ಈ ದಿನ ಸಂಪಾದಕೀಯ | ವಿಚಾರಣಾ ನ್ಯಾಯಾಲಯಗಳ ನಿರ್ಲಕ್ಷ್ಯವನ್ನು ಬಯಲುಗೊಳಿಸಿದ ಸಿಸೋಡಿಯಾ ಪ್ರಕರಣ

Date:

Advertisements

ವಿಚಾರಣಾ ನ್ಯಾಯಾಧೀಶರು ಅಪರಾಧದ ಪ್ರಮುಖ ವಿಷಯಗಳ ಬಗ್ಗೆ ಅನುಮಾನ ಹೊಂದಿದ್ದಾಗ ಜಾಮೀನು ನೀಡದೆ ಸುರಕ್ಷಿತವಾಗಿ ಕೆಲಸ ಮಾಡಲು ಬಯಸುತ್ತಾರೆ. ಆದರೆ, ಅವರು ಪ್ರತಿ ಪ್ರಕರಣದ ಸೂಕ್ಷ್ಮತೆಗಳನ್ನು ಅರಿಯಲು ದೃಢವಾದ ಸಾಮಾನ್ಯ ಜ್ಞಾನವನ್ನು ಬಳಸಬೇಕು. ಬಹುತೇಕ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಬರಬಾರದಿತ್ತು. ನಾವು ಜಾಮೀನು ಕೊಡಲು ಆದ್ಯತೆ ನೀಡುತ್ತಿದ್ದೇವೆ. ಇದರ ಉದ್ದೇಶ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಆರಂಭಿಕ ಹಂತದಲ್ಲಿರುವವರು ಹಿಂಜರಿಕೆ ಇಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಸಂದೇಶ ನೀಡುವುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಇತ್ತೀಚೆಗೆ ಹೇಳಿದ್ದರು.

ಚಂದ್ರಚೂಡ್ ಅವರ ಹೇಳಿಕೆಯಲ್ಲಿ ವಿಚಾರಣಾ ನ್ಯಾಯಾಲಯಗಳ ಮೇಲಿನ ಅಸಮಾಧಾನ ಎದ್ದುಕಾಣುತ್ತದೆ. ಇದರಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್‌ ವರ್ತಿಸಿದ ಪಲಾಯನವಾದ ಕುರಿತ ವಿಮರ್ಶೆಯೂ ಇತ್ತೆಂದರೆ ತಪ್ಪಾಗಲಾರದು.

ಯಾವುದೇ ಪ್ರಕರಣಗಳಲ್ಲಿ ಆರೋಪಿ ಎಂದು ಬಂಧನಕ್ಕೊಳಗಾದವರು, ಅಪರಾಧಿ ಎಂದು ಸಾಬೀತಾಗುವ ಮೊದಲೇ ಅವರು ದೀರ್ಘಾವಧಿಯ ಜೈಲು ಶಿಕ್ಷೆಗೆ ಗುರಿಯಾಗಬಾರದು. ಅದರಲ್ಲೂ, ಸರಿಯಾದ ವಿಚಾರಣೆ ಇಲ್ಲದಿದ್ದಾಗ, ವಿಚಾರಣೆ ವಿಳಂಬವಾಗುತ್ತಿದ್ದಾಗ ಆರೋಪಿಗಳಿಗೆ ಜೈಲು ಶಿಕ್ಷೆ ಹೆಚ್ಚು ದಿನ ಮುಂದುವರಿಯಬಾರದು. ತನಿಖೆ ನಡೆಯದೆ, ವಿಚಾರಣೆ ತ್ವರಿತವಾಗಿ ನಡೆಯದೆ, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸೆರೆವಾಸದಲ್ಲಿಡುವುದು ಅಪರಾಧ ನ್ಯಾಯಶಾಸ್ತ್ರದ ಉಲ್ಲಂಘನೆಯಾಗುತ್ತದೆ.

Advertisements

ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು 17 ತಿಂಗಳ ನಿರಂತರ ಸೆರೆವಾಸದ ಬಳಿಕ ಜಾಮೀನು ಪಡೆದಿದ್ದಾರೆ. ದೆಹಲಿ ಅಬಕಾರಿ ನೀತಿ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2002ರ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು. ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ. ಒಂದೂವರೆ ವರ್ಷದ ಬಳಿಕ ಅವರು ಬಂಧಮುಕ್ತರಾಗಿದ್ದಾರೆ.

ಜಾಮೀನು ನೀಡುವ ಸಮಯದಲ್ಲಿ ಸುಪ್ರೀಂ ಪೀಠವು ವಿಚಾರಣಾ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್‌ನ ಧೋರಣೆಗೆ ಚಾಟಿ ಬೀಸಲು ಪ್ರಯತ್ನಿಸಿತು. ಸಿಸೋಡಿಯಾ ಬಂಧನವಾಗಿ ಒಂದೂವರೆ ವರ್ಷ ಕಳೆದರೂ, ಪ್ರಕರಣದ ವಿಚಾರಣೆ ಇನ್ನೂ ಆರಂಭವೇ ಆಗಿಲ್ಲ. ಜಾರಿ ನಿರ್ದೇಶನಾಲಯವು ಹಾರಿಕೆ ಕಾರಣ ನೀಡುತ್ತಲೇ ಸಿಸೋಡಿಯಾ ಅವರಿಗೆ 17 ತಿಂಗಳು ಜಾಮೀನು ಸಿಗದಂತೆ ಮಾಡಿತು. ಅಷ್ಟೇ ಅಲ್ಲ, ಯಾವುದೋ ಒತ್ತಡಕ್ಕೆ ಮಣಿದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಿಸೋಡಿಯಾ ಅವರಿಗೆ ನ್ಯಾಯಾಲಯಗಳು ಜಾಮೀನು ನೀಡುವಲ್ಲಿ ಹಿಂದೆ ಸರಿದವು. ಜಾಮೀನಿಗಾಗಿ ಪ್ರಕರಣವು ವಿಚಾರಣಾ ನ್ಯಾಯಾಲಯದಿಂದ ಹೈಕೋರ್ಟ್‌ಗೆ ಮತ್ತು ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಎರಡು ಬಾರಿ ವರ್ಗಾವಣೆಯಾಯಿತು. ಇದನ್ನು, ‘ಹಾವು-ಏಣಿ ಆಟಕ್ಕೆ ಸಮನಾಗಿದೆ’ ಎಂದು ಜಾಮೀನು ನೀಡುವ ವೇಳೆ ನ್ಯಾಯಾಧೀಶರು ತರ್ಕಿಸಿದರು.

ಈ ತರ್ಕ ಸಿಸೋಡಿಯಾ ಅವರ ಪ್ರಕರಣಕ್ಕೆ ಮಾತ್ರ ಸೀಮಿತವೇ? ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳ ಸುರಕ್ಷಿತವಾಗಿ ಜಾರಿಕೊಳ್ಳುವ ಧೋರಣೆ ಈ ಪ್ರಕರಣಕ್ಕೆ ಮಾತ್ರ ಸೀಮಿತವೇ? ಖಂಡಿತಾ ಇಲ್ಲ. ಏಕೆಂದರೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2022ರ ಡಿಸೆಂಬರ್‌ 31ರಂದು ಪ್ರಕಟಿಸಿದ ಮಾಹಿತಿಯ ಪ್ರಕಾರ, ದೇಶಾದ್ಯಂತ ಒಟ್ಟು 4,34,302 ವಿಚಾರಣಾಧೀನ ಕೈದಿಗಳು ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರೆಲ್ಲರೂ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಹಕ್ಕಿನಿಂದ ಸಿಸೋಡಿಯಾ ಅವರು ವಂಚಿತರಾಗಿದ್ದಾರೆ ಎಂದ ಸುಪ್ರೀಂ ಪೀಠವು ಗಮನ ಸೆಳೆದಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭರ್ಜಿಯ ಕೊನೆಗೆ ಪ್ರೀತಿಯ ಮುಳ್ಳು ಚುಚ್ಚಿದ ತಾಯಂದಿರು – ಆಲಿಸಲಿ ‘ಮಕ್ಕಳು’

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಿಸೋಡಿಯಾ ಕೇಂದ್ರದ ಕೆಂಗಣ್ಣಿನಲ್ಲಿದ್ದಾರೆ. ಈಗ ಸಿಸೋಡಿಯಾ ಜಾಮೀನು ಪಡೆದು ಹೊರಬಂದಿದ್ದರೂ, ಕೇಜ್ರಿವಾಲ್ ಜೈಲಿನಲ್ಲೇ ಇದ್ದಾರೆ. ವಿವಾದಿತ ಅಬಕಾರಿ ನೀತಿ ರಚನೆಯಲ್ಲಿ ಅವರಿಬ್ಬರ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಈ ಆರೋಪ ಮತ್ತು ಬಂಧನವು ದೆಹಲಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಟ್ಟಿದೆ.

ವಿಚಾರಣೆಯಿಲ್ಲದೆ ಆರೋಪಿಯನ್ನು, ಅದರಲ್ಲೂ ಜನಪ್ರತಿನಿಧಿಯನ್ನು ದೀರ್ಘಕಾಲ ಜೈಲಿನಲ್ಲಿಡುವುದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಹಕ್ಕುಗಳ ಉಲ್ಲಂಘನೆಯಾಗಿದೆ. ಭಾರತದ ಕೇಂದ್ರ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿರುವಾಗ, ತನಿಖಾ ಸಂಸ್ಥೆಗಳ ಅಧಿಕಾರಿಗಳು ಮೋದಿ-ಶಾ ಕೈಗೊಂಬೆಗಳಂತೆ ವರ್ತಿಸುತ್ತಿರುವಾಗ, ನ್ಯಾಯಾಂಗವು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ.

ಆದರೆ, ವಿಚಾರಣಾ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರು ತಮ್ಮ ವಿವೇಚನೆಯನ್ನು ಬಳಸದೆ, ಪ್ರಕರಣಗಳ ಗಂಭೀರತೆ ಮತ್ತು ಅದರ ತನಿಖಾ ಪ್ರಕ್ರಿಯೆಯನ್ನು ಅವಲೋಕಿಸದೆ, ಕರ್ತವ್ಯದಿಂದ ಜಾರಿಕೊಳ್ಳುವುದು ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಅನೂರ್ಜಿತಗೊಳಿಸುತ್ತದೆ. ನ್ಯಾಯಾಂಗದ ಮೇಲಿನ ಅಪನಂಬಿಕೆಯನ್ನು ಹೆಚ್ಚಿಸುತ್ತದೆ. ಸಿಜೆಐ ಚಂದ್ರಚೂಡ್ ಅವರು ಹೇಳಿದಂತೆ, ನ್ಯಾಯಾಧೀಶರು ಪ್ರತಿ ಪ್ರಕರಣದ ಸೂಕ್ಷ್ಮತೆಗಳನ್ನು ಅರಿಯಲು ದೃಢವಾದ ಸಾಮಾನ್ಯ ಜ್ಞಾನವನ್ನು ಬಳಸಬೇಕು. ಜನರಿಗೆ ತ್ವರಿತ ನ್ಯಾಯವನ್ನು ಒದಗಿಸಬೇಕು. ನ್ಯಾಯಾಂಗವು ರಾಜಕೀಯ ಪ್ರಭಾವದಿಂದ ದೂರವಿದೆ ಎಂಬುದನ್ನು ಸಾಬೀತುಪಡಿಸಬೇಕು. ಇದು ಎಲ್ಲ ನ್ಯಾಯಾಲಯಗಳ ಜವಾಬ್ದಾರಿಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X