2023ರ ವಿಧಾನಸಭಾ ಚುನಾವಣೆಯ ವೇಳೆ ಕೋಲಾರದ ಮಾಲೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿವಿ ಪ್ಯಾಟ್ ಎಣಿಕೆ ಹಾಗೂ ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿಯನ್ನು ಆಗಸ್ಟ್ 19ರಂದು ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿಯ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.

ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ಡವಾಡ ಅವರು, “ಮತ ಎಣಿಕೆ ವೇಳೆ ವಿವಿ ಪ್ಯಾಟ್ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ಚಿತ್ರೀಕರಣ ಮಾಡಲಾಗಿತ್ತು. ಆ ದೃಶ್ಯಾವಳಿ ಒಳಗೊಂಡ ಒಂದು ಸಿ ಡಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಇವಿಎಂ ಇರಿಸಲಾಗಿದ್ದ ಸ್ಟ್ರಾಂಗ್ ರೂಂ ತೆರೆದು ಪರಿಶೀಲನೆ ನಡೆಸಲಾಗಿದೆ. ಅಲ್ಲಿ ವಿವಿ ಪ್ಯಾಟ್ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿಗಳನ್ನು ಒಳಗೊಂಡ ಮೂರು ಸಿ ಡಿ ಲಭ್ಯವಾಗಿವೆ. ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರ್ಮ್ ನಂ.17(ಸಿ) ನಕಲು ಪ್ರತಿ ಸಹ ಲಭ್ಯವಾಗಿದೆ. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದನ್ನು ಓದಿದ್ದೀರಾ? ಮಾಲೂರು ಚುನಾವಣಾ ಫಲಿತಾಂಶ ತಕರಾರು ಅರ್ಜಿ: ಕೋಲಾರದಲ್ಲಿ ಸಿಗದ ದಾಖಲೆ; ಮಾಲೂರಲ್ಲಿ ಪತ್ತೆ!
ಸಂಬಂಧಿತ ಸಿ ಡಿ ಹಾಗೂ ಫಾರ್ಮ್ ನಂ.17(ಸಿ)ಯ ನಕಲು ಪ್ರತಿಯನ್ನು ಆಗಸ್ಟ್ 19ರಂದು ಸಲ್ಲಿಸುವಂತೆ ಚುನಾವಣಾ ಆಯೋಗದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.
ಮಾಲೂರು ವಿಧಾನಸಭೆ ಕ್ಷೇತ್ರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪ ದೋಷಗಳಾಗಿವೆ. ಇದರಿಂದ ಆ ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಮಾಲೂರು ಕ್ಷೇತ್ರದ ಫಾರ್ಮ್ ನಂ.17(ಸಿ)ನ ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆಯೋಗಕ್ಕೆ ಅರ್ಜಿಯ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ನಿರ್ದೇಶಿಸಿತ್ತು.

ಏನಿದು ಬೆಳವಣಿಗೆ?
2023ರ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಾಲಿ ಶಾಸಕ ನಂಜೇಗೌಡ 50,955 ಮತ ಪಡೆದಿದ್ದರೆ, ಬಿಜೆಪಿಯ ಪ್ರತಿಸ್ಪರ್ಧಿ ಮಂಜುನಾಥಗೌಡ 50,707 ಮತ ಗಳಿಸಿದ್ದರು. 248 ಕಡಿಮೆ ಮತಗಳ ಅಂತರದಿಂದ ಪರಾಜಿತರಾದ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡ ಮತ್ತು ಬೆಂಬಲಿಗರು ಮರು ಮತ ಎಣಿಕೆಗೆ ಒತ್ತಾಯ ಮಾಡಿದ್ದರೂ ಅಂದಿನ ಜಿಲ್ಲಾಧಿಕಾರಿ, ಮರು ಎಣಿಕೆಗೆ ಅವಕಾಶ ನೀಡದೆ ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಮಂಜುನಾಥ್‌ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಇವಿಎಂ ಭದ್ರತಾ ಕೊಠಡಿಯನ್ನು ತೆರೆದು ಸುಮಾರು ಒಂದೂವರೆ ಗಂಟೆಗಳ ಕಾಲ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ, 17 ಸಿ ಫಾರಂ ಸೇರಿದಂತೆ ಕೋರ್ಟ್‌ಗೆ ಸಲ್ಲಿಸಬೇಕಾದ ಮಹತ್ವದ ದಾಖಲೆಗಳು ಇಲ್ಲಿ ಲಭ್ಯವಾಗಿರಲಿಲ್ಲ.
ಇದನ್ನು ಓದಿದ್ದೀರಾ? ಕೋಲಾರ | ಮಾಲೂರು ಶಾಸಕರಿಗೆ ತಲೆನೋವಾದ ಹೈಕೋರ್ಟ್ ಆದೇಶ!
ಕೋಲಾರದಲ್ಲಿ ಸಿಗದ ಕಾರಣ ಮಾಲೂರು ತಾಲೂಕು ಕಛೇರಿಯಲ್ಲಿರುವ ಖಜಾನೆಯಲ್ಲಿ ಪರಿಶೀಲನೆ ಮಾಡಲು ಅಲ್ಲಿನ ತಹಶೀಲ್ದಾರ್ ಅವರಿಗೆ ಸೂಚಿಸಲಾಯಿತು. ಅದರಂತೆ ಮಾಲೂರು ಖಜಾನೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ದೊರೆತಿರುವುದಾಗಿ ವರದಿಯಾಗಿದೆ.
