ಕರ್ನಾಟಕದ ರಾಜಕಾರಣಿಗಳಲ್ಲಿ ಇಲ್ಲಿವರೆಗೂ ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಕಳಂಕ ರಹಿತವಾಗಿಯೇ ಇದ್ದವರು ಮುಖ್ಯಮಂತ್ರಿ ಸಿದ್ಧರಾಮಯ್ಯ. ಬಡವರು, ಹಿಂದುಳಿದ ವರ್ಗದವರಿಗಾಗೇ ಹೆಚ್ಚು ಶ್ರಮಿಸಿದ್ದಾರೆ ಎಂಬ ಹೆಗ್ಗಳಿಕೆಯನ್ನು ಸಿದ್ದರಾಮಯ್ಯ ಗಳಿಸಿದ್ದಾರೆ. ಹಾಗೆಯೇ, ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿಗೊಳಿಸುವಲ್ಲಿಯೂ ಯಶಸ್ಸು ಕಂಡಿದ್ದಾರೆ. ಒಂದು ವರ್ಷದ ಆಡಳಿತವನ್ನು ಪೂರೈಸಿದ್ದಾರೆ.
ಇದೀಗ, ಅವರ ತಲೆಗೆ ಆಪಾದಿತ ಮುಡಾ ಹಗರಣವನ್ನು ಕಟ್ಟಲು, ಅವರ ಹೆಸರಿಗೆ ಕಳಂಕದ ಪಟ್ಟಿ ತಗುಲು ಹಾಕಲು ತಂತ್ರ-ಕುತಂತ್ರಗಳು ನಡೆಯುತ್ತಿವೆ. ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅಕ್ರಮವಾಗಿ ತಮ್ಮ ಪತ್ನಿಗೆ ನಿವೇಶನ ಕೊಡಿಸಿದ್ದಾರೆ ಎಂದು ಆರೋಪಿಸಿ, ಬಿಜೆಪಿಗರು ಪಾದಯಾತ್ರೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು ಕೂಡ ಜನಾಂದೋಲನ ಸಮಾವೇಶಗಳನ್ನು ನಡೆಸಿದೆ. ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಕಳಂಕರಹಿತವಾಗಿಯೇ ಬಂದಿರುವ ಹಾಗೂ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಹಿಂದುಳಿದ ಸಮುದಾಯದ ಸಿದ್ಧರಾಮಯ್ಯ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಲು ಹುನ್ನಾರಗಳು ನಡೆಯುತ್ತಿದೆ. ಅಂತಹ ಹುನ್ನಾರಕ್ಕೆ ಇದೀಗ ಮುಡಾ ದಾಳವಾಗಿದೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಿನಲ್ಲಿ ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ಮಡಿಕೇರಿಯ ಟಿ.ಜೆ. ಅಬ್ರಹಾಂ ಹಾಗೂ ಪ್ರದೀಪ್ ಎನ್ನುವವರು ದೂರು ನೀಡಿದ್ದರು. ದೂರು ನೀಡಿದ್ದ ದಿನವೇ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೋಟಿಸ್ ಜಾರಿ ಮಾಡಿದ್ದರು. ಇದೀಗ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶ ನೀಡಿದ್ದಾರೆ. ಅದೇಶ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನೆ ಮಾಡಿದ್ದಾರೆ. ಇದು, ಸಿದ್ದರಾಮಯ್ಯ ಅವರ ರಾಜಕೀಯ ಬದುಕಿನಲ್ಲಿ ದೊಡ್ಡ ಸವಾಲು ಮತ್ತು ಸಂಕಷ್ಟವನ್ನು ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ.

ಇನ್ನು ದೂರುದಾರರಾದ ವಕೀಲ ಟಿ.ಜೆ.ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಅವರನ್ನು ರಾಜಭವನಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಈಗಾಗಲೇ, ಪ್ರದೀಪ್ ರಾಜಭವನಕ್ಕೆ ತೆರಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಾಸಿಕ್ಯೂಷನ್ ಅಂದ್ರೆ ಏನು? ಮುಂದೆ ಏನಾಗಲಿದೆ?
ಸಾಮಾನ್ಯವಾಗಿ ಪ್ಯಾಸಿಕ್ಯೂಷನ್ ಎಂದರೆ ತನಿಖೆ ನಡೆಸಲು ಕಾನೂನು ಬದ್ಧ ಅನುಮತಿ ನೀಡುವುದಾಗಿದೆ. ಅದರಲ್ಲೂ ಮುಖ್ಯಮಂತ್ರಿಯ ವಿರುದ್ಧ ಕಾನೂನು ಕ್ರಮ, ತನಿಖೆ ನಡೆಸಲು ಪ್ರಾಸಿಕ್ಯೂಷನ್ ಅನುಮತಿ ಬಹಳ ಮುಖ್ಯವಾಗಿರುತ್ತದೆ. ಭಾರತೀಯ ರಾಜ್ಯಗಳಲ್ಲಿ ಸರ್ಕಾರದ ಮುಖ್ಯಸ್ಥರಾಗಿರುವ ಹಾಲಿ ಮುಖ್ಯಮಂತ್ರಿಯ ವಿರುದ್ಧ ಅಪರಾಧ ಚಟುವಟಿಕೆಗಳು ಅಥವಾ ಕಾನೂನಿನ ಉಲ್ಲಂಘನೆಗಾಗಿ ಕಾನೂನು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಸಿಎಂ ಸರ್ಕಾರದ ಮುಖ್ಯಸ್ಥರಾಗಿದ್ದು, ಸಂವಿಧಾನಾತ್ಮಕವಾಗಿ, ಆಡಳಿತಾತ್ಮಕವಾಗಿ ಉನ್ನತ ಶ್ರೇಣಿಯ ಸ್ಥಾನ ಹೊಂದಿರುವುದರಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವುದು ಸಾಂವಿಧಾನಿಕ ಕ್ರಮವಾಗಿದೆ.
ತನಿಖೆ ಹೇಗೆ ನಡೆಯಲಿದೆ?
ಪ್ರಾಸಿಕ್ಯೂಷನ್‌ಗೆ ಮುನ್ನ, ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಂತಹ ಏಜೆನ್ಸಿಗಳು ಸಾಮಾನ್ಯವಾಗಿ ಸಂಪೂರ್ಣ ತನಿಖೆಯನ್ನು ನಡೆಸುತ್ತವೆ. ತನಿಖೆಯು ಆರೋಪಗಳನ್ನು ಬೆಂಬಲಿಸಲು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಬೇಕು. ಅಂತಹ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮೋದಿಸಿದರೆ, ಪ್ರಕರಣವು ನ್ಯಾಯಾಲಯಕ್ಕೆ ಹೋಗುತ್ತದೆ. ಅಲ್ಲಿ ಮುಖ್ಯಮಂತ್ರಿಯನ್ನು ಇತರ ಆರೋಪಿಗಳಂತೆ ಪರಿಗಣಿಸಲಾಗುತ್ತದೆ. ನ್ಯಾಯಾಲಯದ ಪ್ರಕ್ರಿಯೆಯು ಆರೋಪ ಸಾಬೀತುಪಡಿಸುವುದು ಸಾಕ್ಷ್ಯವನ್ನು ಕಲೆಹಾಕುವುದು ಮತ್ತು ವಿಚಾರಣೆಯನ್ನು ನಡೆಸುವುದನ್ನು ಒಳಗೊಂಡಿರುತ್ತದೆ.
ಸಿಎಂ ಮೇಲಿರುವ ಆರೋಪವು ಮೇಲ್ನೋಟಕ್ಕೆ ಸತ್ಯ ಎಂದು ಕಂಡು ಬಂದರೆ ಕಾನೂನು ಪ್ರಕ್ರಿಯೆಗಳು ಪ್ರಾರಂಭವಾಗುವ ಮೊದಲು ರಾಜ್ಯಪಾಲರಂತಹ ಮೇಲಿನ ಶ್ರೇಣಿಯ ಅಧಿಕಾರಿಗಳಿಂದ ಅನುಮತಿ ಅಗತ್ಯವಾಗುತ್ತದೆ. ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಮತ್ತು ವಸ್ತುನಿಷ್ಠ ಸಾಕ್ಷ್ಯವನ್ನು ಆಧರಿಸಿದೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇನ್ನು ಮುಖ್ಯಮಂತ್ರಿಗಳು ಇತರ ಸಾರ್ವಜನಿಕ ಅಧಿಕಾರಿಗಳಂತೆ, ಕಾನೂನು ಕ್ರಮದಿಂದ ಸಂಪೂರ್ಣ ವಿನಾಯಿತಿ ಹೊಂದಿಲ್ಲ. ಆದಾಗ್ಯೂ, ಕೆಲವು ರಕ್ಷಣೆಗಳಿವೆ. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ ಕಾನೂನು ಕ್ರಮವನ್ನು ಪ್ರಾರಂಭಿಸುವ ಮೊದಲು ರಾಜ್ಯದ ರಾಜ್ಯಪಾಲರ ಒಪ್ಪಿಗೆ ಅಗತ್ಯವಾಗಬಹುದು.
ಭ್ರಷ್ಟಾಚಾರ, ಕ್ರಿಮಿನಲ್ ದುಷ್ಕೃತ್ಯ, ಅಧಿಕಾರದ ದುರುಪಯೋಗ, ಚುನಾವಣಾ ಅಪರಾಧಗಳಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಯುತ್ತೆ. ಇನ್ನು ಕಾನೂನು ಜಾರಿ ಸಂಸ್ಥೆಗಳು ಅಥವಾ ವಿಶೇಷ ತನಿಖಾ ತಂಡಗಳಿಂದ ತನಿಖೆ ನಡೆಯುತ್ತದೆ. ಸಿಎಂ ವಿರುದ್ಧ ನ್ಯಾಯಾಲಯದಲ್ಲಿ ಔಪಚಾರಿಕ ಆರೋಪಗಳನ್ನು ದಾಖಲಿಸಲಾಗುತ್ತದೆ. ಅಪರಾಧಿಯೋ ಅಥವಾ ನಿರಪರಾಧಿಯೋ ಅಂತ ನಿರ್ಧರಿಸಲು ನ್ಯಾಯಾಂಗ ಪ್ರಕ್ರಿಯೆ ನಡೆಸಲಾಗುತ್ತದೆ. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದರೆ, ಸಿಎಂ ಜೈಲುವಾಸ ಸೇರಿದಂತೆ ದಂಡವನ್ನು ಎದುರಿಸುವ ಸಾಧ್ಯತೆ ಇರುತ್ತದೆ.
ಇನ್ನು, ಮುಡಾ ಹಗರಣಕ್ಕೆ ಬರೋದಾದ್ರೆ, ಸಿಎಂ ವಿರುದ್ಧ ಮೂಡಾ ಸೈಟ್ ಹಂಚಿಕೆ ಹಗರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ಸಿಕ್ಕ ನಂತರ ಮುಂದೇನು ಅನ್ನೋ ಪ್ರಶ್ನೆ ಎದುರಾಗಿದೆ. ಪೂರ್ವಾನುಮತಿ ದಾಖಲೆಯನ್ನು ಮೊದಲಿಗೆ ದೂರುದಾರರು ಪಡೆದುಕೊಳ್ಳಲಿದ್ದಾರೆ. ಆ ಬಳಿಕ, ಪೂರ್ವಾನುಮತಿ ದಾಖಲೆಯನ್ನು ದೂರುದಾರರು ಪೊಲೀಸರಿಗೆ ನೀಡಲಿದ್ದಾರೆ. ಪೂರ್ವಾನುಮತಿ ಕೋರ್ಟ್ ಗೆ ಸಲ್ಲಿಕೆಯಾದಲ್ಲಿ ತನಿಖೆಗೆ ಆದೇಶ ಮಾಡುವ ಸಾಧ್ಯತೆ ಇದೆ.
ಈ ವರದಿ ಓದಿದ್ದೀರಾ?: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ | ಗೋಕಾಕ್ ಮಾದರಿ ಚಳವಳಿಗೆ ಸಜ್ಜಾಗುವ ಕಾಲ ಬಂದಿದೆ
ಈಗಾಗಲೇ ಕೋರ್ಟ್‌ನಲ್ಲಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗಸ್ಟ್ 20ರಂದು ನಡೆಯಲಿದೆ. ಸೋಮವಾರವೇ ಪ್ರಾಸಿಕ್ಯೂಷನ್ ಅನುಮತಿಯನ್ನು ಕೋರ್ಟ್‌ಗೆ ಸಲ್ಲಿಸಿದರೆ, ಮಂಗಳವಾರ ಆದೇಶ ಹೊರಬೀಳಲಿದೆ. ಟಿ.ಜೆ ಅಬ್ರಹಾಂ ಅರ್ಜಿ ವಿಚಾರಣೆ ಆ.21ರಂದು ನಡೆಯಲಿದೆ. ಒಂದು ವೇಳೆ, ಪ್ರಾಸಿಕ್ಯೂಷನ್ ಮತ್ತು ಆರೋಪಗಳ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯವು ತನಿಖೆಗೆ ಆದೇಶಿಸಿದರೆ, ಸಿದ್ದರಾಮಯ್ಯ ವಿರುದ್ದ ಎಫ್ಐಆರ್ ದಾಖಲಾಗಲಿದೆ.
ಇನ್ನು, ಪ್ರಾಸಿಕ್ಯೂಷನ್ಅನ್ನು ಅನುಮತಿ ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೆಟ್ಟಿಲೇರಬಹುದು. ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಅನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಸಿದ್ದರಾಮಯ್ಯ ಕೂಡ ಸಿದ್ದತೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ ಜೊತೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ನಡೆಗಳ ಬಗ್ಗೆ ಅವರು ಸಮಾಲೋಚಿಸುತ್ತಿದ್ದಾರೆ. ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ರಾಜ್ಯಪಾಲರ ನಡೆಗೆ ಕಾಂಗ್ರೆಸ್ ನಾಯಕರ ಕಿಡಿ
ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ, “ಯಾವ ರೀತಿಯಲ್ಲಿ ಗವರ್ನರ್ ಅನುಮತಿ ಕೊಟ್ಟಿದ್ದಾರೆಂದು ಗೊತ್ತಿಲ್ಲ. ಕಾನೂನು ಹೋರಾಟ ಮಾಡುತ್ತೇವೆ. ಕೇಂದ್ರದಿಂದ ರಾಜ್ಯಪಾಲ ಗೆಹ್ಲೋಟ್ ಅವರಿಗೆ ಒತ್ತಡ ಇತ್ತು. ಸಿಎಂ ಸಿದ್ದರಾಮಯ್ಯ ಮೌಖಿಕವಾಗಿ, ಪತ್ರ ವ್ಯವಹಾರ ಮಾಡಿಲ್ಲ. ಈ ಬಗ್ಗೆ ನಾವು ರಾಜ್ಯಪಾಲರಿಗೆ ಉತ್ತರ ಕೊಟ್ಟಿದ್ದೆವು. ನಾವು ಶೋಕಾಸ್ ನೋಟಿಸ್ ಗೆ ಎಳೆ ಎಳೆಯಾಗಿ ಉತ್ತರ ಕೊಟ್ಟಿದ್ದೆವು. ಆದರೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿದೆ” ಎಂದು ಆರೋಪಿಸಿದ್ದಾರೆ.
“ಶೋಕಾಸ್ ನೋಟಿಸ್ ಕೊಟ್ಟಾಗಲೇ ಇದು ಷಡ್ಯಂತ್ರ ಎಂಬುದು ಗೊತ್ತಾಯ್ತು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ. ಬಿಜೆಪಿಯವರು ಸಂವಿಧಾನ ಬಾಹಿರ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.