ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಕಲ್ಪಿಸಿಕೊಡಬೇಕು ಮತ್ತು ವಾರ್ಡ್‌ಗಳ ಚರಂಡಿಗಳ ಸ್ವಚ್ಛತೆ ಮಾಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾರ್ಯಾಧ್ಯಕ್ಷ ಬಸವರಾಜ ಇಂಗಳಗಿ ಮಾತನಾಡಿ, “ಜೇವರ್ಗಿ ಪಟ್ಟಣದ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಆಗುತ್ತಿರುವ ನೀರು ಬಹಳ ಕಲುಷಿತವಾಗಿದ್ದು, ಅದೇ ನೀರನ್ನು ಸಾರ್ವಜನಿಕರು ಕುಡಿಯುತ್ತಿರುವುದರಿಂದ ಬಹಳಷ್ಟು ಜನರಿಗೆ ವಾಂತಿ ಬೇಧಿ ಮತ್ತು ಹಲವಾರು ರೋಗ ರುಜಿನುಗಳಿಗೆ ತುತ್ತಾಗುತ್ತಿದ್ದಾರೆ” ಎಂದರು.
“ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸರ್ಕಾರದ ಅನುದಾನವಿದ್ದು, ಅದರ ಅಡಿಯಲ್ಲಿ ಸಾರ್ವಜನಿಕರಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಮಾಡಬೇಕು. ತಮ್ಮ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಂತಹ ಮುಖ್ಯವಾಗಿ ಸಫಾಯಿ ಕರ್ಮಚಾರಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅವರಿಗೆ ಇಲಾಖೆಯಿಂದ ಸಿಗುವಂತಹ ಆರೋಗ್ಯ ಕವಚಗಳಂತಹ ಸಾಮಗ್ರಿಗಳನ್ನು ಕೊಡಬೇಕು. ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು” ಎಂದು ಒತ್ತಾಯಿಸಿದರು.
“ಸರ್ಕಾರದಿಂದ ಒದಗಿಸುವ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ವಿಶೇಷ ಮನವಿ ಏನೆಂದರೆ ಪಟ್ಟಣದ ಹೃದಯ ಭಾಗವಾಗಿರುವಂತಹ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿರುವಂತಹ ಸಂತೆ(ಮಾರ್ಕೆಟ್)ಯಲ್ಲಿ ಎಲ್ಲ ವ್ಯಾಪಾರಸ್ಥರು ಸಿಕ್ಕಾಪಟ್ಟೆ ರೋಡಿನ ಮೇಲೆಯ ವೈವಾಟು ಮಾಡುತ್ತಿದ್ದು, ಜೇವರ್ಗಿ ತಾಲೂಕಿನ ವಿವಿಧ ಹಳ್ಳಿಗಳಿಂದ ಕಾರ್ಯ ಚಟುವಟಿಕೆಗಳಿಗಾಗಿ ನಿತ್ಯ ಬರುವಂತಹ ಸಾರ್ವಜನಿಕರಿಗೆ ರಸ್ತೆಯ ಮೂಲಕ ಸಂಚರಿಸಲು ತೊಂದರೆಯಾಗುತ್ತಿದೆ” ಎಂದರು.
“ಹಳ್ಳಿಗಳಿಂದ ಸಂತೆಗೆ ಬರುವಂತಹ ರೈತ ಮಹಿಳೆಯರ ಹಣ ಮತ್ತು ಒಡವೆಗಳು ಕಳ್ಳತನವಾಗುತ್ತಿದ್ದು, ಕಳ್ಳರ ಹಾವಳಿ ಹೆಚ್ಚಾಗಿದೆ. ಹಾಗಾಗಿ ಪ್ರತಿ ಮಂಗಳವಾರ ನಡೆಯುವಂತಹ ಸಂತೆಯಲ್ಲಿ ಯಾರೂ ರೋಡಿನ ಮೇಲೆ ನಿಲ್ಲದ ಹಾಗೆ ಮತ್ತು ಸಾರ್ವಜನಿಕರಿಗೆ ಸುಗಮವಾಗಿ ತಿರುಗಾಡಲು ಅನುವು ಮಾಡಿಕೊಡಬೇಕು. ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಅಗದಂತೆ ನೋಡಿಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು” ಎಂದು ಅಗ್ರಹಿಸಿದರು.
“ಒಂದು ವೇಳೆ ಈ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ತಾಲೂಕು ಸಮಿತಿಯಿಂದ ಕಾರ್ಯಾಲಯದ ಎದುರು ಹೆದ್ದಾರಿ ತಡೆದು ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪಿಡಿಒ ನಿರ್ಲಕ್ಷ್ಯ: ಕಲುಷಿತ ನೀರು ಕುಡಿದು 41 ಜನ ಅಸ್ವಸ್ಥ
ಗೌರವಾಧ್ಯಕ್ಷ ಸಿದ್ದು ಎ ಮುದಬಾಳ(ಬಿ), ಉಪಾಧ್ಯಕ್ಷ ಕೃಷ್ಣ ಎಸ್ ಗುಡೂರ, ತಾ.ಅಧ್ಯಕ್ಷ ಸುಭಾಷ್ ಎಸ್. ಆಲೂರು, ಉಪಾಧ್ಯಕ್ಷ ಮರೆಪ್ಪ ಆಂದೋಲ, ಕಾರ್ಯಾಧ್ಯಕ್ಷ ಬಸವರಾಜ ಇಂಗಳಗಿ, ಸಂ. ಕಾರ್ಯದರ್ಶಿ ಬಾಬು ನಾಟೀಕಾರ, ಸಹ ಕಾರ್ಯದರ್ಶಿ ದವಲಪ್ಪ ಶರ್ಮಾ ಕೊಲ್ಲೂರ, ಖಜಾಂಚಿ ಶಿವು ಹೋತಿನಮಡು, ಕಾರ್ಯದರ್ಶಿ ಶರಣು ಕಟ್ಟಿಸಂಗಾವಿ ಸೇರಿದಂತೆ ಇತರರು ಇದ್ದರು.