- ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುತ್ತೇವೆ
- ಕಲಬುರಗಿ ಭಾಗಕ್ಕೆ ₹5000 ಕೋಟಿ ಅನುದಾನ ನೀಡುತ್ತೇವೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಮ ಪಂಚಾಯತಿಗೆ ₹1 ಕೋಟಿ ಅನುದಾನ ಕೊಟ್ಟು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಜೇರ್ವಗಿ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಪ್ರತಿ ವರ್ಷ ನಮ್ಮ ಸರ್ಕಾರದಿಂದ ಈ ಭಾಗಕ್ಕೆ ₹5000 ಕೋಟಿ ಅನುದಾನವನ್ನು ನೀಡುತ್ತೇವೆ” ಎಂದರು.
“ಈ ಭಾಗದ ಜನರಿಗೆ ಸಿಗಬೇಕಿದ್ದ ಸುಮಾರು 50,000 ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 50,000 ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ವಿಶೇಷವಾಗಿ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುತ್ತೇವೆ. ಈ ಭಾಗದಲ್ಲಿ ಐಐಟಿ ಮತ್ತು ಐಐಎಂಗಳ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳನ್ನು ನಾವು ತರುತ್ತೇವೆ” ಎಂದು ಆಶ್ವಾಸನೆ ಕೊಟ್ಟರು.
“ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ. ಇದು ಜನಾಭಿಪ್ರಾಯದ ಮೂಲಕ ಬಂದ ಸರ್ಕಾರವಲ್ಲ. ನಮ್ಮ ಕಾಂಗ್ರೆಸ್ ಶಾಸಕರನ್ನು ವಾಮಮಾರ್ಗದ ಮೂಲಕ ಖರೀದೀಸಿ ಬಿಜೆಪಿ ಸರ್ಕಾರ ರಚಿಸಿದೆ” ಎಂದು ವಾಗ್ದಾಳಿ ನಡೆಸಿರು.
“ಪ್ರತಿಯೊಂದು ಕೆಲಸದಲ್ಲೂ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರ ಮಾಡಿದೆ. ಇದೇ ಕಾರಣಕ್ಕೆ ಇಡೀ ದೇಶದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಹೆಸರು ಬಂದಿದೆ. ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಇದೊಂದು 40% ಕಮಿಷನ್ ಸರ್ಕಾರ ಅಂತ ನೇರವಾಗಿ ಆರೋಪಿಸಿದ್ದಾರೆ. ಆದರೆ ಪ್ರಧಾನಿ ಅವರು ಮಾತ್ರ ಈ ಪತ್ರಕ್ಕೆ ಇದುವರೆಗೂ ಉತ್ತರಿಸಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ನಿಶ್ಚಿತ” ಎಂದರು.
“ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಯಾವ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಅವರಿಗೆ 40 ಸಂಖ್ಯೆ ಎಂಬುದು ಬಹಳ ಇಷ್ಟವಾದ ಮತ್ತು ಪ್ರೀತಿಯ ಸಂಖ್ಯೆ. ರಾಜ್ಯದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡುತ್ತಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ 150 ಸೀಟು ಖಂಡಿತವಾಗಿಯೂ ಕರ್ನಾಟಕದ ಜನತೆ ನೀಡುತ್ತಾರೆ” ಭರವಸೆ ವ್ಯಕ್ತಪಡಿಸಿದರು.
“ಧಾರಾಕಾರ ಮಳೆ ಸುರಿಯುತ್ತಿದ್ದರೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹಳ್ಳಿಯಿಂದ ಬಂದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ ರಾಹುಲ್ ಗಾಂಧಿ ಮಳೆಯಲ್ಲೇ ತೋಯಿಸಿಕೊಂಡು ಭಾಷಣ ಮಾಡಿದರು.