ವೃದ್ಧೆಯೊಬ್ಬಳ ಮನೆಯಲ್ಲಿ ಕಳ್ಳತನವಾಗಿದ್ದು, ಹತ್ತಿರದ ಠಾಣೆಗೆ ದೂರು ನೀಡಿದರೂ ಇದುವರೆಗೆ ದೂರು ದಾಖಲಿಸದೆ ನಿರ್ಲಕ್ಷ್ಯ ತೋರುತ್ತಿರುವ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು ಚಂದಗಾಲು ಗ್ರಾಮದ ಪ್ಯಾಕ್ಟರಿ ಸರ್ಕಲ್ ಹತ್ತಿರ ವಾಸವಿರುವ ಲಕ್ಷ್ಮಮ್ಮ(70) ಎಂಬ ವೃದ್ಧೆಯ ಮನೆಯಲ್ಲಿ ಆಗಸ್ಟ್ 16 ರಂದು ರಾತ್ರಿ ಬೀಗ ಹೊಡೆದು ಕಳ್ಳತನ ಮಾಡಲಾಗಿತ್ತು. ವೃದ್ಧೆ ಬೇರೆ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಮನೆ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಮನೆಯಲ್ಲಿದ್ದ ನಗದು ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿಲಾಗಿದ್ದು, ಪೊಲೀಸರು ಇದುವರೆಗೆ ಸ್ಥಳದ ಮಹಜರ್ ಮಾಡದೆ ನಿರ್ಲಕ್ಷ್ಯ ತೋರಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಮಾತನಾಡಿರುವ ವೃದ್ಧೆ ಲಕ್ಷ್ಮಮ್ಮ, ದೊಡ್ಡಬ್ಯಾಡರಹಳ್ಳಿಯ ಮಗಳ ಮನೆಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಹೋಗಿದ್ದಾಗ ಯಾರೋ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮನೆಯ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿತ್ತು. ಮನೆಯಲ್ಲಿಟ್ಟಿದ ಪಿಂಚಣಿ ಹಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದೇ ಗ್ರಾಮದಲ್ಲಿ ಎರಡು ಮೂರು ಕಳ್ಳತನಗಳಾಗಿವೆ. ಆದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮೂರಿನ ಆಂಜನೇಯ ಗುಡಿಯಲ್ಲಿ ಕಳ್ಳತನವಾಗಿತ್ತು. ನಂತರ ಗೀತಾ ಎಂಬುವರ ಮನೆಯಲ್ಲೂ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ. ಆದರೂ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿರಲಿ ಸ್ಥಳ ಮಹಜರ್ ಕೂಡ ಮಾಡಿಲ್ಲ. ನಾನು ಹಿರಿಯ ನಾಗರೀಕಳಾಗಿದ್ದು ಇದರಿಂದ ನನಗೆ ತುಂಬಾ ನೋವುಂಟಾಗಿರುತ್ತದೆ ಎಂದು ಅಳಲು ತೋಡಿಕೊಂಡರು.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಚಂದಗಾಲು ಗ್ರಾಮದ ವಕೀಲ ವೆಂಕಟೇಶ್, ನನ್ನ ಮನೆಯ ಹತ್ತಿರ ಇರುವ ವಯಸ್ಸಾದ ಲಕ್ಷ್ಮಮ್ಮನ ಮನೆಯಲ್ಲಿ ಕಳ್ಳತನ ಆಗಿದೆ. ಪಕ್ಕದ ಗುಡಿಯಲ್ಲಿ ಹಾಗೂ ಇನ್ನೊಂದು ಮನೆಯಲ್ಲಿ ಕೂಡ ಕಳ್ಳತನ ಆಗಿದೆ. ನಾನೇ ದೂರು ಟೈಪ್ ಮಾಡಿ ಕಳುಹಿಸಿರುತ್ತೇನೆ. ಮಾಹಿತಿ ಹೋಗಿ 24 ಗಂಟೆಯಾದರೂ ಪೊಲೀಸರು ಇತ್ತ ತಿರುಗಿ ನೋಡಿಲ್ಲ. ಇದೇ ಕಳ್ಳತನ ಅಂತಲ್ಲ ತಾಲ್ಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ಕಳ್ಳತನ ನಡೆದರೂ ಎಫ್‌ಐಆರ್ ಮಾಡದೆ, ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಳ್ಳತನ ಪ್ರಕರಣಗಳಲ್ಲಿ ಎಫ್ಐಆರ್ ಮಾಡದೇ ಎನ್‌ಸಿಆರ್ ಕೊಡುವುದು. ಬಾಧಿತರಿಗೆ ಕಾಣೆಯಾಗಿದೆ ಅಂತ ಬರೆದುಕೊಡುವುದು. ನಡೆಯುತ್ತಿರುವ ವಾಸ್ತವ ಅಂಶಗಳಿಗೆ ಪರಿಹಾರ ಕೊಡದೆ ಮುಚ್ಚಿಹಾಕಿಕೊಂಡು ಬರುತ್ತಿರುವುದು ಕಳ್ಳತನ ಮಾಡುವವರಿಗೆ ಉತ್ತೇಜನ ಕೊಟ್ಟಂತಾಗುತ್ತಿದೆ. ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕು. ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ| ಆ.20ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮ್ಯಾರಥಾನ್
ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಎಸ್ಐ ಬಿ.ಜಿ.ಕುಮಾರ್ ಮಾತನಾಡಿ, ನಮ್ಮ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಅವಶ್ಯಕತೆ ಇದ್ದರೆ ಮಾತ್ರ ಎಫ್‌ಐಆರ್ ಹಾಕಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.