ಶನಿವಾರ ಮುಂಜಾನೆ, ಉತ್ತರ ಪ್ರದೇಶದ ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಸಬರಮತಿ ಎಕ್ಸ್‌ಪ್ರೆಸ್ (19168) ಪ್ಯಾಸೆಂಜರ್ ರೈಲಿನ 20 ಬೋಗಿಗಳು ಹಳಿತಪ್ಪಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಹಳಿ ತಪ್ಪಿದ ಬಗ್ಗೆ ನಾರ್ತ್ ಸೆಂಟ್ರಲ್ ರೈಲ್ವೇ (ಎನ್‌ಸಿಆರ್) ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿಕಾಂತ್ ತ್ರಿಪಾಠಿ ಮಾಹಿತಿ ನೀಡಿದ್ದು, “ಅಪಘಾತ ಶನಿವಾರ ಮುಂಜಾನೆ 2.30ರ ವೇಳೆಗೆ ಸಂಭವಿಸಿ. ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ” ಎಂದು ಹೇಳಿದ್ದಾರೆ.
ರೈಲು ವಾರಣಾಸಿಯಿಂದ ಅಹಮದಾಬಾದ್‌ಗೆ ಸಂಚರಿಸುತ್ತಿತ್ತು. ಕಾನ್ಪುರ ಮತ್ತು ಭೀಮಸೇನ್ ರೈಲು ನಿಲ್ದಾಣದ ನಡುವೆ ರೈಲು ಹಳಿತಪ್ಪಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಬರಮತಿ ಎಕ್ಸ್‌ಪ್ರೆಸ್ ಹಳಿತಪ್ಪಿರುವುದು ವಿಧ್ವಂಸಕ ಕೃತ್ಯ ಎಂದು ಎಕ್ಸ್‌ನಲ್ಲಿ ಪ್ರತಿಪಾದಿಸಿದ್ದಾರೆ. “ಹಳಿಗಳ ಮೇಲೆ ಉದ್ದೇಶಪೂರ್ವಕವಾಗಿ ಇಟ್ಟಿದ್ದ ವಸ್ತುವಿಗೆ ರೈಲು ಢಿಕ್ಕಿ ಹೊಡೆದಿದ್ದು, ರೈಲಿನ ಇಂಜಿನ್ ಹಳಿ ತಪ್ಪಿದೆ. ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ಉತ್ತರ ಪ್ರದೇಶ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಕಾನ್ಪುರ ರೈಲು ನಿಲ್ದಾಣದಿಂದ ರೈಲು ಹೊರಟ ಸ್ವಲ್ಪ ಸಮಯದ ನಂತರ, ನಮಗೆ ದೊಡ್ಡ ಶಬ್ದ ಕೇಳಿಸಿತು. ಕೋಚ್ ಅಲುಗಾಡಲು ಪ್ರಾರಂಭಿಸಿತು. ನಾನು ತುಂಬಾ ಭಯಪಟ್ಟೆ. ಆವೇಳೆಗೆ ರೈಲು ನಿಂತಿತು” ಎಂದು ಪ್ರಯಾಣಿಕರಲ್ಲಿ ಒಬ್ಬರಾದ ವಿಕಾಸ್ ತಿಳಿಸಿದ್ದಾರೆ.