ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ (ಡಬ್ಲೂ) ಗ್ರಾಮದ ದಲಿತ ಕುಟುಂಬದ ಕಾರ್ಮಿಕನ ಮಗ ಸ್ನಾತಕೋತ್ತರ ಪದವಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎರಡು ಚಿನ್ನದ ಪದಕ ಪಡೆದಿದ್ದಾರೆ.
ಚಿತ್ರಶೇನ್ ವೈಜಿನಾಥ ಫುಲೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 42ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೇಹಲೋತ್ ಅವರು ಪದವಿ ಪ್ರಧಾನ ಮಾಡಿದ್ದಾರೆ. ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡ ಚಿತ್ರಶೇನ್ ಫುಲೆ ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
ʼಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ಸ್ನಾತಕೋತ್ತರ ಪದವಿಯಲ್ಲಿ ನನ್ನ ಓದಿನ ಸಾಮರ್ಥ್ಯದಿಂದ ಅತೀ ಹೆಚ್ಚು ಅಂಕ ಗಳಿಸಿದ ನನಗೆ ಎರಡು ಚಿನ್ನದ ಪದಕ ಬಂದಿದೆ. ಇದಕ್ಕೆ ಮೂಲ ಕಾರಣವೇ ನನ್ನ ಕುಟುಂಬಸ್ಥರು. ಅದರಲ್ಲೂ ನನ್ನ ತಂದೆ, ಗುರುಗಳು ಹಾಗೂ ಸ್ನೇಹಿತರ ಪ್ರೋತ್ಸಾಹ ನನ್ನ ಯಶಸ್ಸಿನ ಪಯಣಕ್ಕೆ ಕಾರಣೀಕರ್ತರಾಗಿದ್ದಾರೆʼ ಎಂದು ಸಂತಸ ಹಂಚಿಕೊಂಡಿದ್ದಾರೆ.