ಕಲ್ಲು ಒಡೆದು, ಅದಕ್ಕೆ ಸುಂದರ ಆಕೃತಿ ಕೊಟ್ಟು ಅಡುಗೆ ಮನೆಯಲ್ಲಿ ಉಪಯೋಗಿಸುವ ವಸ್ತುಗಳಾದ ಖಾಲಗಲ್ (ಅಸಗಲ್ಲ), ಬಿಸಕಲ್, ರುಬ್ಬುಗುಂಡು ಮಾಡಿ ಬದುಕುತ್ತಿರುವ ವ್ಯಾಪಾರಿಗಳ ಜೀವನ ಚಿಂತಾಜನಕವಾಗಿದೆ. ದಿನಕ್ಕೆ ಒಂದು ಕೂಡಾ ಮಾರಾಟ ಆಗದೇ ಇರುವುದರಿಂದ ದಿನದೂಡುವುದೇ ಕಷ್ಟಕರ ಸನ್ನಿವೇಶಕ್ಕೆ ತಂದೊಡ್ಡಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿ ವಡ್ಡರ ಸಮುದಾಯದ ಐದು ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಸುಮಾರು ಇಪ್ಪತ್ತು ವರ್ಷಗಳಿಂದ ವಾಸವಾಗಿದೆ. ತಲೆತಲಾಂತರಗಳಿಂದ ಉಳಿಸಿಕೊಂಡು ಬಂದ ಕಸುಬನ್ನು ಇನ್ನೂ ಕೂಡ ಮುಂದುವರಿಸಿಕೊಂಡಿದ್ದಾರೆ. ಆದರೆ ನಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ. ನಾವು ಮಾಡಿರುವ ವಸ್ತುಗಳು ಕೆಲವೊಮ್ಮೆ ಮಾರಾಟ ಆಗುತ್ತವೆ. ಒಂದೊಮ್ಮೆ ದಿನಕ್ಕೆ ಒಂದು ಕೂಡ ಮಾರಾಟ ಆಗುವುದಿಲ್ಲ ಎಂದು ಈ ದಿನ.ಕಾಮ್ ಜೊತೆಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನಾವು ಗುಡಿಸಲಲ್ಲಿ ವಾಸಿಸುತ್ತಿದ್ದೇವೆ. ಮಳೆಗಾಲದಲ್ಲಿ ಗುಡಿಸಲಲ್ಲಿ ಮಳೆ ನೀರು ನುಗ್ಗುತ್ತವೆ. ಹಾವು-ಚೇಳುಗಳು ಬರುತ್ತವೆ. ಭಯದಲ್ಲಿಯೇ ಬದುಕು ದೂಡುತ್ತಿದ್ದೇವೆ. ನಮ್ಮಿಂದ ಓಟು ಪಡೆಯುತ್ತಾರೆ. ಆದರೆ ನಮಗೆ ಸಹಾಯ ಮಾಡಲು ಸ್ಥಳೀಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳೀಯ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಎಂದು ವಡ್ಡರ ಸಮುದಾಯದ ಐದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
ಈ ದಿನ. ಕಾಮ್‌ನೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ವಡ್ಡರ ಸಮುದಾಯದ ಮಹಿಳೆ ಸುಶೀಲಾಬಾಯಿ, ” ನಮಗೆ ಸರಿಯಾದ ಮನೆ ಇಲ್ಲ. ಹೀಗಾಗಿ, ರಸ್ತೆಯ ಬದಿಯಲ್ಲೇ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಕಲ್ಲು ಒಡೆದು ವಸ್ತುಗಳು ಮಾಡುತ್ತೇವೆ. ಕೆಲವೊಮ್ಮೆ ಒಂದು ಕೂಡಾ ಮಾರಾಟ ಆಗುವುದಿಲ್ಲ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕೂಡ ಆಗುತ್ತಿಲ್ಲ” ಎಂದು ಹೇಳಿದರು.
“ಓಟು ಹಾಕುತ್ತೇವೆ. ಆಧಾರ್ ಕಾರ್ಡ್, ವೋಟರ್ ಐಡಿ ಇದ್ದರೂ ಕೂಡ ಇದುವರೆಗೆ ನಮಗೆ ರೇಷನ್ ಕಾರ್ಡ್ ಸಿಕ್ಕಿಲ್ಲ. ನಾವು ಇರುವ ಗುಡಿಸಲು ಮಾರ್ಗವಾಗಿಯೇ ಜನಪ್ರತಿನಿಧಿಗಳು ಹಾದು ಹೋಗುತ್ತಾರೆ. ಆದರೆ ನಮ್ಮ ಸಮಸ್ಯೆ ಕುರಿತು ವಿಚಾರಿಸುವುದಿಲ್ಲ” ಎಂದು ಆರೋಪಿಸಿದರು.

ಗುಂಡಪ್ಪ ಮಾತನಾಡಿ,”ಕಲ್ಲುಗಳನ್ನು ಚಿಂಚೋಳಿ ತಾಲೂಕಿನಿಂದ ತರಿಸಿಕೊಳ್ಳುತ್ತೇವೆ. ಅದಕ್ಕೆ ಹತ್ತು ಸಾವಿರ ಖರ್ಚು ಆಗುತ್ತದೆ. ಅದು ಹೊಟ್ಟೆಗೆ ಬಟ್ಟೆಗೆ ಸರಿಯಾಗುತ್ತೆ. ಇದರಿಂದ ಏನೂ ಕೂಡ ಉಳಿತಾಯ ಆಗುವುದಿಲ್ಲ. ಸರ್ಕಾರದಿಂದ ಒಂದು ಮನೆ ಕೊಟ್ಟರೆ ನಮಗೆ ಅನುಕೂಲ” ಎಂದು ಕೇಳಿಕೊಂಡರು.
ಇದನ್ನು ಓದಿದ್ದೀರಾ? ಸೊರಬ | ಸಚಿವ ಮಧು ಬಂಗಾರಪ್ಪರಿಂದ ಕುಬಟೂರು ಸರ್ಕಾರಿ ಶಾಲೆಗೆ ₹10 ಲಕ್ಷ ಮೌಲ್ಯದ ಪರಿಕರ ದೇಣಿಗೆ
ಈದಿನ.ಕಾಮ್ ದೊಂದಿಗೆ ಜಯಶ್ರೀ ಮಾತನಾಡಿ, “ಇದ್ರಲ್ಲಿ ನಮಗೆ ನೂರು ಇನ್ನೂರು ರೂಪಾಯಿ ಸಿಗುತ್ತೆ ಅಷ್ಟೇ. ನಮಗೆ ಸಹಾಯ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ. ಚುನಾವಣೆ ಮುಗಿದ ಬಳಿಕ ಯಾರೂ ಕೂಡ ನಮ್ಮ ನೆರವಿಗೆ ಬರುವುದಿಲ್ಲ” ನೋವು ತೋಡಿಕೊಂಡರು.

ಈ ದಿನ.ಕಾಮ್‌ನೊಂದಿಗೆ ನಾಗಮ್ಮ ಮಾತನಾಡಿ, “ಸುಮಾರು ಇಪ್ಪತ್ತೈದು ವರ್ಷಗಳಿಂದ ಕಲ್ಲು ಒಡೆದು ಒಳ್ಳು, ಬಿಸಕಲ್, ಖಾಲಗಲ್ ಮಾಡುತ್ತೇವೆ. ಐವತ್ತು, ನೂರು ಉಳಿತಾಯ ಆಗುತ್ತೆ ಅಷ್ಟೇ. ಸರ್ಕಾರ ನಮಗೊಂದು ಸ್ವಂತ ನಿವೇಶನ ಮಾಡಿಕೊಟ್ಟರೆ ಅನುಕೂಲ ಆಗುತ್ತದೆ” ಎಂದು ಕೇಳಿಕೊಂಡರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.