ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್‌ಗೇಟ್ ಮುರಿದಿರುವುದು ಸರ್ಕಾರಕ್ಕೊಂದು ಅಪಶಕುನದ ಮುನ್ಸೂಚನೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅನ್ನುವುದಕ್ಕೆ ತುಂಗಭದ್ರಾ ಡ್ಯಾಮ್‌ನ ಗೇಟ್ 19 ಮುರಿದಿರುವುದೇ ಸಾಕ್ಷಿ. ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪೂರ್ಣಾವಧಿ ನೀರಾವರಿ ಸಚಿವರನ್ನ ನೇಮಕ ಮಾಡಬೇಕಿತ್ತು. ಈಗಿರುವವರು ಪಾರ್ಟ್ ಟೈಂ ನೀರಾವರಿ ಮಂತ್ರಿ ಇದ್ದಾರೆ. ಅವರು ಆಡಳಿತಕ್ಕಿಂತ ಹೆಚ್ಚು ರಾಜಕಾರಣಕ್ಕೆ ಒತ್ತು ಕೊಡುವಂತಹ ಸ್ಥಿತಿಯಲ್ಲಿದ್ದಾರೆ” ಎಂದು ಪರೋಕ್ಷವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
“ಪಕ್ಷದ ಅಧ್ಯಕ್ಷರಾಗಿ, ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡಯುತ್ತದೋ ಅಲ್ಲಿ ಹೆಚ್ಚು ಒತ್ತು ಕೊಡಬೇಕಾಗಿದೆ. ಹೀಗಾಗಿ ನೀರಾವರಿ ಇಲಾಖೆ ಅನಾಥವಾಗಿದೆ. ಈಗಲಾದರೂ ಸಿಎಂ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡು ನೀರಾವರಿ ಇಲಾಖೆಗೆ ಪೂರ್ಣಾವಧಿ ಮಂತ್ರಿಯನ್ನು ನೇಮಕ ಮಾಡಬೇಕು ಎಂಬುದು ನನ್ನ ಒತ್ತಾಯವಾಗಿದೆ” ಎಂದು ಕಾರಜೋಳ ತಿಳಿಸಿದರು.
“ಮೂರು ರಾಜ್ಯಗಳ ಸುಮಾರು 15 ಲಕ್ಷ ಎಕರೆಗೆ ಆಗುವಂತಹ ನೀರು ವ್ಯರ್ಥವಾಗಿ ಆಂಧ್ರ ಪ್ರದೇಶ, ತೆಲಂಗಾಣದ ನದಿಯ ಪಾಲಾಗುತ್ತಿದೆ. ನಮ್ಮ ರೈತರು ಕಣ್ಣೀರು ಹಾಕುವಂತಹ ಪರಿಸ್ಥಿತಿ ಬಂದಿದೆ. ಸರಿಯಾಗಿ ನಿಭಾಯಿಸದೇ ಇರುವುದೇ ಗೇಟ್ ಮುರಿಯುವುದಕ್ಕೆ ಮೂಲ ಕಾರಣ. ಡ್ಯಾಂ ಸೇಫ್ಟಿ ಕಮಿಟಿ ವರದಿ ನೋಡಿದರೆ, ನೀರಾವರಿ ಇಲಾಖೆ ಅಧಿಕಾರಿಗಳು ಶೇ.100ರಷ್ಟು 33 ಗೇಟ್‌ಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ರೈತರ ಜೀವನಾಡಿ ತುಂಗಭದ್ರಾ ಅಣೆಕಟ್ಟೆ ಬಗ್ಗೆ ಗೊತ್ತಿರಬೇಕಾದ ಕುತೂಹಲಕಾರಿ ಸಂಗತಿಗಳು
ಸ್ಥಳಕ್ಕೆ ಭೇಟಿ ಮಾಡಬೇಕು, ಪರಿಶೀಲನೆ ಮಾಡಬೇಕು, ಸರ್ಟಿಫೈಡ್ ಮಾಡಬೇಕು. ಅದ್ಯಾವುದೂ ಮಾಡದೇ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ.ರಾಜ್ಯದಲ್ಲಿ ಜನರಿಗೆ ನ್ಯಾಯ ಸಿಗ್ತಿಲ್ಲಾ,ಕಣ್ಣೀರು ಸುರಿಸುವಂತಾ ಪರಿಸ್ಥಿತಿ ಬಂದಿದೆ.ಜನರ ಕಣ್ಣೀರಿನ ಶಾಪ ಸಿದ್ದರಾಮಯ್ಯರ ಸರ್ಕಾರಕ್ಕೆ ತಟ್ಟಲಿದೆ. ಕಣ್ಣೀರಿನಲ್ಲೇ ಸಿದ್ದರಾಮಯ್ಯ ಸರ್ಕಾರ ಕೊಚ್ಚಿಹೋಗೋ ಕಾಲ ಬಂದಿದೆ ಎಂದರು.

ಇಂಥವರು ನಮ್ಮ ಸಂಸದರು,, ಓಟು ಹಾಕಿ ಆರಿಸಿದವರ ಮಾನ ಮರ್ಯಾದೆ ಹರಾಜು ಮಾಡುವನು,,, ಕ್ರೆಸ್ಟ್ ಗೇಟು ಮುರಿದು ನೀರು ಪೋಲ ಆಗಿ ಬಳಕೆದಾರರಿಗೆ ತೊಂದರೆ ಆಗಬಹುದು ಆತಂಕ ವ್ಯಕ್ತಪಡಿಸುದು ಜವಾಬ್ದಾರಿ ಲಕ್ಷಣ,,ಅದರಲ್ಲೂ ರಾಜಕೀಯ ಹೆಸಿಗೆ ಹಿಸುಕುವುದು ತಾವೆಷ್ಟು ಕೀಳು ಮಟ್ಟದಲ್ಲಿ ಇದ್ದೆನೆಂದು ಬೆತ್ತಲಾಗಿದ್ದಾನೆ