ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲನ ಸಮಿತಿ ನೇತೃತ್ವದಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಛೇರಿಯ ಸ್ಥಾನೀಯ ತಹಶೀಲ್ದಾರ್ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ದಲಿತರ ಮೇಲಿನ ಶೋಷಣೆ ಶತಮಾನಗಳ ಜಾತಿ ಪದ್ಧತಿ, ಹೊಸ ರೂಪಗಳ ಮುಖಾಂತರ ಜಾತಿ ತಾರತಮ್ಯ ಅಸ್ಪೃಶ್ಯತೆ ಆಚರಣೆಯನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ದೇಶದಲ್ಲಿ ಆಳಿದ ಸರ್ಕಾರಗಳು ದಲಿತರನ್ನು ವಂಚಿಸುತ್ತಾ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪಕ್ಷಗಳು ದಲಿತ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿವೆ. ಸ್ವಾತಂತ್ರ್ಯ ನಂತರದಲ್ಲಿ ನಮ್ಮ ದೇಶದಲ್ಲಿ ಅಧಿಕಾರಕ್ಕೆ ಬಂದ ಈ ಪಕ್ಷಗಳು ಭೂ ಸುಧಾರಣೆಯನ್ನು ಸಮಗ್ರವಾಗಿ ಜಾರಿಗೆ ತರಲಿಲ್ಲ. ಆದ್ದರಿಂದ ದಲಿತರಿಗೆ ಪೂರ್ಣ ಪ್ರಮಾಣದಲ್ಲಿ ಭೂಮಿ ದೊರಕಲಿಲ್ಲ. ಎಂದಿಗೂ ದಲಿತರು ಬಗರ್ ಹುಕ್ಕುಂ ಸಾಗುವಳಿದಾರರಾಗಿ ಪಟ್ಟ ಸಿಗದೇ ಭೂಮಿಯು ಸಿಗದಂತಾಗಿದೆ. ದಲಿತರು ಎಂದಿಗೂ ನಿರ್ಗತಿಕರಾಗಿ ವಂಚಿತ ಸಮುದಾಯವಾಗಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಮುಖಂಡರಾದ ಸಂಜೀವ ಬಳ್ಕೂರ್, ದಲಿತರನ್ನು ವಂಚಿಸುತ್ತಿರುವ ಸರ್ಕಾರ ರಾಜ್ಯದಲ್ಲಿ 2014 ರಿಂದ ಇಲ್ಲಿಯವರೆಗೆ ಹತ್ತು ವರ್ಷದಲ್ಲಿ 2ಲಕ್ಷ 75 ಸಾವಿರ ಕೋಟಿಯಷ್ಟು ಹಣವ್ಯಯ ಮಾಡಿದೆ. ಈ ಹಣ ಅಲಕ್ಷ್ಯಕ್ಕೆ ಒಳಗಾಗಿದೆ. 2024-25ರಲ್ಲಿ ರಾಜ್ಯ ಸರ್ಕಾರ ಬಜೆಟ್ನಲ್ಲಿ 39,121.46 ಕೋಟಿ ಹಣ ಒದಗಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್.ಸಿ./ಎಸ್.ಟಿ.ಕಾಯ್ದೆಯನ್ನು ತಂದವರು ನಾವೆಂದು ಹೇಳಿಕೊಂಡು ಅವರೇ ಕಾಯಿದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಲಿತ ಪರ ಎಂದು ಹೇಳುತ್ತಾ ದಲಿತರ ಮೂತಿಗೆ ತುಪ್ಪ ಸವರಿದಂತಾಗಿದೆ. ದಲಿತರ ಅಭಿವೃದ್ಧಿ ಹಣ, ಗ್ಯಾರಂಟಿಗೆ 2023 ರಲ್ಲಿ 11,000 ಕೋಟಿ, 2024 ರಲ್ಲಿ 14,282.38 ಕೋಟಿ, ಒಟ್ಟು 25,396.38 ಕೋಟಿ ಹಣ ಗ್ಯಾರಂಟಿ ಯೋಜನೆಗೆ ವರ್ಗಾಯಿಸಿದ್ದಾರೆ. ಎಸ್ಸಿ,ಎಸ್ಟಿ/ಟಿ. ಎಸ್ ಪಿ ಕಾಯಿದೆ 7 ಸಿ ಕಾಯ್ದೆಯನ್ನು ಜಾರಿಗೊಳಿಸಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ರವಿ.ವಿ.ಎಂ, ರಾಮ ಕಾರ್ಕಡ, ನಾಗರತ್ನ ನಾಡ, ವಿನಯ, ಶಶಿಧರ, ಕಿರಣ್, ನಾಗರತ್ನ ಎಲ್ , ಸಿಐಟಿಯು ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎಚ್.ನರಸಿಂಹ, ರಾಜು ಪಡುಕೋಣೆ, ಚಂದ್ರಶೇಖರ. ವಿ. ಜನವಾದಿ ಸಂಘಟಣೆಯ ಮುಖಂಡರಾದ ಶೀಲಾವತಿ, ನಳಿನಿ ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್, ಮುಖಂಡರಾದ ಮೋಹನ್, ಕುಪ್ಪಣ್ಣ, ಉಪಸ್ಥಿತರಿದ್ದರು.
