ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಮೂಲಕ ಬಹುದೊಡ್ಡ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ಹೇಳಿದರು.
ಗದಗ ನಗರದ ಕೆ ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“2023ರ ವಿಧಾನಸಭೆಯ ಚುನಾವಣೆ ನಂತರ ಚುನಾವಣಾ ಭರವಸೆಯ ಮುಂದುವರಿದ ಭಾಗವಾಗಿ ಪಂಚ ಗ್ಯಾರಂಟಿಗಳು ಘೋಷಣೆಯಾದವು. ಈ ಗ್ಯಾರಂಟಿಗಳ ಮೂಲಕ ಬಡತನವನ್ನು ಬೇರುಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯಕ್ರಮ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವರ್ಷಕ್ಕೆ 58 ಸಾವಿರ ಕೋಟಿಗಳ ಪಂಚ ಗ್ಯಾರಂಟಿ ಯೋಜನೆ ಜಾರಿಯಾಯಿತು” ಎಂದರು.
“ಶಕ್ತಿ ಯೋಜನೆಯಿಂದ ಗದಗ ಜಿಲ್ಲೆಯ 5,60,87,783 ಮಂದಿ ಮಹಿಳೆಯರು ಈ ಯೋಜನೆಯನ್ನು ಬಳಸಿಕೊಂಡು ಪ್ರಯಾಣಿಸಿದ್ದಾರೆ. ದೈನಂದಿನ ಕೆಲಸದ ಸ್ಥಳಗಳಿಗೆ, ಬೇರೆ-ಬೇರೆ ಊರುಗಳಿಗೆ ಉಚಿತವಾಗಿ ದೊರೆತ ಪ್ರಯಾಣದ ಅವಕಾಶ, ಮಹಿಳೆಯರ ದೈನಂದಿನ ಬದುಕಿನಲ್ಲಿ ವೆಚ್ಚ ಕಡಿತಗೊಳಿಸಿ ಆದಾಯ ವೃದ್ಧಿಗೆ ಕಾರಣವಾಗಿದೆ” ಎಂದು ತಿಳಿಸಿದರು.
“ಅನ್ನಭಾಗ್ಯ ಯೋಜನೆ ಬಡವರಿಗೆ, ಕೂಲಿಕಾರರಿಗೆ, ಶ್ರಮಿಕರಿಗೆ ವರದಾನವಾಗಿದೆ. 5 ಕೆ ಜಿ ಅಕ್ಕಿ ಹಾಗೂ ಇನ್ನೈದು ಕೆಜಿ ಅಕ್ಕಿ ಬದಲಿಗೆ ನೇರ ಹಣ ವರ್ಗಾವಣೆಗೆ ಸರ್ಕಾರ ನಿರ್ಣಯಿಸಿತು. ಗದಗ ಜಿಲ್ಲೆಯೊಂದರಲ್ಲೇ ಏಪ್ರಿಲ್-2024ರಲ್ಲಿ ಜಿಲ್ಲೆಯ ನೋಂದಾಯಿತ ಅರ್ಹ ಒಟ್ಟು 2,54,144 ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಕುಟುಂಬಗಳು ಒಟ್ಟು 8,23,645 ಪಡಿತರ ಫಲಾನುಭವಿ ಸದಸ್ಯರುಗಳಿಗೆ ಒಟ್ಟು ರೂ.12 ಕೋಟಿಗಳನ್ನು ನೇರವಾಗಿ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜುಲೈ 2023ರಿಂದ ಏಪ್ರಿಲ್-2024ರ ಅಂತ್ಯದವರೆಗೆ ಪಡಿತರ ಫಲಾನುಭವಿಗಳ ಖಾತೆಗೆ ಒಟ್ಟಾರೆ 141.68 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೇರವಾಗಿ ನಗದು ವರ್ಗಾವಣೆ ಮಾಡಲಾಗಿದೆ” ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ ಒದಗಿಸುವದಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 2,77,478 ಗೃಹ ಬಳಕೆ ಸಂಪರ್ಕಗಳಿದ್ದು ಜೂನ್ 2024 ತಿಂಗಳ 2,71,186 ನೊಂದಣಿಯಾಗಿದ್ದು ಉಚಿತ ವಿದ್ಯುತ ಸೌಲಭ್ಯವನ್ನು ಪಡೆದಿರುತ್ತಾರೆ. ಇಲ್ಲಿಯವರೆಗೆ ಒಟ್ಟಾರೆ ಜಿಲ್ಲೆಯ ಅರ್ಹ ಕುಟುಂಬಗಳಿಗೆ ಈ ಯೋಜನೆಯಡಿ 89.32 ಕೋಟಿಗೂ ಅಧಿಕ ಹಣವನ್ನು ನೀಡಲಾಗಿದೆ. ಗೃಹಜ್ಯೋತಿ ಯೋಜನೆ ರಾಜ್ಯದ ಮನೆಗಳಿಗೆ ಬೆಳಕು ತರುವ ಯೋಜನೆಯಾಗಿದ್ದು, ವಿದ್ಯುತ್ ಸಂಪರ್ಕ ಪಡೆಯಲು ಮತ್ತು ಬಿಲ್ ಕಟ್ಟಲು ಸಾಧ್ಯವಾಗದ ಕುಟುಂಬಗಳಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳ ಬಾಳಿನಲ್ಲಿ ಪ್ರಕಾಶಮಾನವಾಗಿ ಬೆಳಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
“78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಎಲ್ಲ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಹಾಗೂ ತ್ವರಿತಗತಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆ ಹಾಗೂ ಜಿಲ್ಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ” ಎಂದ ಸಚಿವರು ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರಿದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಒಳಮೀಸಲಾತಿ ವರ್ಗೀಕರಣ ಜಾರಿಗೆ ಪರಿಶಿಷ್ಟ ಜಾತಿ ಸಾಮರಸ್ಯ ಐಕ್ಯತಾ ಒಕ್ಕೂಟ ಆಗ್ರಹ
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್ ವಿ ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಇದ್ದರು.