ಮಾರ್ಚ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಪ್ರಧಾನಿ ಮೋದಿ ಮಾಡಿದ 173 ಭಾಷಣಗಳ ಪೈಕಿ 110 ಭಾಷಣಗಳು ಮುಸ್ಲಿಂ ವಿರುದ್ಧ ದ್ವೇಷ (ಇಸ್ಲಾಮೋಫೋಬಿಯಾ) ಮತ್ತು ಪ್ರಚೋದನಾಕಾರಿಯಾಗಿವೆ ಎಂದು ಹ್ಯೂಮನ್ ರೈಟ್ಸ್ ವಾಚ್ (HRW) ಹೇಳಿದೆ.
ಚುನಾವಣಾ ಸಮಯದಲ್ಲಿನ ಮೋದಿ ಭಾಷಣಗಳ ಬಗ್ಗೆ ವಿಶ್ಲೇಷಣೆ ನಡೆಸಿ, ವರದಿ ಬಿಡುಗಡೆ ಮಾಡಿರುವ HRW, “ಈ ಇಸ್ಲಾಮೋಫೋಬಿಕ್ ಹೇಳಿಕೆಗಳು ರಾಜಕೀಯ ವಿರೋಧಿಗಳನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದ್ದವು. ಮೋದಿ ಅವರ ಇಸ್ಲಾಮೋಫೋಬಿಕ್ ಭಾಷಣವು ಕೇವಲ ಮುಸ್ಲಿಂ ವಿರುದ್ಧ ದ್ವೇಷವನ್ನು ಉತ್ತೇಜಿಸುತ್ತದೆ. ತಪ್ಪು ಮಾಹಿತಿಯ ಮೂಲಕ ಬಹುಸಂಖ್ಯಾತ ಹಿಂದು ಸಮುದಾಯದಲ್ಲಿ ಭಯವನ್ನು ಬೆಳೆಸುತ್ತದೆ” ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಹಿಂದುಗಳು ಮತ್ತು ಇತರ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ರಕ್ಷಣೆಗಾಗಿ ತಾನು ಆಶಿಸುವುದಾಗಿ ಮೋದಿ ಇತ್ತೀಚೆಗೆ ಹೇಳಿದ್ದರು. ಆದರೆ, ಮೋದಿ ಅವರು ಚುನಾವಣಾ ಸಮಯದಲ್ಲಿ ಮಾಡಿದ ಭಾಷಣಗಳು ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವನ್ನು ಪ್ರಚೋದಿಸಿದೆ ಎಂದು HRW ಹೇಳಿದೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ವಿನೇಶ್ ಫೋಗಟ್ ವಿದಾಯ ಮತ್ತು ದೇಶಭಕ್ತರ ದ್ವೇಷ
ಗುಜರಾತ್‌ನಲ್ಲಿ ಚುನಾವಣಾ ಭಾಷಣ ಮಾಡಿದ್ದ ಮೋದಿ, ಮುಸ್ಲಿಮರನ್ನು ‘ನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರು’ ಎಂದು ತುಚ್ಛವಾಗಿ ಉಲ್ಲೇಖಿಸಿದ್ದರು. ಕಾಂಗ್ರೆಸ್ ಮುಸ್ಲಿಮರಿಗೆ ದೇಶದ ಆಸ್ತಿಯನ್ನು ಹಂಚುತ್ತದೆ ಎಂದು ಸುಳ್ಳು ಪ್ರತಿಪಾದನೆಯನ್ನು ಮುಂದಿಟ್ಟಿದ್ದರು.
ಮೋದಿ ಅವರು ತಮ್ಮ ಪ್ರಚಾರ ಭಾಷಣಗಳಲ್ಲಿ ಮಾಡಿದ ಇದೇ ರೀತಿಯ ಎಲ್ಲ ಹೇಳಿಕೆಗಳು ಮತ್ತು ಇತರ ನಿದರ್ಶನಗಳ ವಿಚಾರದಲ್ಲಿ ಅವರ ವಿರುದ್ಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು HRW ವಿವರಿಸಿದೆ.
“ಚುನಾವಣಾ ಆಯೋಗವು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಆಯೋಗದ ಪತ್ರ ನೀಡಿತು. ತಮ್ಮ ಪಕ್ಷದ ಎಲ್ಲ ಸ್ಟಾರ್ ಪ್ರಚಾರಕರಿಗೆ ಕೋಮುವಾದಿ ಭಾಷಣ ಮಾಡದಂತೆ ಸೂಚಿಸಬೇಕೆಂದು ನಿರ್ದೇಶಿಸಿತು. ಆದರೆ, ದ್ವೇಷ ಭಾಷಣ ಮಾಡದಂತೆ ಮೋದಿ ಅವರನ್ನು ತಡೆಯಲಿಲ್ಲ. ಮೋದಿ ಅವರು ತಮ್ಮ ಪ್ರಚಾರದ ಅವಧಿಯುದ್ದಕ್ಕೂ ದ್ವೇಷವನ್ನು ಪ್ರಚೋದಿಸುವ ಭಾಷಣಗಳನ್ನು ಮುಂದುವರೆಸಿದರು” ಎಂದು HRW ಹೇಳಿದೆ.
ಈ ವರದಿ ಓದಿದ್ದೀರಾ?: ಕಾವಡ್ ಯಾತ್ರೆ | ಆಹಾರದಲ್ಲಿ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ
“ಮೋದಿಯ 10 ವರ್ಷಗಳ ಆಡಳಿತದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದಾಳಿ ಮತ್ತು ತಾರತಮ್ಯ ಹೆಚ್ಚಾಗಿದೆ. ಮೋದಿ ಮತ್ತು ಇತರ ಬಿಜೆಪಿ ನಾಯಕರು ಮಾಡಿದ ‘ದ್ವೇಷ’ ಭಾಷಣಗಳು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಇತರರ ವಿರುದ್ಧದ ನಿಂದನೆ, ದ್ವೇಷವನ್ನು ಮತ್ತಷ್ಟು ಸಾಮಾನ್ಯಗೊಳಿಸಿದೆ” ಎಂದು HRWನ ಏಷ್ಯಾ ನಿರ್ದೇಶಕಿ ಎಲೈನ್ ಪಿಯರ್ಸನ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಭಾರತೀಯ ಅಧಿಕಾರಿಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾವಡ್ ಯಾತ್ರೆಗೆ ಮುಂಚಿತವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಅಧಿಕಾರಿಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ‘ಉಪಾಹಾರ ಮತ್ತು ಆಹಾರ ಮಳಿಗೆಗಳ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಯ ಎದುರು ಪ್ರದರ್ಶಿಸಬೇಕು’ ಎಂದು ಆದೇಶಗಳನ್ನು ಹೊರಡಿಸಿದ್ದರು. ಮಧ್ಯಪ್ರದೇಶದಲ್ಲಿ ದನದ ಮಾಂಸ ಇಟ್ಟುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
“2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಮುಸ್ಲಿಂ ವಿರೋಧಿ ದ್ವೇಷದ ಮಾತುಗಳು ಹೆಚ್ಚಾಗಿವೆ” ಎಂದು HRW ಗಮನ ಸೆಳೆದಿದೆ.