ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಗೆ ಕಟ್ಟಲಾಗಿದ್ದ ಹಳೆಯ ಸೇತುವೆ ಆ. 6ರ ಮಧ್ಯರಾತ್ರಿಯ ವೇಳೆ ಮುರಿದು, ಆ ಸಂದರ್ಭದಲ್ಲಿ ಅದರ ಮೇಲೆ ಸಾಗುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿತ್ತು. ನದಿಗೆ ಬಿದ್ದಿರುವ ಲಾರಿ ಎತ್ತಲು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿ, ಮಾಲೀಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಲಾರಿಯ ಮಾಲೀಕ ಸೆಂಥಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದವರು. ಪೊಲೀಸರು ಹಾಗೂ ಪತ್ರಕರ್ತರ ಸಮಯಪ್ರಜ್ಞೆ ಮೆರೆದಿದ್ದರಿಂದ, ಆತ ನದಿಗೆ ಹಾರುವ ಮೊದಲೇ ರಕ್ಷಿಸಿದ್ದಾರೆ.
ಕಾರವಾರದ ಕಾಳಿ ಸೇತುವೆ ಮುರಿದು ಬಿದ್ದು ಸೇತುವೆ ಮೇಲೆ ಹುಬ್ಬಳ್ಳಿಗೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿ ಬಿದ್ದಿತ್ತು. ಮಾಹಿತಿ ತಿಳಿದ ಕೂಡಲೇ ಚಾಲಕನನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಲಾರಿಯನ್ನು ಇನ್ನೂ ಕೂಡ ನದಿಯಿಂದ ಮೇಲೆತ್ತಿಲ್ಲ.

ಈ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಲಾರಿಯ ಮಾಲೀಕ ಸೆಂಥಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಮುರಿದು ಬಿದ್ದಿರುವ ಕಾಳಿ ನದಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನ ನಡೆಸಿದ್ದಾನೆ.
ಲಾರಿ ಮಾಲೀಕ ತನ್ನ ಸಹಚರನೋರ್ವರೊಂದಿಗೆ ಮುರಿದುಬಿದ್ದ ಹಳೆ ಸೇತುವೆ ಕಡೆ ಓಡಿದ್ದಾನೆ. ಬೀಳುವ ಹಂತದಲ್ಲಿದ್ದ ಸೇತುವೆ ಮೇಲೆ ನಿಂತು ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆಸಿದ್ದಾನೆ. ಬಳಿಕ ಘಟನಾ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗರೂಕತೆ ವಹಿಸಿ ಮುರಿದ ಸೇತುವೆ ಮೇಲೆ ಕುಳಿತಿದ್ದ ಇಬ್ಬರನ್ನೂ ಕರೆ ತಂದಿದ್ದಾರೆ.
ಐ.ಆರ್.ಬಿ ಕಂಪನಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ಮುರಿದ ಸೇತುವೆ ಮೇಲೆಯೇ ಕುಳಿತು ಪ್ರತಿಭಟನೆ ಕೂಡ ಮಾಡಿದ್ದಾರೆ. ನಂತರ ಆತನನ್ನು ಪೊಲೀಸ್ ಸಿಬ್ಬಂದಿಗಳು ಮನವೊಲಿಸಿ ಸೇತುವೆ ಭಾಗದಿಂದ ಹೊರತಂದು ತಿಳಿ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಲಾರಿಯ ಮಾಲೀಕ ಸೆಂಥಿಲ್ ಕುಮಾರ್, “ಲಾರಿ ಬಿದ್ದು, ಏಳು ದಿನ ಕಳೆದಿದೆ. ಆದರೆ ಯಾರೂ ಕೂಡ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ವಾಹನವನ್ನು ಮೇಲೆತ್ತಲು ಇಲ್ಲಿನ ಅಧಿಕಾರಿಗಳು ಏನೂ ಕ್ರಮ ಕೈಗೊಂಡಿಲ್ಲ. ಒಂದು ಶಾಲಾ ವಾಹನವೋ ಅಥವಾ 50-60 ಜನರು ಪ್ರಯಾಣಿಸುತ್ತಿದ್ದ ವಾಹನ ಬಿದ್ದಿದ್ದರೆ ಇಷ್ಟೊತ್ತಿಗೆ ಏನಾಗುತ್ತಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನನ್ನ ಲಾರಿ ಅವಘಾತ ಸಂಭವಿಸಿ ಈ ಸೇತುವೆ ಬಿದ್ದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಸೇತುವೆ ಬಿದ್ದಿದೆ. ನನ್ನ ಪತ್ನಿಯ ತಾಳಿ ಅಡವಿಟ್ಟು ಈ ವಾಹನವನ್ನು ಖರೀದಿಸಿದ್ದೆ. ಜೀವನೋಪಾಯಕ್ಕಿದ್ದ ವಾಹನ ಸೇತುವೆ ಕುಸಿದು ಬಿದ್ದಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರಿ ಅಧಿಕಾರಿಗಳು ಏನೂ ಕ್ರಮ ತೆಗೆದುಕೊಂಡಿಲ್ಲ. ನನಗೆ ಪರಿಹಾರ ಬೇಕಿದೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ” ಎಂದು ಲಾರಿಯ ಮಾಲೀಕ ಸೆಂಥಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
