರೆ.
ಒಟ್ಟಾರೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ತಂತ್ರವಾಗಿಯೂ, ಡಿ ಕೆ ಶಿವಕುಮಾರ್ ಹಾಗೂ ಎಚ್ ಡಿ ಕುಮಾರಸ್ವಾಮಿ ನಡುವಿನ ಒಕ್ಕಲಿಗ ನಾಯಕತ್ವದ ಕಾಳಗಕ್ಕೂ ವೇದಿಕೆಯಾಯಿತು. ತಮ್ಮ ಮೇಲೆ ಬಂದಿರುವ ಆರೋಪಗಳ ಕುರಿತು ನಾಡಿನ ಜನರಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುವ, ಬಿಜೆಪಿ-ಜೆಡಿಎಸ್ ನಾಯಕರ ಆರೋಪಗಳ ವಿರುದ್ಧ ಆರ್ಭಟಿಸುವುದಕ್ಕೆ ಜನಾಂದೋಲನ ಸಭೆ ಕಾಂಗ್ರೆಸ್‌ಗೆ ನೆರವಾಯಿತು. ಇಷ್ಟು ಬಿಟ್ಟರೆ ‘ಮೈಸೂರು ಚಲೋ’ ಆಗಲಿ ಅಥವಾ ‘ಜನಾಂದೋಲನ ಸಭೆ’ಯಾಗಲಿ ಎರಡರಲ್ಲೂ ನಾಡಿನ ಹಿತಾಸಕ್ತಿ, ಜನಪರ ಕಾಳಜಿ ಕಾಣಲಿಲ್ಲ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.