ಉದ್ಯೋಗ, ಸೂರು, ಅನ್ನ ನೀಡುವ ಭಾಷೆಯ ಬಗ್ಗೆ ಯಾರಿಗೆ ತಾನೆ ಅಭಿಮಾನವಿರುವುದಿಲ್ಲ. ಹಾಗಾಗಿ ಕನ್ನಡದ ಕಲಾವಿದರು, ಬರಹಗಾರರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬಿಲ್ ಜಾರಿಗೆ ಒಗ್ಗೂಡಲೇಬೇಕಾಗಿದೆ. ಜನಾಭಿಪ್ರಾಯವನ್ನು ಮೂಡಿಸಬೇಕಾಗಿದೆ.
ಖಾಸಗಿ ವಲಯದ ಕಂಪನಿ ಹಾಗೂ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬಿಲ್ ಅನ್ನು ಕರ್ನಾಟಕ ಸರ್ಕಾರ ಕಳೆದ ಜುಲೈ 2024 ರಂದು ಜಾರಿ ಮಾಡಿತು. ಇದಕ್ಕೆ ವ್ಯಾಪಕವಾಗಿ ಖಾಸಗಿ ವಲಯದ ಕಂಪನಿಗಳಿಂದ ಹಾಗೂ ಕಾರ್ಖಾನೆಗಳಿಂದ ವಿರೋಧ ವ್ಯಕ್ತವಾಯಿತು. ಈಗ ಸರ್ಕಾರ ಬಿಲ್ ಅನ್ನು ತಡೆ ಹಿಡಿದಿದ್ದು ಹೆಚ್ಚಿನ ತಯಾರಿ ನಡೆಸಿ ಮುಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮಂಡಿಸುವುದಾಗಿ ಭರವಸೆ ನೀಡಿದೆ.
ʼಉಳುವವನೇ ಭೂಮಿಯ ಒಡೆಯʼ ಜಾರಿಗೆ ಬಂದಾಗಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ದೇವರಾಜ ಅರಸು ಅವರು ಇದ್ಯಾವುದಕ್ಕೂ ಮಣಿಯದೇ ಕಾನೂನನ್ನು ಜಾರಿಗೆ ತಂದರು. ಸಿದ್ದರಾಮಯ್ಯ ಅವರಂತಹ ಸಮಾಜವಾದಿ ಆಲೋಚನೆಗಳಿರುವ ಮುಖ್ಯಮಂತ್ರಿಗೆ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಈ ಕ್ರಾಂತಿಕಾರಿ ಆಲೋಚನೆಗೆ ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಕನ್ನಡ ಜನರ ಮನದಾಳದಲ್ಲಿ ಅಜರಾಮರವಾಗಿ ಉಳಿಯುವ ಆ ಮೂಲಕ ಅವರ ಬದುಕು ಕಟ್ಟಿಕೊಡಲು ನೆರವಾಗುವ ಈ ಯೋಜನೆಯ ಮೂಲಕ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ಮೇಲೆ ಅಭಿಮಾನ ಮೂಡುವ ಮುಖ್ಯವಾದ ಕೆಲಸ ಮಾಡಿದಂತಾಗುತ್ತದೆ.
ದಿನೇ ದಿನೇ ಕನ್ನಡ ಭಾಷಾ ಅಭಿಮಾನ ಎಂಬುದು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಸರ್ಕಾರದ ಇಂಥ ನಡೆ ಕನ್ನಡದ ಬಗ್ಗೆ ಅಭಿಮಾನ ಮೂಡುವ ಹಾಗೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಅನ್ಯ ಭಾಷಿಕರ ಹಾವಳಿ ಒಂದು ಮಿತಿಗೂ ಮೀರಿ ಬೆಳೆದರೆ ಕನ್ನಡವೇ ಅಪಾಯಕ್ಕೆ ಸಿಲುಕುವ ಹಂತ ತಲುಪುತ್ತದೆ. ಸರ್ಕಾರ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗ ಖಾತ್ರಿಯನ್ನು ನೀಡುವ ಸರೋಜಿನಿ ಮಹಿಷಿ ವರದಿ ಜಾರಿಯಾಗಿ ದಶಕಗಳೇ ಕಳೆದರೂ ಈ ನೆಲದ ಮೇಲೆ, ಇಲ್ಲಿನ ಉದ್ಯೋಗದ ಮೇಲೆ, ಇಲ್ಲಿನ ಭಾಷೆ ಮೇಲೆ ಕನ್ನಡಿಗರಿಗೆ ಹಕ್ಕು ಚಲಾಯಿಸುವ ಅಧಿಕಾರವೇ ಇಲ್ಲವೇನೋ ಅನ್ನುವ ಹಾಗೆ ಸರ್ಕಾರಗಳು ನಡೆದುಕೊಂಡಿವೆ.

ಈಗಾಗಲೇ ಆಂಧ್ರಪ್ರದೇಶ, ಜಾರ್ಖಂಡ್, ಹರಿಯಾಣಗಳು ಇಂಥ ಬಿಲ್ ಅನ್ನು ಜಾರಿ ಮಾಡಿವೆ. ಸಂಸ್ಕೃತವನ್ನು ಮೊದಲ ಭಾಷೆಯಾಗಿ ತೆಗೆದುಕೊಳ್ಳಬಹುದೆಂಬ ಗುಂಡೂರಾವ್ ಅವರ ನೀತಿಗೆ ವಿರುದ್ಧವಾಗಿ ಗೋಕಾಕ್ ಚಳವಳಿಯನ್ನು ಮಾಡಿ ಆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನಾಡು ನಮ್ಮದು. ಡಾ.ರಾಜ್ ಕುಮಾರ್ ಈ ಚಳವಳಿಗೆ ಧುಮುಕುವ ಮೂಲಕ ಕನ್ನಡ ಭಾಷಾಭಿಮಾನ ಎನ್ನುವುದು ಉತ್ತುಂಗಕ್ಕೆ ಏರಿತು. ಅಂಥ ಭಾಷಾಭಿಮಾನವನ್ನು ಉದ್ದೀಪಿಸುವ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬಹುದಾದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಈ ಬಿಲ್ ಬಗ್ಗೆ ಕನ್ನಡ ಚಳವಳಿಗಾರರಾಗಲಿ, ಸಾಹಿತಿಗಳಾಗಲಿ ಚಕಾರವೆತ್ತಿದ್ದನ್ನು ನೋಡೇ ಇಲ್ಲ. ಸಾಹಿತಿಗಳ ಮಾತು ಕನ್ನಡ ಭಾಷೆ ಮುದುಕರ ಭಾಷೆಯಾಗುತ್ತಿದೆ ಅನ್ನುವುದಕ್ಕೆ ಸೀಮಿತವಾಗಿ ಈ ಮಾತೇ ಸದ್ಯದ ಕನ್ನಡ ಭಾಷಾಭಿಮಾನಕ್ಕೆ ಒತ್ತು ಕೊಟ್ಟ ವಿಷಯವಾಗಿರುವುದು ಆಶ್ಚರ್ಯ ಮೂಡಿಸುತ್ತಿದೆ. ಆದರೆ ಸರ್ಕಾರ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ನೀಡುವ ವಿಚಾರದಲ್ಲಿ ಕನ್ನಡದ ಬೌದ್ದಿಕ ಲೋಕ ಯಾಕೋ ಮೈಮರೆತಂತಿದೆ. ಸರ್ಕಾರ ಮೀಸಲಾತಿಯನ್ನು ಕಲ್ಪಿಸುವಲ್ಲಿ ಕ್ರಾಂತಿಯಾರಿಯಾದ ಅಂಶಗಳನ್ನು ಜಾರಿ ಮಾಡಲು ಆಲೋಚಿಸಿತ್ತು.
ಅದರ ಮುಖ್ಯಾಂಶಗಳು ಇಂತಿವೆ
1. ಈ ಬಿಲ್ ಕಂಪನಿ ಹಾಗೂ ಕಾರ್ಖಾನೆಗಳ ಉನ್ನತ ಹುದ್ದೆಗಳಲ್ಲಿ 50 ಪ್ರತಿಶತ ಮೀಸಲಾತಿಯನ್ನು ಕನ್ನಡಿಗರಿಗೆ ಕಾಯ್ದಿರಿಸಿತ್ತು.
2. ಸಾಮಾನ್ಯ ಹುದ್ದೆಗಳಲ್ಲಿ 70 ಪ್ರತಿಶತ ಕನ್ನಡಿಗರಿಗೆ ಮೀಸಲಾತಿ ನೀಡುವ ಭರವಸೆ ನೀಡಿತ್ತು.
3. ಸಿ ಹಾಗೂ ಡಿ ಹುದ್ದೆಗಳಲ್ಲಿ ನೂರು ಪ್ರತಿಶತ ಉದ್ಯೋಗ ಖಾತರಿ ನೀಡುವ ಭರವಸೆ ನೀಡಿತ್ತು.
ಇದಕ್ಕೆ ಸಂವಿಧಾನಿಕ ಅಡೆತಡೆಗಳಿದ್ದರೆ ಸರ್ಕಾರ ತನ್ನ ಪ್ರಾದೇಶಿಕ ಅಸ್ಮಿತೆ ಹಾಗೂ ಒಕ್ಕೂಟ ವ್ಯವಸ್ಥೆಯ ಮಾನದಂಡಗಳನ್ನು ಬಳಸಿ ಸುಗ್ರಿವಾಜ್ಞೆ ಜಾರಿಗೆ ಮುಂದಾಗಬೇಕು. ಕನ್ನಡಿಗರ ಮತದಿಂದ ಅಧಿಕಾರಕ್ಕೆ ಬಂದ ಪಕ್ಷ ಕನ್ನಡಿಗರ ಹಿತ ಕಾಪಾಡಲು ಕಾನೂನುಮಟ್ಟದಲ್ಲಿ, ಸಂವಿಧಾನಿಕವಾಗಿ ಎಲ್ಲಾ ಅಧಿಕಾರವನ್ನು ಹೊಂದಿದೆ. ಈಗಾಗಲೇ ಬಿಲ್ ಜಾರಿ ಮಾಡುವಾಗ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿಯೇ ಇರುತ್ತದೆ. ಇನ್ನು ಖಾಸಗಿ ಕಂಪನಿಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿ ಕೊಡಲು ಸರ್ಕಾರ ಮುಂದಾಗಬೇಕು. ನಮ್ಮ ನೆಲ, ಜಲ, ಸರ್ಕಾರದ ಸವಲತ್ತು ಪಡೆಯುವ ಕಂಪನಿಗಳು ಈ ನೆಲದ ಭಾಷೆ, ಕಾನೂನುಗಳನ್ನು ಗೌರವಿಸಬೇಕಾದದ್ದು ಕಂಪನಿಗಳ ಕರ್ತವ್ಯ. ಇದೇನು ಈಸ್ಟ್ ಇಂಡಿಯಾ ಕಂಪನಿಯ ಕಾನೂನೇ, ಕಂಪನಿಗಳ ಮರ್ಜಿಗೆ ಸರ್ಕಾರ ಒಳಪಡಲು! ಪ್ರಜಾಪ್ರಭುತ್ವದ ಮೂಲಕ ಆಯ್ಕೆಯಾದ ಸರ್ಕಾರ ಭಾಷಾ ನೀತಿಯ ಬಗ್ಗೆ ತೆಗೆದುಕೊಂಡ ಕಾನೂನು ಸಮಂಜಸವಾಗಿದೆ.
- ಇದಕ್ಕೆ ಸರ್ಕಾರ ಮುಂದಿಟ್ಟಿರುವ ಮಾನದಂಡಗಳೆಂದರೆ
1.ಕರ್ನಾಟಕದಲ್ಲಿ ಉದ್ಯೋಗಿ ಹುಟ್ಟಿರಬೇಕು.
2.15 ವರ್ಷಗಳ ಕಾಲ ಇಲ್ಲಿ ವಾಸವಿರಬೇಕು.
3.ಕನ್ನಡ ಬರೆಯಲು, ಓದಲು, ಮಾತಾಡಲು ಬರಬೇಕು.
ಇದು ಜಾರಿಯಾದರೆ ಯಾಕೆ ತಾನೆ ಕನ್ನಡ ಮುದುಕರ ಭಾಷೆಯಾಗುತ್ತದೆ? ಮುದುಕರಾದಿಯಾಗಿ, ಯುವಕರು, ಯುವತಿಯರು, ಮಕ್ಕಳು ಎಲ್ಲಾ ಕನ್ನಡವನ್ನು ಪ್ರೀತಿಸುತ್ತಾರೆ. ಉದ್ಯೋಗ, ಸೂರು, ಅನ್ನ ನೀಡುವ ಭಾಷೆಯ ಬಗ್ಗೆ ಯಾರಿಗೆ ತಾನೆ ಅಭಿಮಾನವಿರುವುದಿಲ್ಲ. ಹಾಗಾಗಿ ಕನ್ನಡದ ಕಲಾವಿದರು, ಬರಹಗಾರರು ಈ ಬಿಲ್ ಜಾರಿಗೆ ಒಗ್ಗೂಡಲೇಬೇಕಾಗಿದೆ. ಜನಭಿಪ್ರಾಯವನ್ನು ಮೂಡಿಸಬೇಕಾಗಿದೆ. - ಕುವೆಂಪು, ದೇವರಾಜ ಅರಸು, ಡಾ.ರಾಜ್ ಕುಮಾರ್, ಸರೋಜಿನಿ ಮಹಿಷಿ, ದೇವನೂರು ಮಹಾದೇವ ಮುಂತಾದವರು ಭಾಷಾನೀತಿಗೆ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಂಡದ್ದನ್ನು ನಾವು ಮುಂದುವರಿಸಬೇಕಾಗಿದೆ. ಇಲ್ಲದಿದ್ದರೆ ಕೇಂದ್ರವೆಂಬ ಗುಮ್ಮ ಅಥವಾ ಅಸಾಂಸ್ಕೃತಿಕ ಶಕ್ತಿಗಳು ನಮ್ಮನ್ನು ಆಳುತ್ತವೆ. ಕಾಲೇಜು ಯುವಕ, ಯುವತಿಯರು ಹಾಗೂ ವ್ಯಾಸಂಗ ಮುಗಿಸಿದ ಕನ್ನಡಿಗರು ತಮ್ಮ ಉದ್ಯೋಗ ಖಾತ್ರಿಗೆ ಈಗಿನಿಂದಲೇ ಒತ್ತಾಯಿಸಬೇಕು.ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಜೆಡಿಎಸ್ ಹಾಗೂ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕು. ಗೋಕಾಕ್ ಮಾದರಿಯ ಚಳವಳಿಗೆ ಮತ್ತೆ ಸಜ್ಜಾಗುವ ಕಾಲ ಬಂದೇಬಿಟ್ಟಿದೆ.
