ಮಾನವರೆಲ್ಲರೂ ಮೂಲದಲ್ಲಿ ಬುಡಕಟ್ಟು ಜನಾಂಗದವರು. ವಿಶಿಷ್ಟ ಸಂಸ್ಕೃತಿಯ ಮೂಲಕ ಭಾರತ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕು ನಡೆಸುವ ಜನಾಂಗ ಬುಡಕಟ್ಟು ಜನಾಂಗವಾಗಿದೆ ಎಂದು ಸಾಹಿತಿ ಮೋಹನ್ ಕಟ್ಟಿಮನಿ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದ ಸಂಗಮೇಶ್ವರ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಮತ್ತು ತಾಲೂಕು ಘಟಕದಿಂದ ಏರ್ಪಡಿಸಿದ್ದ ‘ವಿಶ್ವ ಬುಡಕಟ್ಟು’ ದಿನಾಚರಣೆಯಲ್ಲಿ ಬುಡಕಟ್ಟು ಕಲಾವಿದರ ಸ್ಥಿತಿ-ಗತಿ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
“ಬುಡಕಟ್ಟು ಜನರ ಬದುಕು ಸುಧಾರಣೆಯಾಗಬೇಕು. ಬುಡಕಟ್ಟು ಕಲಾವಿದರು ಸಂಕಷ್ಟದಲ್ಲಿದ್ದಾರೆ” ಎಂದು ಹೇಳಿದರು.
ಪ್ರಾಚಾರ್ಯ ಎ ಡಿ ಚೌಹಾಣ್ ಮಾತನಾಡಿ, “ಬುಡಕಟ್ಟು ಜನಾಂಗ ಉಡುಗೆ, ತೊಡುಗೆ, ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳಲ್ಲಿ ವಿಶಿಷ್ಟತೆ ಉಳಿಸಿಕೊಂಡು ಬಂದಿದೆ. ಲಿಪಿ ಇಲ್ಲದ ಭಾಷೆಯನ್ನು ಉಳಿಸಿ ಬೆಳೆಸುತ್ತಾ ಕಷ್ಟದಲ್ಲಿ ಬದುಕುತ್ತಿದ್ದಾರೆ.
ಸರ್ಕಾರ ಬುಡಕಟ್ಟು ಜನಾಂಗದವರಿಗೆ ವಿಶೇಷ ಸವಲತ್ತು ನೀಡಬೇಕು” ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕಾಧ್ಯಕ್ಷ ಬಾಳನ ಗೌಡ ಪಾಟೀಲ ಮಾತನಾಡಿ, “ಬುಡಕಟ್ಟು ಜನಾಂಗದ ಜಾನಪದ ಕಲಾವಿದರ ಕುರಿತು ಸಂಶೋಧನೆ ನಡೆಸಬೇಕು. ಬುಡಕಟ್ಟು ಕಲಾವಿದರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಲಾವಿದರ ಅಂಕಿ ಸಂಖ್ಯೆ ಕುರಿತು ನಮ್ಮ ಪರಿಷತ್ ಸಮೀಕ್ಷೆ ನಡೆಸಲು ಮುಂದಾಗಿದೆ. ಬುಡಕಟ್ಟು ಕಲಾವಿದರಿಗೆ ನಾವು ಕಲಾವಿದರ ಗುರುತಿನ ಪತ್ರ ನೀಡುತ್ತಿದ್ದೇವೆ” ಎಂದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಸಾಲಳ್ಳಿ, ಕನ್ನಡ ಜಾನಪದ ಪರಿಷತ್ತು ಕೊಲ್ಹಾರ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಣಿ ಮಾತನಾಡಿದರು.
ಬುಡಕಟ್ಟು(ಲಂಬಾಣಿ) ಕಲಾವಿದರಾದ ವಾಲುಬಾಯಿ ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಲಂಬಾಣಿ ಪದ, ರಿವಾಯತ್ ಪದ, ಹಂತಿ ಪದ ಪ್ರದರ್ಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ ಗೇಟನ್ನು ತಕ್ಷಣವೇ ದುರಸ್ಥಿ ಮಾಡಲು ರೈತ ಸಂಘ ಮನವಿ
ಹೇಮಾ-ವೇಮ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ್ ಗಣಿ, ಪರಿಷತ್ ಕೊಡುಗೆ ವಲಯ ಅಧ್ಯಕ್ಷ ದುಂಡಯ್ಯ ಮಠಪತಿ ಹಾಗೂ ಪರಿಷತ್ ಪದಾಧಿಕಾರಿಗಳಾದ ಮೌಲಾಸಾಹೇಬ್ ಜಾಹಿರ್ದಾರ್, ಭೀಮಸಿ ಬೀಳಗಿ, ಕಲಾವಿದರಾದ ಶ್ರೀಶೈಲ್ ಬಾಟಿ, ಪವಡೆಪ್ಪ ಗೋಳಸಂಗಿ, ಅಜಿಜ ಸಾಬ ಜಹಗಿರ್ದಾರ, ಮಂಜುನಾಥ ಯಂದಗೇರಿ, ಮಂಜುನಾಥ ಮಟ್ಯಾಳ, ವಿಜಯಲಕ್ಷ್ಮಿ ಡಂಬಳ ಇದ್ದರು.