ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಸಿದ್ದರಾಮಯ್ಯ ಅವರು ಬಹಳ ಆತ್ಮೀಯರು. ಒಟ್ಟಿಗೆ ಕೆಲಸ ಮಾಡಿದ್ದೇವೆ. ಒಂದು ದಿನದ ಹಿಂದಷ್ಟೇ ಮಾತನಾಡಿದ್ದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರ ಕಾನೂನು ಪ್ರಕಾರ ನಡೆಯುತ್ತದೆ. ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ನುರಿತ ರಾಜಕಾರಣಿ. ಈ ವಿಚಾರದಲ್ಲಿ ಏನು ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಸಾಹೇಬರಿಗೆ ಚೆನ್ನಾಗಿ ಗೊತ್ತಿದೆ” ಎಂದರು.
“ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಕೆಲಸ ಕಾನೂನು ಮಾಡುತ್ತೆ, ಸಿದ್ದರಾಮಯ್ಯ ಸಾಹೇಬ್ರು ಸಹ ಅವರೇನು ಮಾಡಬೇಕೋ ಮಾಡ್ತಾರೆ. ಸತ್ಯ, ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ, ಅದು ಯಾರ್ಯಾರಿಗೆ ಏನಾಗಿದೆ ಅನ್ನೋದಕ್ಕಿಂತ ಹೆಚ್ಚಾಗಿ, ಕಾನೂನು ತನ್ನ ಕೆಲಸವನ್ನು ತಾನು ಮಾಡುತ್ತದೆ” ಎಂದು ಅಭಿಪ್ರಾಯಿಸಿದರು.
ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, “ನನಗೂ 45 ವರ್ಷ ರಾಜಕೀಯ ಅನುಭವ ಇದೆ. ಒತ್ತಾಯ ಮಾಡೋದು, ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ದಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ ನಿನ್ನೆಯಷ್ಟೆ ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದನ್ನು ನಾನು ಬಹಳ ಆನಂದದಿಂದ ಸ್ವೀಕರಿಸಿದ್ದೇನೆ” ಎಂದು ಹೇಳಿದರು
