ವಸತಿ ನಿಲಯಗಳಲ್ಲಿ ಓದುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರು. ಸರಕಾರ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ನಿಲಯದ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಒದಗಿಸಲು ಸಾಧ್ಯವಾಗದ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ವಾರ್ಡನ್ ಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಹಾರ ಪೂರೈಕೆ ಮಾಫಿಯಾ ನಿಲ್ಲಿಸಿ : ಹಾಸ್ಟೆಲ್ ಗಳಿಗೆ ಆಹಾರ ಪೂರೈಕೆಯಲ್ಲಿ ದೊಡ್ಡ ಮಾಫಿಯಾ ನಡೆಯುತ್ತಿರುವುದು ನಮಗೆ ಗೊತ್ತಿದೆ. ಇದೆಲ್ಲವನ್ನೂ ಕೂಡಲೇ ನಿಲ್ಲಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಅನುದಾನ ನೀಡುತ್ತಿದೆ. ಹಾಸ್ಟೆಲ್ ಮೇಲುಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು ಗುತ್ತಿಗೆದಾರರ ಹಣದಾಹಕ್ಕೆ ದಾಸರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡದೆ ಹೋದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಹಾಸ್ಟೆಲ್ ಮಕ್ಕಳಿಗೆ ಆಹಾರ ಸರಬರಾಜು ಮಾಡುವಾಗ ಸ್ಥಳದಲ್ಲಿಯೇ ಗುಣಮಟ್ಟ ಪರೀಕ್ಷಿಸಿ ಪಡೆಯಬೇಕು. ಮುಂದಿನ ದಿನಗಳಲ್ಲಿ ನಾನು ಸೇರಿದಂತೆ ಉಪವಿಭಾಗಾಧಿಕಾರಿ, ತಹಶಿಲ್ದಾರ್ ಗಳು ಹಾಸ್ಟೆಲ್ ಗಳಲ್ಲಿಯೇ ವಾಸ್ತವ್ಯ ಮಾಡತ್ತೇವೆ. ದೂರುಗಳು ಕಂಡುಬಂದರೆ ತಪ್ಪಿತಸ್ತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಇಂದಿನಿಂದಲೇ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಹಾಸ್ಟೆಲ್ ಗಳಿಗೆ ಆಹಾರ ಪೂರೈಕೆ ಮಾಡುವವರು ಯಾರು ಅಂತ ಅವರ ಮುಖ ಸಹ ನೋಡಿಲ್ಲ. ನೀವುಗಳು ಮಾಡೋ ತಪ್ಪುಗಳನ್ನು ನೋಡಿ ಕಣ್ಣುಮುಚ್ಚಿ ಕುಳಿತುಕೊಳ್ಳಲಾಗುವುದಿಲ್ಲ. ಈ ಸಭೆಯಲ್ಲಿ ಮಾಹಿತಿ ಕೊಟ್ಟು ಮುಂದೆ ನೇರವಾಗಿ ಹಾಸ್ಟೆಲ್ ಗಳಿಗೆ ಬರತ್ತೇವೆ. ನಾವು ಬಂದಾಗ ದೂರು ಬಂದರೆ ಪರಿಣಾಮ ಸರಿ ಇರಲ್ಲ. ಪ್ರತಿ ಹಾಸ್ಟೆಲ್ ನೋಟೀಸ್ ಬೋರ್ಡ್ ನಲ್ಲಿ ಶಾಸಕರು, ಎಂಎಲ್ಸಿ, ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಕುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಿಸುವುದು ನಮ್ಮ ಜವಾಬ್ದಾರಿ : ಭೈರತಿ ಸುರೇಶ್
ಸಭೆಯಲ್ಲಿ ಉಪವಿಭಾಗಾಧಿಕಾರಿ ಮೈತ್ರಿ, ತಹಶಿಲ್ದಾರ್ ನಯನಾ, ತಾಲೂಕು ಪಂಚಾಯತಿ ಇಒ ಮಂಜುನಾಥ್, ಹಿಂದುಳಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಜೆಡಿ ಶ್ರೀನಿವಾಸನ್, ತಾಲೂಕು ಸಹಾಯಕ ನಿರ್ದೇಶಕ ಚನ್ನಬಸಪ್ಪ, ಸೇರಿದಂತೆ ವಾರ್ಡನ್ ಗಳು ಸಭೆಯಲ್ಲಿ ಇದ್ದರು.