2023ರ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಸಂಬಂಧ ಹೈಕೋರ್ಟಿಗೆ ಸಲ್ಲಿಸಬೇಕಾದ ದಾಖಲೆಗಳು ಇದೀಗ ಮಾಲೂರಿನ ತಾಲೂಕು ಕಚೇರಿಯ ಖಜಾನೆಯಲ್ಲಿ ಪತ್ತೆಯಾಗಿವೆ.
ಮಾಲೂರು ಕ್ಷೇತ್ರದ ವಿಧಾನಸಭಾ ಚುನಾವಣಾ ಫಲಿತಾಂಶ ಸಂಬಂಧ ಬಿಜೆಪಿಯ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಇವಿಎಂ ಭದ್ರತಾ ಕೊಠಡಿಯಲ್ಲಿರುವ ಕೆಲವೊಂದು ಮಹತ್ವದ ದಾಖಲೆಗಳನ್ನು ಹೈಕೋರ್ಟ್ ಗೆ ಸಲ್ಲಿಸಬೇಕಾಗಿರುವ ಕಾರಣ ಕೋರ್ಟ್ ಆದೇಶದಂತೆ ಮಂಗಳವಾರ ಕೋಲಾರದ ಡಿಸಿ ಕಚೇರಿ ಬಳಿಯಿರುವ ಇವಿಎಂ ಭದ್ರತಾ ಕಚೇರಿಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷಾ ನೇತೃತ್ವದಲ್ಲಿ ತೆರೆಯಲಾಯಿತು. ಈ ವೇಳೆ ಮಾಲೂರು ಶಾಸಕ ಕೆ ವೈ ನಂಜೇಗೌಡರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಕ್ಷದ ಬಹುತೇಕ ಅಭ್ಯರ್ಥಿಗಳು ಹಾಜರಿದ್ದರು.

ಇನ್ನು ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಮಧ್ಯಾಹ್ನದ ವೇಳೆಗೆ ಇವಿಎಂ ಭದ್ರತಾ ಕೊಠಡಿಯನ್ನು ತೆರೆದು ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಶೀಲಿಸಲಾಯಿತು.
ಆದ್ರೆ 17 ಸಿ ಫಾರಂ ಸೇರಿದಂತೆ ಕೋರ್ಟ್ ಗೆ ಸಲ್ಲಿಸಬೇಕಾದ ಮಹತ್ವದ ದಾಖಲೆಗಳು ಇಲ್ಲಿ ಲಭ್ಯವಾಗಲಿಲ್ಲ. ಕೋಲಾರದಲ್ಲಿ ಸಿಗದ ಕಾರಣ ಮಾಲೂರು ತಾಲೂಕು ಕಛೇರಿಯಲ್ಲಿರುವ ಖಜಾನೆಯಲ್ಲಿ ಪರಿಶೀಲನೆ ಮಾಡಲು ಅಲ್ಲಿನ ತಹಶೀಲ್ದಾರ್ ಅವರಿಗೆ ಸೂಚಿಸಲಾಯಿತು. ಅದರಂತೆ ಸಂಜೆ ವೇಳೆಗೆ ಮಾಲೂರು ಖಜಾನೆಯಲ್ಲಿ ಕೋರ್ಟಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ದೊರೆತಿರುವುದಾಗಿ ವರದಿಯಾಗಿದೆ.
ಕೋಲಾರದಲ್ಲಿ ಪರಿಶೀಲನೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಕೋರ್ಟ್ ಕೇಳಿರುವ ದಾಖಲೆಗಳು ಇಲ್ಲಿ ಲಭ್ಯವಾಗಿಲ್ಲ. ವಿವಿಪ್ಯಾಟ್, ಇವಿಎಂ ದಾಖಲೆಗಳಿದ್ದು, ಉಳಿದ ದಾಖಲೆಗಳು ಮಾಲೂರಿನ ಖಜಾನೆಯಲ್ಲಿರಬಹುದು. ನಮಗೆ ಲಭ್ಯವಿರುವ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಇಡುತ್ತೇವೆ” ಎಂದಿದ್ದರು.
ಕೋಲಾರ ಇವಿಎಂ ಭದ್ರತಾ ಕೊಠಡಿಯಲ್ಲಿ ಅಗತ್ಯ ದಾಖಲೆಗಳು ಸಿಗದಿದ್ದಕ್ಕೆ ಮಾಜಿ ಶಾಸಕ, ದೂರುದಾರ ಕೆ ಎಸ್ ಮಂಜುನಾಥ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. “ಮರುಮತ ಎಣಿಕೆಗೆಗೆ ಅಗತ್ಯವಿದ್ದ ದಾಖಲೆಗಳು ಚುನಾವಣೆ ಫಲಿತಾಂಶದ ದಿನದಂದೇ ಲಭ್ಯವಿತ್ತು. ಆದರೆ ಈಗ ಇಲ್ಲ ಎಂದರೆ ಏನು ಅರ್ಥ. ಇದೇನು ಹುಡುಗಾಟವಾ? ಮರು ಮತಎಣಿಕೆ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ನ್ಯಾಯ ಸಿಗುತ್ತದೆ ಎಂದು ಆಶಾವಾದಿಯಾಗಿಯೇ ಇರುತ್ತೇನೆ” ಎಂದು ತಿಳಿಸಿದ್ದರು.
ಸಿಸಿಟಿವಿ ದೃಶ್ಯಾವಳಿ, 12 ಸಿ ಫಾರ್ಮ್‌ಗಳನ್ನು ನೀಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಆದರೂ ಒಂದು ವರ್ಷದಿಂದ ಆಟ ಆಡಿಸುತ್ತಿದ್ದಾರೆ. ಹಲವು ಫಾರಂಗಳಲ್ಲಿ ನಮ್ಮ ಏಜೆಂಟರ ಸಹಿಗಳೇ ಇಲ್ಲ. ಸಿಸಿಟಿವಿ ದೃಶ್ಯಾವಳಿ ದೊರೆತರೆ ನಮ್ಮ ಏಜೆಂಟರು ಇದ್ದರೋ? ಇಲವೋ ಎನ್ನುವುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಏನಿದು ಬೆಳವಣಿಗೆ?
2023ರ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಾಲಿ ಶಾಸಕ ನಂಜೇಗೌಡ 50,955 ಮತ ಪಡೆದಿದ್ದರೆ, ಬಿಜೆಪಿಯ ಪ್ರತಿಸ್ಪರ್ಧಿ ಮಂಜುನಾಥಗೌಡ 50,707 ಮತ ಗಳಿಸಿದ್ದರು. 248 ಕಡಿಮೆ ಮತಗಳ ಅಂತರದಿಂದ ಪರಾಜಿತರಾದ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡ ಮತ್ತು ಬೆಂಬಲಿಗರು ಮರು ಮತ ಎಣಿಕೆಗೆ ಒತ್ತಾಯ ಮಾಡಿದ್ದರೂ ಅಂದಿನ ಜಿಲ್ಲಾಧಿಕಾರಿ, ಮರು ಎಣಿಕೆಗೆ ಅವಕಾಶ ನೀಡದೆ ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಮಂಜುನಾಥ್‌ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಮಾಲೂರು ಶಾಸಕರಿಗೆ ತಲೆನೋವಾದ ಹೈಕೋರ್ಟ್ ಆದೇಶ!
ಇನ್ನು ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಮಧ್ಯಾಹ್ನದ ವೇಳೆಗೆ ಇವಿಎಂ ಭದ್ರತಾ ಕೊಠಡಿಯನ್ನು ತೆರೆದು ಸುಮಾರು ಒಂದೂವರೆ ಗಂಟೆಗಳ ಕಾಲ ಪರಿಶೀಲಿಸಲಾಯಿತು. ಆದ್ರೆ 17 ಸಿ ಫಾರಂ ಸೇರಿದಂತೆ ಕೋರ್ಟ್ ಗೆ ಸಲ್ಲಿಸಬೇಕಾದ ಮಹತ್ವದ ದಾಖಲೆಗಳು ಇಲ್ಲಿ ಲಭ್ಯವಾಗಲಿಲ್ಲ.
ಕೋಲಾರದಲ್ಲಿ ಸಿಗದ ಕಾರಣ ಮಾಲೂರು ತಾಲೂಕು ಕಛೇರಿಯಲ್ಲಿರುವ ಖಜಾನೆಯಲ್ಲಿ ಪರಿಶೀಲನೆ ಮಾಡಲು ಅಲ್ಲಿನ ತಹಶೀಲ್ದಾರ್ ಅವರಿಗೆ ಸೂಚಿಸಲಾಯಿತು. ಅದರಂತೆ ಮಾಲೂರು ಖಜಾನೆಯಲ್ಲಿ ಕೋರ್ಟ್ ಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ದೊರೆತವು.
