ಪ್ರಸ್ತುತ ಜಾನಪದಕ್ಕೆ ಪ್ರೋತ್ಸಾಹ ಇಲ್ಲವಾಗುತ್ತಿದ್ದು, ಸರ್ಕಾರ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಮನವಿ ಮಾಡಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ಶ್ರೀ ಮಲೆಮಹದೇಶ್ವರ ಜಾನಪದ, ಸುಗಮ ಸಂಗೀತ ಅಕಾಡೆಮಿ ತಂಡ(ಹೆಮ್ಮಿಗೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆ ಜನಪದ ಸಂಗೀತದ ತವರಾಗಿದ್ದು, ಜಾನಪದ ಜೀವನ ಶೈಲಿಯನ್ನು ಕಲಿಸುತ್ತದೆ. ಜಾನಪದ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಕಲೆಯಾಗಿದೆ ಎಂದು ಬಣ್ಣಿಸಿದರು.
ಬಸವೇಶ್ವರ ಆಗ್ರೋ ರೈಸ್ ಇಂಡಸ್ಟ್ರೀಸ್ ಮಾಲೀಕ ಎಸ್.ಸಿ.ಬಸವರಾಜು ಸಂಪಹಳ್ಳಿ ಮಾತನಾಡಿ, ಕೆಲ ಧಾರಾವಾಹಿಗಳು ಮನೆ ಮತ್ತು ಕುಟುಂಬದಲ್ಲಿನ ಜಗಳವನ್ನೇ ತೋರಿಸುತ್ತಿವೆ. ಇದರಿಂದ ಮನೆಗಳಲ್ಲಿ ಶಾಂತಿ ನೆಮ್ಮದಿ ಹಾಳು ಮಾಡುವ ಲಕ್ಷಣಗಳನ್ನೇ ಇದರಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.
ಭತ್ತದ ಪೈರು ನಾಟಿ ಮಾಡುವಾಗ, ರಾಗಿ ಬೀಸುವಾಗ, ಸೋಬಾನೆ ಪದಗಳನ್ನು ಜಾನಪದ ಶೈಲಿಯಲ್ಲಿ ಹಾಡುವ ಮೂಲಕ ಬಾಯಿಂದ ಬಾಯಿಗೆ ಬಂದು ಗ್ರಾಮೀಣ ಭಾಗಗಳಲ್ಲಿ ಜಾನಪದ ಹುಟ್ಟಿಕೊಂಡಿತು. ಇದರಲ್ಲಿ ಅನಕ್ಷರಸ್ಥರು ಹೆಚ್ಚಾಗಿ ಜನಪದ ಹಾಡುಗಳನ್ನು ಹಾಡುವುದು ಸಾಮಾನ್ಯವಾಗಿದೆ ಎಂದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ್ ಮಾತನಾಡಿ, ಜಾನಪದ ಹಾಡುಗಳು ನಶಿಸುತ್ತಿವೆ. ಅವುಗಳನ್ನು ಶಾಲಾ ಮತ್ತು ಕಾಲೇಜು ಹಂತದಲ್ಲಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ಇದು ನಮ್ಮ ನಾಡಿನ ಸಂಸ್ಕೃತಿಯು ಹೌದು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಜೀತಕ್ಕಿದ್ದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿದ ಜಿಲ್ಲಾಡಳಿತ
ಸಂಗೀತೋತ್ಸವದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಜಾನಪದ ಹಾಡು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರ ಒಕ್ಕೂಟದ ಮೈಸೂರು ವಿಭಾಗ ಅಧ್ಯಕ್ಷ ಆರ್.ಕೆ.ಸ್ವಾಮಿ, ಶ್ರೀ ಮಲೆಮಹದೇಶ್ವರ ಜಾನಪದ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷೆ ದೇವೀರಮ್ಮ, ಕಾರ್ಯದರ್ಶಿ ಎಚ್.ಎಂ.ಮಹದೇವು, ಸೂನಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.