“ಮುಡಾ ಪ್ರಕರಣದ ನೆಪದಲ್ಲಿ ಅಹಿಂದ ಸಮುದಾಯದ ನಾಯಕ ಸಿಎಂ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಯುವ ಮುಖಂಡ ಜಿ.ಬಿ.ವಿನಯ್ ಕುಮಾರ್ ಹೇಳಿದರು.
ದಾವಣಗೆರೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯನವರಂತಹ ಪ್ರಾಮಾಣಿಕ ರಾಜಕಾರಣಿ ರಾಜಕೀಯದಲ್ಲಿ ಮುಂದುವರೆದರೆ ಭ್ರಷ್ಟಾಚಾರಿಗಳಿಗೆ, ಬಂಡವಾಳಶಾಹಿಗಳಿಗೆ, ಪಾಳೇಗಾರಿಕೆ ಮನಸ್ಥಿತಿಯವರಿಗೆ, ಅಧಿಕಾರ ದಾಹ ಉಳ್ಳವರಿಗೆ, ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದು ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹಾಗಾಗಿ ರಾಜ್ಯದ ಆಹಿಂದ ಸಮುದಾಯಗಳು ಸಿದ್ದರಾಮಯ್ಯನವರ ಪರ ನಿಲ್ಲಬೇಕು” ಎಂದು ಮನವಿ ಮಾಡಿದರು.
ಸಿದ್ದರಾಮಯ್ಯನಂತವರು ರಾಜಕೀಯದಲ್ಲಿ ಮುಂದುವರೆದರೆ ಉಳಿದ ಹಿಂದುಳಿದ, ತಳ ಸಮುದಾಯಗಳಿಗೆ ರಾಜಕೀಯ ಅವಕಾಶ ದೊರೆಯುತ್ತವೆ. ಇಂತಹ ಪ್ರಭಾವಿ ಅಹಿಂದ ನಾಯಕರನ್ನು ರಾಜಕೀಯವಾಗಿ ಮುಗಿಸಿದರೆ ಈ ಸಮುದಾಯದವರು ವಿಧಿಯಿಲ್ಲದೆ ನಮ್ಮ ಹಿಂಬಾಲಕರಾಗುತ್ತಾರೆ ಎಂಬ ಭಾವನೆಯಿಂದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹುನ್ನಾರ ಮಾಡಲಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ ಜಾತಿವಾದಿ, ಬಂಡವಾಳಶಾಹಿಗಳ ಈ ಹುನ್ನಾರವನ್ನು ಅರ್ಥಹಿಸಿಕೊಂಡು ಅಹಿಂದ ನಾಯಕರ ರಕ್ಷಣೆಗೆ ನಿಲ್ಲಬೇಕಿದೆ ಎಂದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಹೊರತಾದ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಿದಲ್ಲಿ ಕಾಂಗ್ರೆಸ್ ನ್ನು ಅಧಿಕಾರದಿಂದ ದೂರ ಇಡಬಹುದು ಎಂದು ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿರುವವರ ಉದ್ದೇಶ. ಸಂಸತ್ತಿನಲ್ಲೂ ಈ ಬಗ್ಗೆ ಕಾಂಗ್ರೆಸ್ ನ 9 ಮಂದಿ ಸಂಸದರು ಈ ಬಗ್ಗೆ ದನಿ ಎತ್ತಬೇಕು. ಅದರಲ್ಲೂ ದಾವಣಗೆರೆ ಸಂಸದರು ವಿಶೇಷವಾಗಿ ದನಿ ಎತ್ತಬೇಕು. ಏಕೆಂದರೆ ಸಂಸದರು ಗೆಲುವು ಸಾಧಿಸಿ ದೆಹಲಿಗೆ ಹೋಗಿರುವುದು ಸಿದ್ದರಾಮಯ್ಯನರಿಂದಲೇ. ಅವರೇ ಅವರ ಗೆಲುವಿಗೆ ಕಾರಣ, ಇಂಥ ಸಂದಿಗ್ಧ ಸ್ಥಿತಿಯಲ್ಲೂ ಸಿದ್ದರಾಮಯ್ಯ ಪರ ಏಕೆ ದನಿ ಎತ್ತಿಲ್ಲ. ನಿನ್ನೆ ಮೈಸೂರಿನ ಜನಾಂದೋಲನ ಕಾರ್ಯಕ್ರಮಕ್ಕೂ ಕೂಡ ಬಂದಿಲ್ಲ, ಕಾರ್ಯಕ್ರಮಕ್ಕೆ ಅವರು ಗೈರು ಹಾಜರಾಗಿದ್ದರು, ಏಕೆ? ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ತುಮಕೂರು | ಜಮೀನು ಹಿಂದಿರುಗಿಸಲು ಕರ್ನಾಟಕ ಬ್ಯಾಂಕ್ ಒಪ್ಪಿಗೆ : ಪ್ರತಿಭಟನೆ ಹಿಂಪಡೆದ ರೈತ ಸಂಘ
ಸುದ್ದಿಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗದ ಶರತ್ ಕುಮಾರ್, ಸಾಧಿಕ್, ಪುರಂದರ ಲೋಕಿಕೆರೆ, ಅಯ್ಯಣ್ಣ ಇನ್ನಿತರರು ಇದ್ದರು.