2017ರ ವೃಂದ ಮತ್ತು ನೇಮಕಾತಿ ನಿಯಮಗಳು ಅದಕ್ಕಿಂತಲೂ ಮುಂಚೆ ನೇಮಕಾತಿಗೊಂಡಿರುವ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಕಾರ್ಯಾದೇಶ ಹೊರಡಿಸಿದೆ. ಅಲ್ಲದೆ ಮೂಲತಃ 1 ರಿಂದ 7 ಹಾಗೂ 8 ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಅಂತ ಪದನಾಮ ಮಾಡಿ 1 ರಿಂದ 5ಕ್ಕೆ ಹಿಂಬಡ್ತಿ ನೀಡಿದೆ. ಸರ್ಕಾರದ ಈ ಆದೇಶದಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 48 ಸಾವಿರ ಶಾಲೆಗಳ ಶಿಕ್ಷಕರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಶಿಕ್ಷಕರು ನಿರ್ಧಾರ ಮಾಡಿದ್ದಾರೆ. ಶಿಕ್ಷಕರು ಅನೇಕ ಬಾರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಮೊರೆ ಹೋಗಿದ್ದರು. ಸಚಿವರ ಭೇಟಿಯಿಂದಲೂ ನಿರಾಸೆ ಉಂಟಾಗಿದ್ದರಿಂದ ಇದೀಗ ಬೀದಿಗಿಳಿಯಲು ನಿರ್ಧರಿಸಿದ್ದೇವೆ ಎಂದು ಹೋರಾಟ ನಿರತ ಶಿಕ್ಷಕರು ಹೇಳಿದರು.
ಪ್ರಮುಖ ಬೇಡಿಕೆಗಳು : 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಶಿಕ್ಷಕರನ್ನು ಎನ್‌ಸಿಟಿ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು. ಈ ಮೊದಲಿದ್ದ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016ರ ಮುಂಚೆ ನೇಮಕಾತಿ ಹೊಂದಿದ ಹಾಗೂ ಬಿ.ಇಡಿ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಬಡ್ತಿಗೆ ಪರಿಗಣಿಸಬೇಕು. ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೆ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿದೆ.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮ ಮೊಗವೀರ, ಕೋಶಾಧಿಕಾರಿ ಶ್ರೀನಾಥ ಜಿ.ಪೂಜಾರಿ ಗೌರವಾಧ್ಯಕ್ಷೆ ಸುಜಾತ ಶೆಟ್ಟಿ, ಉಪಾಧ್ಯಕ್ಷೆ ಶಶಿಧರ ಶೆಟ್ಟಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಉಪಸ್ಥಿತರಿದ್ದರು.