ಒಳಚರಂಡಿ ಸಮಸ್ಯೆ ಬಗೆಹರಿಸಲು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಧಾರವಾಡ ನಗರದ ಬಿಡನಾಳ್ ಕ್ರಾಸ್‌ನ ಶಕ್ತಿ ನಗರದ ನಿವಾಸಿಗಳು ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ. 80 ರ ಬಿಡನಾಳ್ ಕ್ರಾಸ್‌ನ ಪಿ.ಬಿ.ರಸ್ತೆಯ ಸಮೀಪವಿರುವ ಶಕ್ತಿನಗರದ ನಿವಾಸಿಗಳು ಪ್ರಮುಖ ಯುಜಿಡಿ ಸಂಪರ್ಕ ಸಮಸ್ಯೆಯನ್ನು ಎದುರಿಸುತ್ತಿದ್ದು ಈ ಸಮಸ್ಯೆ ಬಗೆಹರಿಸಲು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಈ ಕಾಲೋನಿಯು ಪುಣೆ ಬೆಂಗಳೂರು ಹೆದ್ದಾರಿ ಸಂಖ್ಯೆ 4ರಲ್ಲಿ ಹಾದುಹೋಗುವ ಒಳಚರಂಡಿ ಪೈಪ್‌ಲೈನ್‌ನೊಂದಿಗೆ ಯುಜಿಡಿ ಸಂಪರ್ಕವನ್ನು ಹೊಂದಿದ್ದು, ಹೆದ್ದಾರಿಯ ಅಗಲೀಕರಣ ಮತ್ತು ವಿಸ್ತರಣೆಯ ಸಮಯದಲ್ಲಿ ಒಳಚರಂಡಿ ಸಂಪರ್ಕವು ಮುಖ್ಯ ಒಳಚರಂಡಿ ಪೈಪ್‌ಲೈನ್‌ಗೆ ಹಾನಿಗೊಳಗಾಗಿರುವುದು ಮತ್ತು ಸಂಪರ್ಕ ಕಡಿತಗೊಂಡಿರುವುದು ತುಂಬಾ ದುರದೃಷ್ಟಕರ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಸ್ತೆ ಬದಿಯಲ್ಲಿದ್ದ ಚೇಂಬರ್‌ಗಳು ಹಾಳಾಗಿವೆ. ಹೀಗಾಗಿ ನಾವು ಯುಜಿಡಿ ಸಂಪರ್ಕದಿಂದ ವಂಚಿತರಾಗಿದ್ದೇವೆ ಮತ್ತು ಕೊಳಚೆ ತ್ಯಾಜ್ಯಗಳನ್ನು ಖಾಲಿ ಇರುವ ಅಕ್ಕಪಕ್ಕದ ಪ್ಲಾಟ್‌ಗಳು ಮತ್ತು ಪಕ್ಕದ ರಸ್ತೆಗಳಲ್ಲಿ ಹೋಗುತ್ತಿದ್ದು, ಇದರಿಂದ ಗಂಭೀರ ನೈರ್ಮಲ್ಯ ಮತ್ತು ಆರೋಗ್ಯ ಸಮಸ್ಯೆಗಳು ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.
ರಸ್ತೆಗಳ ಅಗಲೀಕರಣದ ವೇಳೆ ಬೇಜವಾಬ್ದಾರಿಯಿಂದ ಕೊಳಚೆ ನೀರಿನ ಸಮಸ್ಯೆ ಉಂಟಾಗುತ್ತಿರುವುದನ್ನು ಎಚ್‌ಡಿಎಂಸಿ ಅಧಿಕಾರಿಗಳು ಹಾಗೂ ಚುನಾಯಿತ ರಾಜಕೀಯ ಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಹಾಳಾದ ಯುಜಿಡಿ ಸಂಪರ್ಕವನ್ನು ಸರಿಪಡಿಸುವಂತೆ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಸರಿಪಡಿಸಲು ಕ್ರಮ ಕೈಗೊಂಡಿಲ್ಲ ಎಂದು ಪಾಲಿಕೆ ವಿರುದ್ಧ ಸ್ಥಳಿಯರು ಆಕ್ರೋಶಗೊಂಡರು.
ಇದನ್ನು ಓದಿದ್ದೀರಾ? ಬಳ್ಳಾರಿ | ಪ್ರೊ. ಮೇತ್ರಿ ನೇಮಕಾತಿ ರದ್ದು ಹಿನ್ನೆಲೆ: ವಿಜಯನಗರ ಕೃಷ್ಣದೇವರಾಯ ವಿವಿ ಕುಲಪತಿಯಾಗಿ ಡಾ ಎಂ ಮುನಿರಾಜು
ಯುಜಿಡಿ ಚೇಂಬರ್‌ಗಳು ಸದಾ ತುಂಬಿ ತುಳುಕುತ್ತಿರುತ್ತವೆ. ವಾಸನೆ ಅಸಹನೀಯವಾಗಿದೆ. ಡೆಂಘೀ, ಮಲೇರಿಯಾ ಹೀಗೆ ನಾನಾ ರೋಗಗಳಿಂದ ನಾಗರಿಕರು ನರಳುತ್ತಿದ್ದಾರೆ. ಬಡಾವಣೆಯ ರಸ್ತೆಗಳು ಹದಗೆಟ್ಟಿದ್ದು, ವಾಸಕ್ಕೆ ಅಯೋಗ್ಯ ವಾತಾವರಣ ನಿರ್ಮಾಣವಾಗಿದೆ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಚರ್ಚಿಸಿ 5 ವರ್ಷ ಕಳೆದರೂ ಏನೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳೇ ಬಂದು ಸಮಸ್ಯೆಗೆ ಗಮನ ಹರಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಮೂಲ ಸೌಕರ್ಯಗಳ ಉಲ್ಲಂಘನೆಯಾಗಿದೆ ಎಂದರು.
